ADVERTISEMENT

ದಯಾಮರಣಕ್ಕೆ ನಿವೃತ್ತ ನೌಕರರ ಬೆಂಬಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:10 IST
Last Updated 19 ಅಕ್ಟೋಬರ್ 2012, 8:10 IST

ಚಿಂತಾಮಣಿ: ದಯಾ ಮರಣಕ್ಕೆ ಕಾನೂನಿನಲ್ಲಿ ಅವಕಾಶ ನೀಡುವಂತೆ ಹೋರಾಟ ನಡೆಸುತ್ತಿರುವ ಸಂಘ- ಸಂಸ್ಥೆಗಳಿಗೆ ಬೆಂಬಲ ನೀಡಲು ತಾಲ್ಲೂಕು ನಿವೃತ್ತ ನೌಕರರು ಮುಂದಾಗಿದ್ದಾರೆ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ದಯಾ ಮರಣಕ್ಕೆ ಕಾನೂನಿನಲ್ಲಿ ಅವಕಾಶ ನೀಡುವಂತೆ ಒತ್ತಾಯಿಸಿ ದಾವಣಗೆರೆ ಹಿರಿಯ ವನಿತೆಯರ ಆನಂದಧಾಮ ಇತರೆ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸುತ್ತಿದ್ದು, ಇದಕ್ಕೆ ಸಂಘ- ಸಂಸ್ಥೆಗಳ ಸಹಕಾರ ಕೋರಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಯಿತು.

ಸೂಕ್ತ ಆರೈಕೆಯಿಲ್ಲದೆ ಕೆಲವು ವೃದ್ಧರು ಯಾತನಾಮಯ ಬದುಕು ಸಾಗಿಸುತ್ತಿದ್ದು, ಅಂತಹವರ ದಯಾ ಮರಣಕ್ಕೆ ಮನವಿ ಮಾಡಿದರೆ ಅನುಮತಿ ನೀಡುವುದು ಸೂಕ್ತ. ಈ ಸಂಬಂಧ ಹೋರಾಟ ನಡೆಸುತ್ತಿರುವವರಿಗೆ ಬೆಂಬಲ ನೀಡಲು ತೀರ್ಮಾನಿಸಲಾಯಿತು.

ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ ಬಗ್ಗೆ ಅಪ್ಪಿರೆಡ್ಡಿ ಉಪನ್ಯಾಸ ನೀಡಿದರೆ, ಮುನಿವೆಂಕಟಮ್ಮ ಬಾಪು ಬಗ್ಗೆ ಸ್ಮರಣ ಗೀತೆಗಳನ್ನು ಹಾಡಿದರು. ಸಭಿಕರು ಇದಕ್ಕೆ ಧ್ವನಿಗೂಡಿಸಿ ರಾಷ್ಟ್ರ ಪಿತನಿಗೆ ನಮನ ಸಲ್ಲಿಸಿದರು.

ಯೋಗ ಗುರು ಜಯರಾಮರೆಡ್ಡಿ ಪ್ರಾತ್ಯಕ್ಷಿಕೆ ಮೂಲಕ ಯೋಗ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ನಿವೃತ್ತ ವೈದ್ಯಾಧಿಕಾರಿ ಡಾ.ಎಲ್.ಆರ್.ವರದರಾಜನ್ ಅವರು ನಿತ್ಯ ಜೀವನದಲ್ಲಿ  ನಡೆಯುವ ಕೆಲವು ಘಟನೆ ಬಗ್ಗೆ ಬೆಳಕು ಚೆಲ್ಲಿದರು. ಚಿನ್ನಪ್ಪ ವೇದಾಂತವನ್ನು ವಿವರಿಸಿದರು.ಸಂಘದ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ಸಭೆ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಅಪ್ಪಾಜಿರೆಡ್ಡಿ, ವೀರಪ್ಪರೆಡ್ಡಿ, ಮೈಲಾಂಡ್ಲಹಳ್ಳಿ ಅಶ್ವಥ್ ನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.