ADVERTISEMENT

ದಾಖಲಾತಿ ಆಂದೋಲನಕ್ಕೆ ಪೊಲೀಸರ ಸಾಥ್ !

ಕೆ.ನರಸಿಂಹ ಮೂರ್ತಿ
Published 17 ಜೂನ್ 2011, 8:05 IST
Last Updated 17 ಜೂನ್ 2011, 8:05 IST

ಕೋಲಾರ: ಯಾವ ಮಗುವೂ ಶಾಲೆಯಿಂದ ಹೊರಗಿರಬಾರದು ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉದ್ದೇಶ. ಅದಕ್ಕಾಗಿಯೇ ಪ್ರತಿ ಶೈಕ್ಷಣಿಕ ವರ್ಷ ಆರಂಭವಾದ ತಿಂಗಳಿಡೀ ದಾಖಲಾತಿ ಆಂದೋಲನವನ್ನು ಕೈಗೊಳ್ಳಲಾಗುತ್ತದೆ. ಇದು ಸಾಮಾನ್ಯ ಸಂಗತಿ. ಆದರೆ ಈ ಆಂದೋಲನಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಜೊತೆಯಾಗಿದ್ದಾರೆ ಎಂಬುದು ಸದ್ಯದ ವಿಶೇಷ ಸಂಗತಿ.

ಈ ಗ್ರಾಮಾಂತರ ಠಾಣೆ ಸರಹದ್ದಿನಲ್ಲಿ 256 ಹಳ್ಳಿಗಳಿವೆ. ರಾಜ್ಯದಲ್ಲೆ ಅತ್ಯಂತ ಹೆಚ್ಚು ಹಳ್ಳಿಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಏಕೈಕ ಠಾಣೆಯೂ ಇದೇ ಆಗಿದೆ ಎಂಬುದು ಗಮನಾರ್ಹ ಅಂಶ. ಈ ಠಾಣೆ ವ್ಯಾಪ್ತಿಯಲ್ಲಿರುವ ಕೆಲವು ಹಳ್ಳಿಗಳ ನಡುವಿನ ಅಂತರವನ್ನು ಗಮನಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ತಾಲ್ಲೂಕಿನ ಪಟ್ಣ ಗ್ರಾಮದಿಂದ ಎಚ್ ಹೊಸೂರು ನಡುವಿನ ಅಂತರ 40 ಕಿಮೀ, ಕೆಂದಟ್ಟಿ ಗ್ರಾಮದಿಂದ ತಂಬಳ್ಳಿ ಗೇಟ್‌ವರೆಗಿನ ಅಂತರ 28 ಕಿಮೀ, ವಡಗೆರೆಯಿಂದ ಬೆಳಿಗೆರೆವರೆಗಿನ ಅಂತರ 40 ಕಿಮೀ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಠಾಣೆಯ ಕಾರ್ಯ ವ್ಯಾಪ್ತಿ 28 ಕಿಮೀ. ಇವು ಕೆಲವು ನಿರ್ದಶನಗಳಷ್ಟೆ.

ಇಂಥ ಬೃಹತ್ ವ್ಯಾಪ್ತಿಯ ಠಾಣೆಯ ಎಲ್ಲ ಪೊಲೀಸ್ ಸಿಬ್ಬಂದಿಯೂ ಶಾಲಾ ದಾಖಲಾತಿ ಆಂದೋಲನದ ಕೆಲಸವನ್ನೂ ಹೆಚ್ಚುವರಿಯಾಗಿ ಸ್ವಯಂಸ್ಫೂರ್ತಿಯಿಂದ ಸದ್ದಿಲ್ಲದೆ ಮಾಡುತ್ತಿದ್ದಾರೆ. ಠಾಣೆ ವ್ಯಾಪ್ತಿಯ ಎಲ್ಲ ಹಳ್ಳಿಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೇ 100ರಷ್ಟು ವಿದ್ಯಾರ್ಥಿ ದಾಖಲಾತಿಯನ್ನು ಮಾಡಬೇಕು ಎಂಬ ಗುರಿಯೂ ಇಲ್ಲಿದೆ.

ಕಾರ್ಯವೈಖರಿ ಹೇಗೆ ?: ಠಾಣೆಯ 42 ಸಿಬ್ಬಂದಿಯೂ ಈಗ ದಾಖಲಾತಿ ಆಂದೋಲನದ ಕಾರ್ಯಕರ್ತರೇ ಆಗಿದ್ದಾರೆ. ಈ ಸಿಬ್ಬಂದಿ ಇಲಾಖೆಯ ನಿಯಮಗಳ ಅನುಸಾರ ತಿಂಗಳಲ್ಲಿ 2 ದಿನ ಬೀಟ್ ಕೆಲಸ ಮಾಡುತ್ತಾರೆ. ಬೀಟ್ ಎಂದರೆ, ನಿಯೋಜಿಸಿದ ಹಳ್ಳಿ-ಪ್ರದೇಶಕ್ಕೆ ತೆರಳಿ ಅಲ್ಲಿಯೇ ಒಂದು ರಾತ್ರಿ ತಂಗಿದ್ದು, ಅಪರಾಧ, ಕಾನೂನು-ಸುವಸ್ಯವಸ್ಥೆ ಸಂಬಂಧದ ಮಾಹಿತಿಗಳನ್ನು ಕಲೆ ಹಾಕುವುದು, ಬಳಿಕ ಠಾಣೆಗೆ ವರದಿಯನ್ನು ನೀಡುವುದು.

