ADVERTISEMENT

`ದೇಗುಲಕ್ಕೆ ಭೂಮಿ ನೀಡಿದ ವ್ಯಕ್ತಿ ಟಿಪ್ಪು'

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:53 IST
Last Updated 6 ಜೂನ್ 2013, 5:53 IST

ಮುಳಬಾಗಲು: ಟಿಪ್ಪು ಸುಲ್ತಾನ್ ಒಬ್ಬ ಅಪ್ರತಿಮ ರಾಷ್ಟ್ರಪ್ರೇಮಿ. ಇಡೀ ಬದುಕನ್ನು ಮೈಸೂರು ರಾಜ್ಯ ರಕ್ಷಣೆಗೆ ಮುಡುಪಾಗಿಟ್ಟಿದ್ದರು. ಇಂಥ ವ್ಯಕ್ತಿ ಬಗ್ಗೆ ಅಪಪ್ರಚಾರ ಸಲ್ಲದು ಎಂದು ಟಿಪ್ಪು ಸುಲ್ತಾನ್ ಪ್ರಚಾರ ಸಮಿತಿ ಅಧ್ಯಕ್ಷರಾದ ತಲಕಾಡು ಚಿಕ್ಕರಂಗೇಗೌಡ ಇಲ್ಲಿ ತಿಳಿಸಿದರು.

ಪಟ್ಟಣದಲ್ಲಿ ಈಚೆಗೆ ಟಿಪ್ಪು ಸುಲ್ತಾನ್ ಸ್ಮರಣಾರ್ಥ ಟಿಪ್ಪುವಿನ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಟಿಪ್ಪು ಬ್ರಿಟಿಷರನ್ನು ದೇಶದಿಂದ ಹೊರ ಹಾಕಲು ಸೈನ್ಯ ಬಲಪಡಿಸಿದರು. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಿದರು. ಹೊಸ ಬೆಳೆ ಪರಿಚಯಿಸಿದರು. ಕೆರೆ ಕಾಲುವೆ ನಿರ್ಮಿಸಿದರು. ರೇಷ್ಮೆ ಬೆಳೆ ಪರಿಚಯಿಸಿದರು. ಆ ಮೂಲಕ ಬ್ರಿಟಿಷರನ್ನು ಸಮರ್ಥವಾಗಿ ಎದುರಿಸಿದರು ಎಂದರು.

ಟಿಪ್ಪು ಸುಲ್ತಾನರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಟಿಪ್ಪು ಎಲ್ಲ ಸಮುದಾಯಗಳಿಗೆ ಸೇರಿದವರು. ಅವರ  ಕಾಲದಲ್ಲಿ ಎಲ್ಲ ಜನ ಸಂತೋಷವಾಗಿ, ಸೌರ್ಹಾದದಿಂದ ಬದುಕಿದ್ದರು. ಮರಾಠರ ದಾಳಿಗಳಿಗೆ ತುತ್ತಾಗಿದ್ದ ಶೃಂಗೇರಿ ಮಠವನ್ನು ರಕ್ಷಣೆ ಮಾಡಿದ ಕೀರ್ತಿ ಸುಲ್ತಾನರಿಗೆ ಸಲ್ಲುತ್ತದೆ ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜಿ.ಶಿವಪ್ಪ ಮಾತನಾಡಿ, ಪಟ್ಟಣದ ಪುರಾತನ ಆಂಜನೇಯ ದೇವಾಲಯದ ಮಾನ್ಯ ರದ್ದಾಗಿತ್ತು. ಆಗ ಅರ್ಚಕರು ಟಿಪ್ಪು ಸುಲ್ತಾನ್‌ರನ್ನು ಭೇಟಿಯಾಗಿ ಮಾನ್ಯದ ಜಮೀನನನ್ನು ದೇವಾಲಯಕ್ಕೆ ಉಳಿಸಲು ವಿನಂತಿಸಿಕೊಂಡಿದ್ದರು. ಅರ್ಚಕರ ಮನವಿಗೆ ಒಪ್ಪಿದ ಟಿಪ್ಪು ಎಲ್ಲ ಮಾನ್ಯವನ್ನು ದೇಗುಲಕ್ಕೆ ಹಿಂತಿರುಗಿಸಿದ್ದರು. ಹಾಗೆಯೇ, ನಂಜನಗೂಡು, ಶ್ರೀರಂಗಪಟ್ಟಣ, ಮೇಲುಕೋಟೆ, ಹಗರಿಬೊಮ್ಮನಹಳ್ಳಿಗಳಲ್ಲಿನ ಹಿಂದೂ ದೇವಾಲಯಗಳಿಗೆ ಟಿಪ್ಪು ಬಂಗಾರದ ಆಭರಣಗಳನ್ನು, ಆನೆಗಳನ್ನು ದಾನವಾಗಿ ನೀಡಿದ್ದರು. ಇದು ಅವರ ಪ್ರೀತಿ, ಸೌಹಾರ್ದತೆಗೆ ಸಾಕ್ಷಿ ಎಂದು ತಿಳಿಸಿದರು.

ಎಂ.ಜಬೀವುಲ್ಲಾ ಮಾತನಾಡಿ ಮುಸ್ಲಿಂ ಸಮುದಾಯದವರು ಕನ್ನಡ ಕಲಿಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರೋಷನ್ ಟ್ರಸ್ಟ್ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಜಿ.ಎ.ಸನಾವುಲ್ಲಾ, ಮುಷ್ತಾಕ್ ಅಹಮದ್, ಜೆ.ಶಫೀವುಲ್ಲಾ, ಮೀರ್ ಮುಮ್ತೋಜ್ ಅಲಿ, ಅಲಮ್ಗೀರ್ ಚಾಂದಪಾಷಾ, ಅಬ್ದುಲ್ ರಫೀಕ್ ಸಾಬ್, ಬಷೀರ್, ಜಬೀವುಲ್ಲಾ, ಅಪ್ರೋಜ್, ಸಾದಿಹ್ ಪಾಷ, ರಿಯಾಜ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.