ADVERTISEMENT

ತಿಪ್ಪನೆಟ್ಟಿ ಕೆರೆ ತಾತ್ಸಾರ

ಪ್ರಜಾವಾಣಿ ವಿಶೇಷ
Published 13 ಜೂನ್ 2012, 6:10 IST
Last Updated 13 ಜೂನ್ 2012, 6:10 IST

ಕೆಜಿಎಫ್: ಸುಮಾರು ಮುನ್ನೂರು ವರ್ಷಗಳ ಇತಿಹಾಸವಿರುವ ಇಲ್ಲಿನ ಕೆರೆಯೊಂದು ತಾತ್ಸಾರಕ್ಕೆ ತುತ್ತಾಗಿದೆ. ನಗರ ಹೊರವಲಯದ ಮಾರಿಕುಪ್ಪಂ, ಮಸ್ಕಂ, ಕಂಬಂಪಲ್ಲಿ ಅಚ್ಚುಕಟ್ಟಿನಲ್ಲಿರುವ ತಿಪ್ಪನೆಟ್ಟಿ ಕೆರೆಯ ಕೋಡಿ ಕಟ್ಟೆ ಒಡೆದುಹೋಗಿ ಆರು ವರ್ಷಗಳಾಗಿವೆ. ಆದರೆ ಅದನ್ನು ದುರಸ್ತಿಗೊಳಿಸದ ಕಾರಣ, ಇಡೀ ಕೆರೆ ಇಂದು ಜಾಲಿ ಮತ್ತಿತರ ಅನುಪಯುಕ್ತ ಸಸ್ಯಗಳ ಬೀಡಾಗಿ ಪರಿವರ್ತಿತಗೊಂಡಿದೆ.

ತಿಪ್ಪನೆಟ್ಟಿಕೆರೆ ಕೆರೆ ಎಂದರೆ ಒಂದು ಕಾಲಕ್ಕೆ ಹೆಸರುವಾಸಿ. ಶಿವಸಾಗರ ಎಂಬ ಮತ್ತೊಂದು ಕೆರೆಯ ಅಂಚನ್ನು ಹೊಂದಿ ಎರಡು ಕೆರೆಗಳು ಅಕ್ಕಪಕ್ಕದಲ್ಲಿರುವ ವಿಶೇಷವಾದ ಕೆರೆ ಇದು. ಮಾರಿಕುಪ್ಪಂ ಗ್ರಾಮದಲ್ಲಿರುವ ಚೋಳರ ಕಾಲದ ಉದ್ದಂಡಮ್ಮ ದೇವಾಲಯಕ್ಕೆ ಚಿನ್ನದ ಗಣಿ ಪ್ರದೇಶದ ನೀರು ಸುತ್ತಿ ಹೋಗುವಂತೆ ಕೆರೆ ಕೋಡಿ ಮತ್ತು ಅದರ ಅಚ್ಚುಕಟ್ಟು ಪ್ರದೇಶವನ್ನು ವಿನ್ಯಾಸಗೊಳಿಸಲಾಗಿತ್ತು ಎಂಬುದು ವಿಶೇಷ.

ಚಾಂಪಿಯನ್ ರೀಫ್‌ನಲ್ಲಿರುವ ಮತ್ತೊಂದು ಉದ್ದಂಡಮ್ಮ ದೇವಾಲಯ ಹಾಗೂ ರಾಬರ್ಟ್‌ಸನ್‌ಪೇಟೆ ಮೇಲ್ಭಾಗದಲ್ಲಿರುವ ಸ್ಥಳಗಳಲ್ಲಿ ಬಿದ್ದ ಮಳೆ ನೀರು ಕಾಲುವೆಗಳ ಮೂಲಕ ಹಾದು ಹೋಗಿ ತಿಪ್ಪನೆಟ್ಟಿಕೆರೆಗೆ ಬಂದು ಸೇರುತ್ತಿತ್ತು. ಅಲ್ಲದೆ ಸುತ್ತಮುತ್ತಲಿನ ಎಂಟು ಕೆರೆಗಳ ಕೋಡಿ ನೀರು ಸಹ ಇದೇ ಕೆರೆಗೆ ಬರುತ್ತಿತ್ತು. ಚಿನ್ನದ ಗಣಿ ಪ್ರದೇಶದಲ್ಲಿನ ನೀರು ಉದ್ದಂಡಮ್ಮ ದೇವಾಲಯವನ್ನು ಸುತ್ತಿಕೊಂಡು ಹೋದರೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದ ಆಗಿನ ಜನ ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.

