ADVERTISEMENT

ನೀರು ಸಿಗುವೆಡೆಗೆ ಸ್ಥಳಾಂತರ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 9:21 IST
Last Updated 8 ಏಪ್ರಿಲ್ 2013, 9:21 IST

ಬಂಗಾರಪೇಟೆ: ಬರಗಾಲದ ಬೇಗೆಯಲ್ಲಿ ಬೆಂದಿರುವ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.ಬಾಡಿಗೆ ಮನೆಗಳಲ್ಲಿ ಇರುವವರು ನೀರು ದೊರಕುವ ಕಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ. ಸ್ವಂತ ಮನೆಯುಳ್ಳವರು ನೀರಿನ ಸಮಸ್ಯೆ ನಡುವೆಯೇ ಜೀವನ ನಡೆಸುತ್ತಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿರುವ ಜನರು ನೀರು ಸಿಗುವ ವಾರ್ಡ್‌ಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಅಂಥ ವಾರ್ಡ್‌ಗಳ ಮನೆ ಬಾಡಿಗೆ ಕೂಡ ದ್ವಿಗುಣಗೊಂಡಿದೆ. ಉಳ್ಳವರು ಟ್ಯಾಂಕರ್ ನೀರಿಗೆ ಮೊರೆಹೋಗಿದ್ದಾರೆ. ನೀರು ಕೊಳ್ಳಲು ಸಾಧ್ಯವಾಗದ ಬಡವರ್ಗದವರು ಪಟ್ಟಣದ ಹೊರ ವಲಯದ ಆರ್‌ಕೆಎನ್ ಮಿಲ್‌ನಿಂದ ಪೂರೈಸಲಾಗುತ್ತಿರುವ ನಲ್ಲಿ ನೀರಿಗೆ ಮುಗಿಬೀಳುತ್ತಿದ್ದಾರೆ. ಅಲ್ಲೂ ಸಮಯ ನಿಗದಿಗೊಳಿಸಲಾಗಿದ್ದು ಗಂಟೆಗಟ್ಟಲೆ ಕಾಯಬೇಕಿದೆ.


ಹಲ ವರ್ಷಗಳಿಂದ ಮಳೆ ಇಲ್ಲದ ಕಾರಣ ವಾತಾವರಣದಲ್ಲಿ ಗಣನೀಯವಾಗಿ ಉಷ್ಣಾಂಶ ಏರುತ್ತಿದೆ. ಮತ್ತೊಂದೆಡೆ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಕೆಲವೆಡೆ 1400 ಅಡಿ ಕೊರೆದರೂ ನೀರು ಸಿಗುವ ಖಾತ್ರಿ ಇಲ್ಲದಾಗಿದೆ.


ಪಟ್ಟಣದ ಜನರು ನೀರಿಗಾಗಿ ದಿನವಿಡೀ ಕೊಡ ಹಿಡಿದು ಅಲೆದಾಡುತ್ತಿದ್ದಾರೆ. ಪಟ್ಟಣದ ವಿಜಯನಗರ, ವಿವೇಕಾನಂದ ನಗರ ಸೇರಿದತೆ ಕೆಲವೆಡೆ ತಿಂಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಬೀದಿ ನಲ್ಲಿಯಲ್ಲಿ ನೀರು ಬಂದಾಗ ಮಹಿಳೆಯರು, ಮಕ್ಕಳು, ಮುದುಕರಾದಿಯಾಗಿ ನೀರು ಸಂಗ್ರಹಿಸಲು ಸಾಹಸ ಮಾಡುತ್ತಿದ್ದಾರೆ. ಪ್ರತಿ ಕೊಳಾಯಿ ಮುಂದೆ ಬಿಂದಿಗೆಗಳು ಸಾಲುಗಟ್ಟಿರುತ್ತವೆ. ಒಬ್ಬರು ನಾಲ್ಕು ಬಿಂದಿಗೆಯಲ್ಲಿ ಮಾತ್ರ ನೀರು ಸಂಗ್ರಹಿಸಬೇಕು ಎಂಬ ನಿಬಂಧನೆ ಕೆಲ ಬೀದಿಗಳಲ್ಲಿ ಚಾಲ್ತಿಯಲ್ಲಿದೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪುರಸಭೆಯ ನೀರು ಖರೀದಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ.ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೆಲ ದಿನ ಹಿಂದೆ ಪುರಸಭೆ ಸದಸ್ಯ ಮಹಮದ್ ಗೌಸ್ ಒತ್ತಾಯಿಸಿದ್ದರು. ಆದರೆ ಪ್ರಯೋಜನವಾಗಿಲ್ಲ.  ಅನಿಯಮಿತ ವಿದ್ಯುತ್ ಕಡಿತದಿಂದ ನೀರಿನ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.

