ADVERTISEMENT

ತಾ.ಪಂ. ಸಭೆಯಲ್ಲಿ ಪೌಷ್ಟಿಕ ಆಹಾರದ ಚರ್ಚೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 8:15 IST
Last Updated 11 ಅಕ್ಟೋಬರ್ 2012, 8:15 IST

ಮಾಲೂರು: ತಾಲ್ಲೂಕಿನ ಕೆಲವು ಅಂಗವಾಡಿ ಕೇಂದ್ರಗಳಿಗೆ ಸರಬರಾಜಾಗುವ ಪೌಷ್ಟಿಕ ಆಹಾರದಲ್ಲಿ ಹುಳುಗಳು ಕಾಣಿಸಿಕೊಂಡಿವೆ. ಇಂಥ ಆಹಾರ ಸೇವಿಸುವ ಮಕ್ಕಳ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ ಆರೋಪಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ದೊಮ್ಮಲೂರು, ಅರಸನಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಇಂಡೆಂಟ್‌ಗಿಂತಲೂ ಹೆಚ್ಚು ಪೌಷ್ಟಿಕ ಆಹಾರ ಸರಬರಾಜು ಮಾಡಲಾಗದೆ. ಆಹಾರ ದಾಸ್ತಾನು ಇರಿಸಿದ್ದ ಪೌಷ್ಟಿಕ ಆಹಾರದಲ್ಲಿ ಹುಳುಗಳು ಕಾಣಿಸಿಕೊಂಡಿದ್ದರೂ ಅದೇ ಆಹಾರವನ್ನು ಮತ್ತೆ ಮಕ್ಕಳಿಗೆ ನೀಡುತ್ತಿದ್ದಾರೆ ಎಂದು ದೂರಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ನೀಡುವ ಪೌಷ್ಟಿಕ ಆಹಾರದ ದಾಸ್ತಾನು ಕುರಿತು ಪ್ರತಿ ತಿಂಗಳು ಮಾಹಿತಿ ನೀಡಬೇಕು. ಪ್ರಸ್ತುತ ಪ್ರತಿ ತಿಂಗಳ 29ನೇ ತಾರೀಖು ಸಂಜೆ 4 ಗಂಟೆಗೆ ಆಹಾರ ವಿತರಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತರಿಗೆ ತೊಂದರೆಯಾಗುತ್ತಿದೆ.

ಇನ್ನು ಮುಂದೆ ಪ್ರತಿ ತಿಂಗಳ 20ನೇ ತಾರೀಖಿನಂದು ಮಧ್ಯಾಹ್ನ 2 ಗಂಟೆಯೊಳಗೆ ಆಹಾರ ಸಾಮಗ್ರಿ ವಿತರಿಸುವ ವ್ಯವಸ್ಥೆ ಜಾರಿ ಮಾಡಬೇಕು ಎಂದು ಸಲಹೆ ನೀಡಿದರು.

ಪೌಷ್ಠಿಕ ಆಹಾರದ ಪೊಟ್ಟಣವನ್ನು 3 ತಿಂಗಳ ಅವಧಿಯೊಳಗೆ ಉಪಯೋಗಿಸಬೇಕು. ಪೌಷ್ಟಿಕ ಆಹಾರದ ಪೊಟ್ಟಣ ತಯಾರಿಸುವ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡು ಬಂದಿದೆ. ಆಹಾರದ ಪೊಟ್ಟಣಗಳನ್ನು ಪರೀಕ್ಷೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದರು.

ತಾ.ಪಂ ಅಧ್ಯಕ್ಷ ಗೋಪಾಲಗೌಡ ಮಾತನಾಡಿ ಮುಂದಿನ ದಿನಗಳಲ್ಲಿ ಆಹಾರ ಸಾಮಗ್ರಿಗಳ ವಿತರಣೆ ಸಂದರ್ಭದಲ್ಲಿ ತಾ.ಪಂ ಸದಸ್ಯರು ಸ್ಥಳದಲ್ಲಿರಬೇಕು. ಪೌಷ್ಟಿಕ ಆಹಾರ ತಯಾರಿಕೆ ಘಟಕಕ್ಕೆ ಭೇಟಿ ನೀಡುವಾಗ ವಿಡಿಯೋ ಚಿತ್ರೀಕರಣ ಮಾಡಿಸಬೇಕೆಂದು ತಿಳಿಸಿದರು.

ಬಿಸಿಎಂ ಇಲಾಖೆಯ ಅಧಿಕಾರಿ ಸಭೆಗಳಿಗೆ ಗೈರುಹಾಜರಾಗುತ್ತಿದ್ದು, ಇಲಾಖೆ ಬಗ್ಗೆ ಮಾಹಿತಿ ಸಿಗದಂತಾಗಿದೆ. ಯಾವುದೇ ಮಾಹಿತಿ ನೀಡದೆ ಗೈರುಹಾಜರಾಗುತ್ತಿರುವ ಅಧಿಕಾರಿಯನ್ನು ವರ್ಗ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ರಜನಿಕಾಂತ್‌ಮಲ್ಲಿ, ಸಾಮಾಜಿಕ ಸ್ಥಾಯಿ ನ್ಯಾಯ ಸಮಿತಿ ಅಧ್ಯಕ್ಷ ಎಸ್.ವಿ.ಲೊಕೇಶ್, ಉಪಾಧ್ಯಕ್ಷೆ ಅಮರಾವತಿ, ಅಧಿಕಾರಿ ಲೋಕಪಾಲ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.