ಗೊಲ್ಲಹಳ್ಳಿ, ಮಸ್ಕಂ, ಕಂಬಂಪಲ್ಲಿ, ಮಾರಿಕುಪ್ಪಂ ಗ್ರಾಮಗಳ ನೂರಾರು ಎಕರೆ ಜಮೀನಿಗೆ ಸಹ ತಿಪ್ಪನೆಟ್ಟಿಕೆರೆ ನೀರುಣಿಸುತ್ತಿತ್ತು. ಸುಮಾರು ಇಪ್ಪತ್ತರೆಡು ಎಕರೆ ವಿಸ್ತಾರವುಳ್ಳ ಕೆರೆ ತುಂಬಿದರೆ ಸುತ್ತಮುತ್ತಲಿನ ಬಾವಿಗಳಲ್ಲಿ ಸದಾ ಯಥೇಚ್ಛ ನೀರು ಸಿಗುತ್ತಿತ್ತು. ಆದರೆ ಈ ಕೆರೆ ಒಣಗಿ ಈಗ ಆರು ವರ್ಷವಾಗಿದೆ.

ಬಿದ್ದ ಮಳೆ ನೀರು ಕೋಡಿ ಕಟ್ಟೆ ಇಲ್ಲದ ಕಾರಣ ವ್ಯರ್ಥವಾಗಿ ಹರಿದುಹೋಗುತ್ತಿದೆ. ಕಟ್ಟೆ ಸಮೀಪದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದ ಕಾರಣ ಫಲವತ್ತಾದ ಭೂಮಿ ಬೀಳು ಬಿದ್ದಿದೆ. ಜಮೀನಿನಲ್ಲಿ ಸಹ ಜಾಲಿ ಮರಗಳು ಬೆಳೆಯಲು ಪ್ರಾರಂಭವಾಗಿವೆ. ಅದರ ಹಿಂದೆಯೇ ಖಾಲಿಯಾಗಿರುವ ಕೆರೆಯನ್ನು ಒತ್ತುವರಿ ಮಾಡಲಾಗುತ್ತಿದೆ. ಈಗಾಗಲೇ ಕೆಲವು ವ್ಯಕ್ತಿಗಳು ಕೆರೆಯ ಆವರಣದಲ್ಲಿ ವ್ಯವಸಾಯ ಶುರು ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು ಏಳು ವರ್ಷಗಳ ಹಿಂದೆ ಬಿದ್ದ ಭಾರಿ ಮಳೆಯಿಂದಾಗಿ ತಿಪ್ಪನೆಟ್ಟಿಕೆರೆ ತುಂಬಿತ್ತು. ಕಂಬಂಪಲ್ಲಿಯ ಗ್ರಾಮದವರೆಗೂ ನೀರು ವ್ಯಾಪಿಸಿತ್ತು. ನಂತದ ವರ್ಷದಲ್ಲಿ ಕೋಡಿ ಕಟ್ಟೆ ಕಿತ್ತುಹೋಯಿತು. ಇದುವರೆಗೂ ಅದನ್ನು ದುರಸ್ತಿಗೊಳಿಸದ್ದರಿಂದ  ಕೊಳವೆಬಾವಿಗಳಲ್ಲಿ ಸಹ ನೀರು ಸಿಗುತ್ತಿಲ್ಲ ಎಂದು ಅಚ್ಚುಕಟ್ಟು ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿರುವ ರೈತ ಜಯಣ್ಣ ಹೇಳುತ್ತಾರೆ.

ಕೋಡಿಕಟ್ಟೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸುಮಾರು ಐದಾರು ಲಕ್ಷ ರೂಪಾಯಿ ಖರ್ಚು ಮಾಡಿದರೆ ಸಾಕು ಉತ್ತಮವಾದ ಕೋಡಿಕಟ್ಟೆಯನ್ನು ನಿರ್ಮಾಣ ಮಾಡಬಹುದು.

ಒಮ್ಮೆ ಕೆರೆಯಲ್ಲಿ ನೀರು ನಿಂತರೆ ಎರಡು ವರ್ಷಗಳ ಕಾಲ ನೀರು ದಾಸ್ತಾನು ಇರುತ್ತದೆ. ಗ್ರಾಮಸ್ಥರ ಮನವಿಗೆ ಬೆಲೆಯೇ ಇಲ್ಲದೆ ಹೋಗಿದೆ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.