ADVERTISEMENT

ನಗರದಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 7:43 IST
Last Updated 20 ಅಕ್ಟೋಬರ್ 2017, 7:43 IST
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಜೂನಿಯರ್‌ ಕಾಲೇಜು ಮೈದಾನದ ಪಟಾಕಿ ಮಳಿಗೆಗಳಲ್ಲಿ ಗುರುವಾರ ವಹಿವಾಟು ಜೋರಾಗಿತ್ತು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಜೂನಿಯರ್‌ ಕಾಲೇಜು ಮೈದಾನದ ಪಟಾಕಿ ಮಳಿಗೆಗಳಲ್ಲಿ ಗುರುವಾರ ವಹಿವಾಟು ಜೋರಾಗಿತ್ತು.   

ಕೋಲಾರ: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ ಖರೀದಿಸಲು ನಗರದ ಮಾರುಕಟ್ಟೆಗಳಿಗೆ ಗುರುವಾರ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಹಳೆ ಬಸ್‌ ನಿಲ್ದಾಣ, ಎಂ.ಜಿ.ರಸ್ತೆ, ಹೊಸ ಬಸ್‌ ನಿಲ್ದಾಣ, ದೊಡ್ಡಪೇಟೆ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳ ಸುತ್ತಮುತ್ತ ಹೆಚ್ಚಿನ ಜನಜಂಗುಳಿ ಕಂಡುಬಂತು. ಇಡೀ ದಿನ ವಹಿವಾಟು ಭರ್ಜರಿಯಾಗಿ ನಡೆಯಿತು.

ಪಟಾಕಿ, ಹಣ್ಣು, ತರಕಾರಿ, ದಿನಸಿ, ಬಟ್ಟೆ ಹಾಗೂ ಸಿಹಿ ತಿನಿಸು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಕಂದು, ಬಿದಿರಿನ ಮೊರ, ನೋಮು ದಾರ, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ADVERTISEMENT

ಕೆಲ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಹಬ್ಬದ ಸಾಮಗ್ರಿಗಳನ್ನು ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು. ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ ಬದಿಯ ಹಣ್ಣಿನ ಅಂಗಡಿಗಳು ಹಾಗೂ ಜೂನಿಯರ್‌ ಕಾಲೇಜು ಮೈದಾನದಲ್ಲಿನ ಪಟಾಕಿ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು.

ಗಗನಕ್ಕೇರಿದ ಬೆಲೆ: ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದವು. ಏಲಕ್ಕಿ ಬಾಳೆ ಕೆ.ಜಿಗೆ ₹ 80, ಪಚ್ಚ ಬಾಳೆ ₹ 40, ಕಿತ್ತಳೆ ₹ 120, ಸೇಬು ₹ 140, ಮೋಸಂಬಿ ₹ 70, ದಾಳಿಂಬೆ ₹ 120, ಕಪ್ಪು ದ್ರಾಕ್ಷಿ ₹ 150, ಬಿಳಿ ದ್ರಾಕ್ಷಿ ₹ 200, ಸಪೋಟ ₹ 50 ಇತ್ತು. ತೆಂಗಿನಕಾಯಿ ಒಂದಕ್ಕೆ ₹ 25, ಮಾವಿನ ಸೊಪ್ಪು ಕಟ್ಟಿಗೆ ₹ 15 ಹಾಗೂ ಬಾಳೆಕಂದು ಎರಡಕ್ಕೆ ₹ 60 ಬೆಲೆ ಇತ್ತು.

ಮಲ್ಲಿಗೆ ಬಿಡಿ ಹೂವು ಕೆ.ಜಿಗೆ ₹ 700, ಕನಕಾಂಬರ ₹ 1,500, ಮಲ್ಲೆ ₹ 500, ಗುಲಾಬಿ ₹ 320, ಮಾರಿ ಗೋಲ್ಡ್‌ ₹ 120, ಸೇವಂತಿಗೆ ಹೂವು ₹ 140, ಚೆಂಡು ಹೂವು ₹ 70, ಸುಗಂಧರಾಜ ಹೂವು ₹ 300 ಇತ್ತು. ಹೂವು, ಹಣ್ಣಿನ ಜತೆಗೆ ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದವು. ಪೂಜಾ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ಸಂಚಾರ ನಿರ್ಬಂಧ: ಸಮಯ ಕಳೆದಂತೆ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ಮಾರುಕಟ್ಟೆ ಪ್ರದೇಶಗಳ ಸುತ್ತಮುತ್ತ ಸಂಚಾರ ನಿರ್ವಹಣೆಗೆ ಹೆಚ್ಚಿನ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ದೀಪಾಲಂಕಾರ: ಕೆಲ ಮನೆಗಳಲ್ಲಿ ಸಂಜೆ ದೀಪಾವಳಿ ಆಚರಿಸಲಾಯಿತು. ದೇವಸ್ಥಾನ ಹಾಗೂ ಅಂಗಡಿ ಮುಂಗಟ್ಟುಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಮನೆ ಅಂಗಳದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟಿ ಸಿಂಗರಿಸಿದ್ದರು.

ದೀಪಾವಳಿ ದಿನ ಕಜ್ಜಾಯ ಮತ್ತು ಬಾಗಿನವನ್ನು ದೇವಾಲಯಗಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆ. ಅಂತೆಯೇ ತುಪ್ಪದಿಂದ ತಯಾರಿಸಿದ ಕಜ್ಜಾಯವನ್ನು ಬಿದಿರಿನ ಮೊರ, ಹೊಸ ಪಾತ್ರೆಯಲ್ಲಿಟ್ಟು ಬಣ್ಣ ಬಣ್ಣದ ನೋಮು ದಾರಗಳ ಸಮೇತ ದೇವಸ್ಥಾನಕ್ಕೆ ಕೊಂಡೊಯ್ದರು.

ಬಣ್ಣದ ಚಿತ್ತಾರ: ದೇವಸ್ಥಾನಗಳಲ್ಲಿ ಗೌರಿ ಕಳಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತ ಆಚರಿಸಲಾಯಿತು. ಅರ್ಚಕರು ಕೇದಾರೇಶ್ವರ ವ್ರತದ ಮಹತ್ವ ಓದಿ ಹೇಳಿದರು. ಹಳೆ ನೋಮು ದಾರಗಳನ್ನು ಪಡೆದುಕೊಂಡು ಹೊಸ ದಾರಗಳಿಗೆ ಪೂಜೆ ಸಲ್ಲಿಸಲಾಯಿತು.

ಮನೆಗಳಲ್ಲಿ ಭಕ್ತಿ ಭಾವದಿಂದ ಗೌರಿ ಪೂಜೆ ನೆರವೇರಿಸಿ ಮಹಿಳೆಯರಿಗೆ ಬಾಗಿನ ಕೊಡಲಾಯಿತು. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಹೊಸ ಬಟ್ಟೆ ತೊಟ್ಟಿದ್ದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕತ್ತಲಾಗುತ್ತಿದ್ದಂತೆ ಬಾನಂಗಳದಲ್ಲಿ ಬಾಣ ಬಿರುಸುಗಳು ಬಣ್ಣದ ಚಿತ್ತಾರ ಬಿಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.