ADVERTISEMENT

ನಾಟಿ ಪಪ್ಪಾಯಿ ಹಣ್ಣಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 6:00 IST
Last Updated 9 ಅಕ್ಟೋಬರ್ 2012, 6:00 IST

ಶ್ರೀನಿವಾಸಪುರ: ಈಗ ನಾಟಿ ಎಂದರೆ ಸಾಕು ಜನ ಮುಗಿಬಿದ್ದು ಖರೀದಿಸುವ ಕಾಲ. ಹಣ್ಣು, ತರಕಾರಿ, ಸೊಪ್ಪು, ಕೊನೆಗೆ ಕೊತ್ತಂಬರಿ ಸೊಪ್ಪಾದರೂ ನಾಟಿಯೇ ಬೇಕು. ಅಧಿಕ ಇಳುವರಿ ಕೊಡುವ ಹೈಬ್ರಿಡ್ ತಳಿಗಳ ರುಚಿಯ ಏಕತಾನತೆಯಿಂದ ಬೇಸತ್ತಿರುವ ಗ್ರಾಹಕರು ವಿಶೇಷ ರುಚಿಗಾಗಿ ದೇಸಿ ಉತ್ಪನ್ನಕ್ಕೆ ಆದ್ಯತೆ ಕೊಡುತ್ತಿದ್ದಾರೆ.

ಇದರಿಂದ ಪಪ್ಪಾಯಿ ಹೊರತಾಗಿಲ್ಲ. ಪಟ್ಟಣ ಹಾಗೂ ನಗರಗಳ ಹಣ್ಣಿನ ಅಂಗಡಿಗಳಲ್ಲಿ ಸೀಡ್‌ಲೆಸ್ ಪಪ್ಪಾಯಿ ದೊರೆಯುತ್ತದೆ. ಟೊಳ್ಳಾದ ಈ ಪಪ್ಪಾಯಿಯ ರುಚಿ ನಾಟಿ ಪಪ್ಪಾಯಿಗೆ ಹೋಲಿಸಿದರೆ ಅಷ್ಟಕ್ಕಷ್ಟೆ. ಆದ್ದರಿಂದಲೇ ಪಪ್ಪಾಯಿ ಪ್ರಿಯರು ನಾಟಿ ಪಪ್ಪಾಯಿಗೆ ಮಣೆ ಹಾಕುತ್ತಾರೆ.

ಶ್ರೀನಿವಾಸಪುರದ ರೈತ ಪಟ್ಟಾ ಮುನಿಶಾಮಪ್ಪ ತಮ್ಮ ತೋಟದಲ್ಲಿ ಅಪರೂಪಕ್ಕೆ ನಾಟಿ ಪಪ್ಪಾಯಿ ಬೆಳೆದಿದ್ದಾರೆ. ಕಾಯಿ ಹದಕ್ಕೆ ಬಂದಾಗ ಕಿತ್ತು ಭತ್ತದ ಹುಲ್ಲಿನಲ್ಲಿಟ್ಟು ಹಣ್ಣು ಮಾಡುತ್ತಾರೆ. ಹಣ್ಣಾಗಿಸಲು ಬಳಸುವ ರಾಸಾಯನಿಕಗಳ ಪರಿಚಯವೇ ಅವರಿಗಿಲ್ಲ. ಏನಿದ್ದರೂ ಅವರದು ಸಾಂಪ್ರದಾಯಿಕ ವಿಧಾನ. ಹಾಗಾಗಿ ಅದರ ಸೇವನೆಯಿದ ಆರೋಗ್ಯಕ್ಕೆ ಹಾನಿಯಿಲ್ಲ. ಇದು ಅವರ ವ್ಯವಹಾರದ ಅತಿಮುಖ್ಯ ಅಂಶ.

ಪಟ್ಟಾ ಮುನಿಶಾಮಪ್ಪ ತಾವು ಬೆಳೆದ ನಾಟಿ ಪಪ್ಪಾಯಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಕಟ್ಟಿದ ಮಕ್ಕರಿಯಲ್ಲಿ ಇಟ್ಟುಕೊಂಡು ಮಾರುಕಟ್ಟೆಗೆ ಬಂದರೆ ಸಾಕು, ಗ್ರಾಹಕರು ಸುತ್ತಿಕೊಂಡು ಖರೀದಿಸಿ ಕೊಂಡೊಯ್ಯುತ್ತಾರೆ. ಕೊಯ್ದು ತಿಂದು ಖುಷಿ ಪಡುತ್ತಾರೆ.

`ನಾನು ನನ್ನ ತೋಟದಲ್ಲಿ ನಾಟಿ ಪಪ್ಪಾಯಿ ಮಾತ್ರವಲ್ಲ, ನಾಟಿ ಬದನೆ, ನಾಟಿ ಬೆಂಡೆ, ನಾಟಿ ಅವರೆ, ನಾಟಿ ಹುರುಳಿ ಕಾಯಿ, ನಾಟಿ ಹೀರೆ ಕಾಯಿ ಬೆಳೆಯುತ್ತೇನೆ. ನಮ್ಮ ಹಿರಿಯರ ಕಾಲದಿಂದ ಬೀಜವನ್ನು ಕಳೆದಿಲ್ಲ. ದೇಸಿ ಹಣ್ಣು, ತರಕಾರಿಗಳನ್ನು ಕೇಳಿ ಖರೀದಿಸುತ್ತಾರೆ. ಒಂದು ಕಾಸು ಹೆಚ್ಚೆಂದರೂ ಹಿಂದೆ ಸರಿಯುವುದಿಲ್ಲ~ ಎನ್ನುತ್ತಾರೆ ಪಟ್ಟಾ ಮುನಿಶಾಮಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT