ADVERTISEMENT

ನಗರಸಭೆಯಲ್ಲಿ ವಿಶೇಷ ತುರ್ತು ಸಭೆ.ನೀರು ಪೂರೈಕೆ: ಹೊಸ ಪ್ರಸ್ತಾವನೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 7:15 IST
Last Updated 11 ಮಾರ್ಚ್ 2011, 7:15 IST

ಕೋಲಾರ: ವಿಶ್ವಬ್ಯಾಂಕ್ ನೆರವಿನಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ 2006ರಲ್ಲಿ ಸಲ್ಲಿಸಲಾಗಿದ್ದ ಕುಡಿಯುವ ನೀರು ಮತ್ತು ಮಳೆ ನೀರು ಚರಂಡಿಗಳ ನಿರ್ಮಾಣ ಕುರಿತ ಪ್ರಸ್ತಾವನೆಯು ವಾಪಸ್ ಬಂದಿರುವುದರಿಂದ ಮತ್ತೆ ಹೊಸ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ನಗರಸಭೆಯಲ್ಲಿ ಬುಧವಾರ ವಿಶೇಷ ತುರ್ತು ಸಭೆ ಏರ್ಪಡಿಸಲಾಗಿತ್ತು.

ನೀರು ಪೂರೈಕೆ ಸಲುವಾಗಿ 2.38 ಕೋಟಿ ಮತ್ತು ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ 4.35 ಕೋಟಿ ರೂಪಾಯಿ ನಗರಸಭೆಗೆ ಬಿಡುಗಡೆಯಾಗಿದೆ. ಪ್ರಸ್ತಾವನೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸಲ್ಲಿಸಬೇಕಾಗಿದೆ ಎಂದು ಸದಸ್ಯರಿಗೆ ಮಾಹಿತಿ ನೀಡಲಾಯಿತು.

ನಗರದ ಹೊರವಲಯದ ಬಾಣಂತಿ ಕೆರೆಯಿಂದ ನೀರು ತರುವುದು, ಕೋಲಾರಮ್ಮ, ಮಡೇರಹಳ್ಳಿ, ಕೋಡಿಕಣ್ಣೂರು ಕೆರೆಗಳಲ್ಲಿ ಪಂಪ್‌ಹೌಸ್‌ಗಳ ನಿರ್ಮಾಣ, ಬೋರ್‌ವೆಲ್‌ಗಳನ್ನು ಕೊರೆಯುವುದು ಸೇರಿದಂತೆ ಸದಸ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ.

ಅಂಬೇಡ್ಕರ್ ನಗರ, ಹೊಸ ಬಸ್ ನಿಲ್ದಾಣದ ಬಳಿ, ಕೀಲುಕೋಟೆ ಬಳಿ, ಗಾಂಧಿನಗರದ ಬಳಿ ಮಳೆ ನೀರಿನ ದೊಡ್ಡ ಚರಂಡಿಗಳ ನಿರ್ಮಾಣಕ್ಕೆ ಸಲಹೆಗಳು ಬಂದಿವೆ. ಒಂದೆರಡು ದಿನದಲ್ಲಿ ನಿರ್ಧಾರ ಕೈಗೊಂಡು ಪ್ರಸ್ತಾವನೆ ಸಿದ್ಧಪಡಿಸಲಾಗುವುದು ಎಂದು ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ ತಿಳಿಸಿದ್ದಾರೆ.

ನಗರಸಭೆ ಅಧ್ಯಕ್ಷೆ ನಾಜಿಯಾ, ಆಯುಕ್ತ ಕೆ.ಎಚ್.ರಾಯ್, ಸದಸ್ಯರಾದ ರಘು, ವಿ.ಕೆ.ರಾಜೇಶ್, ರೌತ್ ಶಂಕರಪ್ಪ, ವಿ.ಪ್ರಕಾಶ್, ಶ್ರೀರಾಮಪ್ಪ ಸೇರಿದಂತೆ ಹಲವು ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.