ADVERTISEMENT

ತರಕಾರಿ ತವರಿನಲ್ಲೇ ಜೇಬಿಗೆ ಕತ್ತರಿ !

ಹೆಚ್ಚಿದ ಬೆಲೆ: ಬಸವಳಿದ ಗ್ರಾಹಕರು

ಪ್ರಜಾವಾಣಿ ವಿಶೇಷ
Published 18 ಜೂನ್ 2013, 5:52 IST
Last Updated 18 ಜೂನ್ 2013, 5:52 IST

ಮಾಲೂರು: ತರಕಾರಿ ತವರಾದ ತಾಲ್ಲೂಕಿನಲ್ಲಿ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ತರಕಾರಿ ಬೆಳೆಯುವಲ್ಲಿ ಇಲ್ಲಿನ ರೈತರು ಜಿಲ್ಲೆಯಲ್ಲೇ ಹೆಸರು ಗಳಿಸಿದ್ದಾರೆ. ತಾಲ್ಲೂಕಿನಾದ್ಯಂತ ಜಲಕ್ಷಾಮ ಆವರಿಸಿದ್ದರೂ ಬಿಡದೆ ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಸಾವಿರ ಅಡಿ ಆಳದ ಕೊಳವೆ ಬಾವಿಗಳಿಂದ ನೀರು ಸಂಗ್ರಹಿಸಿ ತರಕಾರಿ ಬೆಳೆಯುತ್ತಿದ್ದಾರೆ.

ಇಲ್ಲಿ ಬೆಳೆಯಲಾಗುವ ಎಲೆಕೋಸು, ಹೂಕೋಸು, ಹುರಳಿಕಾಯಿ, ಬೀಟ್‌ರೋಟ್, ಕ್ಯಾರೆಟ್ ಮತ್ತು ಟೊಮೆಟೊ ತರಕಾರಿಗಳನ್ನು ಲಾರಿ ಮತ್ತು ರೈಲುಗಾಡಿಗಳ ಮುಖಾಂತರ ರಾಜ್ಯ ಮತ್ತು ಅಂತರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ದೊಡ್ಡಕಲ್ಲಹಳ್ಳಿ ಗ್ರಾಮದ ರೈತ ಸಂಪತ್ ಬೆಳೆದಿರುವ ವಿವಿಧ ಬಣ್ಣಗಳ ದೊಣ್ಣಮೆಣಸಿನಕಾಯಿಯನ್ನು ವಿಮಾನದ ಮುಖಾಂತರ ದುಬೈಗೆ ಸರಬರಾಜು ಮಾಡುತ್ತಿರುವುದು ವಿಶೇಷ.

ವಿಪರ್ಯಾಸವೆಂದರೆ ಇಲ್ಲಿನ ತರಕಾರಿ ವ್ಯಾಪಾರಸ್ಥರು ಬೆಂಗಳೂರು, ಕೋಲಾರ  ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ನಾಗರಿಕರಿಗೆ ಉತ್ತಮ ತರಕಾರಿಗಳು ಸಿಗುತ್ತಿಲ್ಲ. ಸಕ್ಕರೂ ದುಬಾರಿ ಹಣ ಕೊಟ್ಟು ಖರೀದಿಸಬೇಕಾದ ಸನ್ನಿವೇಶವಿದೆ.

ಪ್ರತಿ ತಿಂಗಳೂ ತರಕಾರಿ ಬೆಲೆ ಹೆಚ್ಚಾಗುತ್ತಿದೆ. ಮಾರುಕಟ್ಟೆಗೆ ತರಕಾರಿ ಕೊಳ್ಳಲು ಹೋದ ಜನಸಾಮಾನ್ಯರು ಕೇವಲ ನೋಡಿಕೊಂಡು ಹಿಂದಿರುಗುವ ಪರಿಸ್ಥಿತಿ ಉಂಟಾಗಿದೆ.

ಮೇ ಕೊನೆಯ ವಾರದಲ್ಲಿ ಗಗನಕ್ಕೇರಿದ ತರಕಾರಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂಗಾರು ಮಳೆ ಭರ್ಜರಿಯಾಗಿ ಆರಂಭವಾದರೆ ತರಕಾರಿ ಬೆಲೆಗಳು ಕಡಿಮೆಯಾಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ. ವರುಣದೇವ ಮಾತ್ರ ತರಕಾರಿ ಬೆಲೆಯ ಬಿಸಿಗೆ ತಣ್ಣೀರು ಸುರಿಯಬಹುದು.

