ADVERTISEMENT

ದಲಿತ ಮಹಿಳೆ ವಂಚಿಸಿ ಅತ್ಯಾಚಾರ: ದೂರು

ಅನರ್ಹರಿಗೆ ಸರ್ಕಾರಿ ಮಳಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:52 IST
Last Updated 21 ಡಿಸೆಂಬರ್ 2012, 9:52 IST
ಕೋಲಾರ: ಜಿಲ್ಲೆಯಲ್ಲಿ ಸಕಾಲದಲ್ಲಿ ಅಧಿಕಾರಿಗಳು ದಲಿತರ ದೌರ್ಜನ್ಯ ಪ್ರಕರಣಗಳ ಬಗ್ಗೆ ವಿಚಾರಣೆ, ತನಿಖೆ ಹಾಗೂ ಕುಂದುಕೊರತೆ ಸಭೆ ನಡೆಸುತ್ತಿಲ್ಲ ಎಂದು ಗುರುವಾರ ನಡೆದ ದಲಿತರ ದೌರ್ಜನ್ಯ ಪ್ರಕರಣ ವಿಚಾರಣೆ ಸಭೆಯಲ್ಲಿ  ದಲಿತ ಮುಖಂಡರು ಜಿಲ್ಲಾಧಿಕಾರಿ ಡಾ.ಎಸ್.ವಿಶ್ವನಾಥ್ ಅವರಿಗೆ ದೂರು ನೀಡಿದರು. 

`ಇದಕ್ಕೆ ಕೆಜಿಎಫ್‌ನ ಅಶೋಕನಗರ ಹಾಗೂ ಮುಳಬಾಗಲಿನ ಮದ್ದೇರಿ ಗ್ರಾಮ ನಿದರ್ಶನವಾಗಿದೆ. ಇಲ್ಲಿ ದಲಿತ ಮಹಿಳೆಯರನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದಾರೆ. ಆದರೂ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ. ನೊಂದವರ ಸಹಾಯಕ್ಕೆ ಮುಂದೆ ಬಂದಿಲ್ಲ' ಎಂದು ಡಾ.ಎಂ.ಚಂದ್ರಶೇಖರ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಹಾಗೂ ವರದಿ ನೀಡುವಂತೆ ಸೂಚಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ದಲಿತರ ದೌರ್ಜನ್ಯ ಪ್ರಕರಣಗಳ ಬಗ್ಗೆ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಎಂದು ಹೇಳಿವೆ. ಆದರೂ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದರೂ ಪೊಲೀಸರು ಸೂಕ್ತವಾದ ತನಿಖೆ ನಡೆಸುತ್ತಿಲ್ಲ. ಬಂಗಾರಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಶಿವಕುಮಾರ ಅವರ ವಿರುದ್ಧವೂ ಆರೋಪ ಮಾಡಿದರು. ಕಾನೂನುಬಾಹಿರ ಪ್ರತಿಭಟನೆ, ಧರಣಿಗಳಿಗೆ ಶಿವಕುಮಾರ ಸಹಕರಿಸುತ್ತಿದ್ದಾರೆ.

ಮುದುವತ್ತಿ ಗ್ರಾಮ ಪಂಚಾಯಿತಿಯಲ್ಲಿ ದಲಿತ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆದರೆ ಪೊಲೀಸರು ಬಲಿಪಶುವಿನ ಮೇಲೆ ಪ್ರಕರಣ ದಾಖಲಿಸಿಕೊಂಡು, ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಇನ್ನು ಮುಂದೆ ಇರುವ ದೌರ್ಜನ್ಯ ಪ್ರಕರಣ ನಿಗದಿತ ಅವಧಿಯಲ್ಲಿ ಮುಗಿಸಬೇಕು. ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿ ಈ ನಿಟ್ಟಿನಲ್ಲಿ ಖುದ್ದಾಗಿ ಕಾನೂನಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ವೆಂಕಟಚಲಪತಿ ಎಂಬುವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 59ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ, ಪಂಗಡ ಸುಳ್ಳು ಪ್ರಮಾಣ ಪತ್ರ ಪಡೆದು ಉದ್ಯೋಗ, ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ತಾಲ್ಲೂಕಿನ ದೊಡ್ಡಪೇಟೆಯ ಸರ್ಕಾರಿ ಮಳಿಗೆಯಲ್ಲಿ ಕಾನೂನು ಅನ್ವಯ ಪರಿಶಿಷ್ಟರಿಗೆ ಅಂಗಡಿಗಳು ವಿತರಣೆಯಾಗಬೇಕಿತ್ತು. ಆದರೆ ಯಾವುದೂ ಆಗಿಲ್ಲ. ಅನರ್ಹರಿಗೆ ಮಳಿಗೆ ವಿತರಣೆ ಮಾಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದರು. ದೊಡ್ಡಪೇಟೆಯಲ್ಲಿ ಶೇ 90ರಷ್ಟು ಇರುವುದು ಬೇರೆ ಜಾತಿಯವರೇ. ಇದಕ್ಕೆ ಉತ್ತರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದಾಗ, ಮುಂಬರುವ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಮಳಿಗೆ ವಿತರಣೆ ಮಾಡಲಾಗುವುದು ಎಂದರು.

ಕೋಲಾರದಲ್ಲಿ ಮಾತ್ರವಲ್ಲ, ಎಲ್ಲ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸರ್ಕಾರಿ ಮಳಿಗೆಗಳು ಅನರ್ಹರಿಗೆ ವಿತರಣೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಅಸಮಾಧಾನ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.