ಟ್ಯಾಂಕರ್ ಬೆಲೆ ದ್ವಿಗುಣ: ದುಡ್ಡು ಕೊಟ್ಟರೂ ತಕ್ಷಣಕ್ಕೆ ನೀರು ಸಿಗದ ಸಂದಿಗ್ಧ ಸ್ಥಿತಿ ಉಂಟಾಗಿದೆ. ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಮಾಲೀಕರು ಬೆಲೆ ದುಪ್ಪಟಗೊಳಿಸಿದ್ದಾರೆ. ಅಲ್ಲದೆ ಬೇಡಿಕೆ ಹಿರಿತನದ ಆಧಾರದಲ್ಲಿ ನೀರು ಪೂರೈಸಲಾಗುತ್ತಿದೆ. ಮೊದಲೇ ನಿಗದಿ ಮಾಡಿ ಮೂರ‌್ನಾಲ್ಕು ದಿನ ಕಳೆದರೂ ಟ್ಯಾಂಕರ್ ನೀರು ಸಿಗುವ ಗ್ಯಾರಂಟಿ ಇಲ್ಲವಾಗಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಎಸ್.ಎನ್.ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀರು ಪೂರೈಸಲಾಗುತ್ತಿದ್ದು ಜನತೆಗೆ ಕೊಂಚ ನಿರಾಳ ಎನಿಸಿತ್ತು. ಈಗ ಆ ಸನ್ನಿವೇಶವಿಲ್ಲ.

ಅಂತರ್ಜಲ: ಪ್ರತಿ ಮನೆಯಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಪುರಸಭೆ ಕ್ರಮ ಕೈಗೊಳ್ಳಬೇಕು. ನೀರನ್ನು ಮಿತವಾಗಿ ಬಳಸುವಂತೆ ಜನರಲ್ಲಿ ಜಲ ಸಾಕ್ಷರತೆ ಹರಡಬೇಕು. ಕೆರೆ, ಕುಂಟೆಗಳ ಹೂಳು ತೆಗೆಸಿ, ನಿರ್ವಹಿಸಲು ಜನರು ಮುಂದಾಗಬೇಕು.

ಪರಮಶಿವಯ್ಯ ವರದಿ ಜಾರಿಗೊಳಿಸಿ, ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂಬ ಬೇಡಿಕೆಗಳು ಹಾಗೇ ಉಳಿದಿವೆ.
ವರ್ತೂರು ಕೆರೆ ಮೂಲಕ ತಮಿಳುನಾಡಿಗೆ ಹರಿಯುತ್ತಿರುವ ಅನುಪಯುಕ್ತ ನೀರನ್ನು ಶುದ್ಧೀಕರಿಸಿ ಪಟ್ಟಣದ ಕೆರೆಗಳಿಗೆ ಹರಿಯಿಸುವುದರಿಂದ ಸ್ವಲ್ಪ ಮಟ್ಟಿಗೆ ಅಂತರ್ಜಲ ವೃದ್ಧಿಯಾಗಲಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.