ತರಕಾರಿ ಬೆಲೆ:
2 ದಿನಗಳ ಹಿಂದೆ ಟೊಮ್ಯಾಟೋ ಬೆಲೆ ಕೆ.ಜಿಗೆ 40 ರೂಪಾಯಿ ಇತ್ತು ಭಾನುವಾರ ಅದರ ಬೆಲೆ 80 ರೂಪಾಯಿ ಆಗಿತ್ತು. ಹುರಳಿಕಾಯಿ ಕೆ.ಜಿಗೆ 120 ರೂಪಾಯಿ, ಹಸಿಮೆಣಸಿನಕಾಯಿ ಕೆ.ಜಿ.140 ರೂಪಾಯಿ , ಶುಂಠಿ ಕೆ.ಜಿಗೆ 400 ರೂಪಾಯಿ, ಕ್ಯಾರೆಟ್ 40 ರೂಪಾಯಿ, ಬದನೇಕಾಯಿ 40 ರೂಪಾಯಿ ಮತ್ತು ಹಸಿ ಬಟಾಣಿ ಕೆ.ಜಿಗೆ 120ರೂಪಾಯಿಗೆ ಮಾರಾಟವಾಗುತ್ತಿದೆ.

ಕಡಿಮೆ ದರಕ್ಕೆ ಯಾವ ತರಕಾರಿ ದೊರೆಯುತ್ತದೆ ಎಂದು ಜನ ಮಾರುಕಟ್ಟೆ ಪೂರ್ತಿ ಸುತ್ತಿದರೂ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನನಿತ್ಯದ ಬೆಲೆ ಏರಿಕೆ ಜೊತೆಗೆ ತರಕಾರಿ ಕೊಳ್ಳುವುದು ಗ್ರಾಹಕರಿಗೆ ಹೊರೆಯಾಗಿದೆ.

ಕಾರಣ: ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಇಲ್ಲಿನ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ತರಕಾರಿಗಳನ್ನು ದೂರದ ಪ್ರದೇಶಗಳಿಗೆ ಲಾರಿಗಳ ಮುಖಾಂತರ ಸರಬರಾಜು ಮಾಡುತ್ತಿರುವುದು ಸಮಸ್ಯೆಗೆ ಒಂದು ಕಾರಣ.  ಸಣ್ಣ ಪುಟ್ಟ ರೈತರು ತಾವು ಬೆಳೆದ ತರಕಾರಿಗಳನ್ನು ಸ್ಥಳೀಯ ರಿಲಯನ್ಸ್ ಮತ್ತು ನಾಮಧಾರಿ ಸಂಸ್ಥೆಗಳಿಗೆ ಸರಬರಾಜು ಮಾಡುತ್ತಿರುವುದು ಮತ್ತೊಂದು ಕಾರಣ. ಅಂತರ್ಜಲ ಮಟ್ಟ ಕುಸಿತದಿಂದ ಇಲ್ಲಿನ ರೈತರು ತರಕಾರಿ ಬೆಳೆಯುವುದನ್ನು ಕೈಬಿಟ್ಟಿರುವುದು ಮೂರನೇ ಕಾರಣ.

ಇಲ್ಲಿನ ರೈತರು ರಾಜ್ಯ ಮತ್ತು ಅಂತರಾಜ್ಯ ಮಾರುಕಟ್ಟೆಗಳಿಗೆ ತರಕಾರಿ ಸರಬರಾಜು ಮಾಡುವುದರಿಂದ ತರಕಾರಿ ಸಿಗದೆ ಬೆಂಗಳೂರು ಮತ್ತು ಕೋಲಾರ ಮಾರುಕಟ್ಟೆಗಳಿಂದ ಖರೀದಿಸಿದಿ ತಂದು ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶಂಕರ್.

ದಿನಸಿ ಬೆಲೆಗಳು ಗಗನಕ್ಕೇರಿವೆ. ಜೊತೆಗೆ ತರಕಾರಿಗಳ ಬೆಲೆಯೂ ಸಹ ಏರಿಕೆಯಾಗಿರುವುದರಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ ಎಂಬುದು ನಿವೃತ್ತ ಶಿಕ್ಷಕ ನಾಗರಾಜ್ ಅವರ ಅಭಿಪ್ರಾಯ.

ಈ ಹಿಂದೆ 50 ರೂಪಾಯಿ ಇದ್ದರೆ ಬುಟ್ಟಿ ತುಂಬಾ ತರಕಾರಿ ಸಿಗುತ್ತಿತ್ತು. ಆದರೆ ಈಗ 100 ರೂಪಾಯಿ ಕೊಟ್ಟರೂ ಒಂದೆರಡು ತರಕಾರಿ ಸಿಗುವುದು ದುಸ್ತರವಾಗಿದೆ ಎಂದು ಅವರು ವಿಷಾದಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.