ಇದೀಗ, ದಾಖಲಾತಿ ಆಂದೋನಕ್ಕೆ ಸಾಥ ನೀಡುವ ಸಲುವಾಗಿ, ಠಾಣೆಯ ಸಿಬ್ಬಂದಿ ತಮ್ಮ ಬೀಟ್ ಸಂದರ್ಭದಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನೂ ಸಂಗ್ರಹಿಸುತ್ತಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಶಾಲೆಯ ಮುಖ್ಯಶಿಕ್ಷಕರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಅವರ ಪತ್ತೆಗೂ ಪ್ರಯತ್ನಿಸುತ್ತಾರೆ. ಮಕ್ಕಳು ಅಥವಾ ಅವರ ಪೋಷಕರು ಪತ್ತೆಯಾದರೆ ಅವರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಮತ್ತೆ ಕರೆ ತರುತ್ತಾರೆ.

`ಶಾಲೆಯನ್ನು ಮಕ್ಕಳು ಬಿಡಲು ಕಾರಣವೇನು ಎಂಬುದನ್ನೂ ಪತ್ತೆ ಹಚ್ಚಿ ಅವರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿ, ನಿವಾರಣೆಗೆ ಯತ್ನಿಸಿ, ಪರಿಹಾರ-ಪ್ರೋತ್ಸಾಹ ನೀಡುವುದೇ ನಮ್ಮ ಉದ್ದೇಶ. ಮುದುವತ್ತಿಯಲ್ಲಿ ಈಗಾಗಲೇ ಶಾಲೆ ತೊರೆದಿದ್ದ ಇಬ್ಬರು ಮಕ್ಕಳನ್ನು ಪತ್ತೆ ಹಚ್ಚಿದೆವು. ಅವರು ಬೇರೊಂದು ಶಾಲೆಗೆ ಸೇರಿದ್ದರು. ನಮ್ಮ ಕಾರ್ಯಾಚರಣೆಯಿಂದಲೇ ಈ ಅಂಶ ಬೆಳಕಿಗೆ ಬಂತು~ ಎಂದು ಗ್ರಾಮಾಂತರ ಠಾಣೆ ಎಸ್‌ಐ ಕೆ.ಆರ್.ಗಣೇಶ್ ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

`ಶಾಲೆ ದಾಖಲಾತಿ ಆಂದೋಲನದ ಸಲುವಾಗಿ ಯಾವತ್ತೋ ಒಂದು ದಿನ ಮೆರವಣಿಗೆ ಮಾಡಿ, ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಘೋಷಣೆ ಕೂಗಿದರೆ ಸಾಕಾಗುವುದಿಲ್ಲ. ಪ್ರತಿ ಹಳ್ಳಿಗರಿಂದ ತಳಮಟ್ಟದ ಕಾರ್ಯಾಚರಣೆಯೂ ಅಗತ್ಯ. ಶಾಲೆ ಬಿಟ್ಟ ಮಕ್ಕಳು ಮತ್ತು ಅವರ ಪೋಷಕರ ಬಗ್ಗೆ ಸಹಾನುಭೂತಿಯೂ ಅಗತ್ಯ~ ಎಂದರು.

ಮುಂದೇನು ?: `ಶಾಲಾ ದಾಖಲಾತಿ ಆಂದೋಲನ ಕೇವಲ ಒಂದು ತಿಂಗಳಿಗಷ್ಟೆ ಮುಗಿಯುವುದಿಲ್ಲ. ಶೈಕ್ಷಣಿಕ ವರ್ಷದ ಯಾವುದೇ ದಿನವಾದರೂ ಸರ್ಕಾರಿ ಶಾಲೆಯ ಬಾಗಿಲು ಮಗುವಿಗೆ ತೆರೆದೇ ಇರುತ್ತದೆ. ಹೀಗಾಗಿ ನಾವೂ ವರ್ಷವಿಡೀ ಶಾಲೆ ಬಿಟ್ಟ ಮಕ್ಕಳಿಗಾಗಿ ಹಳ್ಳಿಗಳಲ್ಲಿ ಹುಡುಕಾಟ ನಡೆಸುತ್ತಲೇ ಇರುತ್ತೇವೆ.
 

ಜಿಲ್ಲೆಯಾದ್ಯಂತ ಇದೇ ರೀತಿ ಪೊಲೀಸರು ಕಾರ್ಯನಿರ್ವಹಿಸಿದರೆ ಯಾವುದೇ ಮಗು ಶಾಲೆಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಈ ಅಂಶದ ಕಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದು ಮನವಿ ಸಲ್ಲಿಸುವ ಉದ್ದೇಶವಿದೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT