ADVERTISEMENT

ದಾಖಲೆ ನೀಡದಿದ್ದರೆ ಹೋರಾಟ ನಡೆಸುತ್ತೇನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 7:29 IST
Last Updated 27 ಡಿಸೆಂಬರ್ 2017, 7:29 IST
ಕೆ.ಆರ್.ರಮೇಶ್‌ ಕುಮಾರ್
ಕೆ.ಆರ್.ರಮೇಶ್‌ ಕುಮಾರ್   

ಕೋಲಾರ: ‘ನಗರದ ಸ್ಯಾನಿಟೋರಿಯಂನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಅಡ್ಡಿ ಎದುರಾಗುವುದು ಸಹಜ, ಅದನ್ನು ಧೈರ್ಯದಿಂದ ಎದುರಿಸಿ ಕಾರ್ಯಕ್ರಮ ಅನುಷ್ಟಾನಕ್ಕೆ ತರುತ್ತೇವೆ ಎಂದು ಸವಾಲು ಹಾಕಿದರು.

ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ 40 ಎಕರೆ ಭೂಮಿ ಅವಶ್ಯಕತೆಯಿದ್ದು ಮೂರು ಹಂತಗಳಲ್ಲಿ ಘಟಕ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಸದರಿ ಜಾಗ 1939ರಲ್ಲೇ ಅರಣ್ಯ ಇಲಾಖೆಗೆ ಸೇರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ 1959ರಲ್ಲಿ ಕಮಲಾ ನೆಹರು ಕ್ಷಯರೋಗ ಆಸ್ಪತ್ರೆ ನಿರ್ಮಿಸಲು ಹೇಗೆ ಅವಕಾಶ ನೀಡಿದರು ಎಂದು ಪ್ರಶ್ನಿಸಿದರು.

ADVERTISEMENT

ಸ್ಯಾನಿಟೋರಿಯಂನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆಗೆ ಟಾಟಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಯಾನಿಟೋರಿಯಂ ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿದೆ ಎಂದು ತರಕಾರು ಎತ್ತಿದ್ದಾರೆ ಎಂದರು.

ಡಿ27ರೊಳಗೆ ದಾಖಲೆ ಕೊಡಿ: ಘಟಕ ಸ್ಥಾಪನೆ ಸಂಬಂಧ ಬಡಂಬಡಿಕೆ ಅಧಿಕೃತವಾಗಿ ಆದಲ್ಲಿ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಘಟಕವನ್ನು ಲೋಕಾರ್ಪಣೆ ಮಾಡಲಾಗುವುದು. ಅರಣ್ಯ ಇಲಾಖೆಯವರು ಡಿ.27ರೊಳಗೆ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಡದಿದ್ದಲ್ಲಿ ಪ್ರತಿಭಟನೆ ನಡೆಸುತ್ತೇನೆ. ಏನೇ ಅಡೆತಡೆ ಬಂದರೂ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಿಯೇ ತೀರುತ್ತೇನೆ ಎಂದು ಹೇಳಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 25 ಎಕರೆ ಸರ್ಕಾರಿ ಜಮೀನನ್ನು 60 ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದ್ದು, ಇದರ ನಿರ್ಮಾಣಕ್ಕೆ ₨ 450 ಕೋಟಿ ವೆಚ್ಚವಾಗಲಿದೆ ಎಂದು ಹೇಳಿದರು.

ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ವ್ಯವಸ್ಥೆ ಇರುತ್ತದೆ. ಇದರಲ್ಲಿ 225 ಹಾಸಿಗೆಗಳು ಆರೋಗ್ಯ ಇಲಾಖೆಗೆ ಹಾಗೂ 75 ಹಾಸಿಗೆಗಳು ಬಿಆರ್‍ಎಸ್ ಸಂಸ್ಥೆಗೆ ಮೀಸಲಿಡಲಾಗಿದೆ. ರಾಜಸ್ತಾನದ ಅಬುದಾಬಿಯಲ್ಲಿರುವ ಬಿಆರ್ಎಸ್ ಹೆಲ್ತ್ ಅಂಡ್ ರಿಸರ್ಚ್ ಸೆಂಟರ್‌ನ ಮುಖ್ಯಸ್ಥ ಬಿ.ಆರ್.ಶೆಟ್ಟಿ ಆಸ್ಪತ್ರೆಯನ್ನು ನಿರ್ಮಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.

ಡಿ.30ಕ್ಕೆ ಮುಖ್ಯಮಂತ್ರಿ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.30ರಂದು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 10.30ಕ್ಕೆ ಆಗಮಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಮಧ್ಯಾಹ್ನ 12.30ಕ್ಕೆ ಮುಳಬಾಗಿಲು, 2.30ಕ್ಕೆ ಬಂಗಾರಪೇಟೆಗೆ ತೆರಳಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮವಲ್ಲ. ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಮುಖ್ಯ ಮಂತ್ರಿ ಜತೆಗೆ ವಸತಿ ಸಚಿವ ಎಂ.ಕೃಷ್ಣಪ್ಪ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್ ಅಹಮದ್ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗಷ್ಟೇ ಭಾಗವಹಿಸುತ್ತಿಲ್ಲ. ಪ್ರತಿಪಕ್ಷದ ಶಾಸಕರು ಕರೆದರೂ ಹೋಗುತ್ತಾರೆ ಎಂದು ಹೇಳಿದರು.

ಜನ ತಿಸ್ಕರಿಸುತ್ತಾರೆ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಜಾತ್ಯಾತೀತರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಭಾಷೆಯ ಅರಿವಿಲ್ಲದೆ ಮಾತನಾಡಿರುವ ಇವರನ್ನು ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕರಿಸುತ್ತಾರೆ ಎಂದರು.

* * 

ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗೆಡೆ ಜಾತ್ಯಾತೀತರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಭಾಷೆಯ ಅರಿವಿಲ್ಲದೆ ಮಾತನಾಡಿರುವ ಇವರನ್ನು ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕರಿಸುತ್ತಾರೆ.
ಕೆ.ಆರ್.ರಮೇಶ್‌ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.