ಕೋಲಾರ: ತಾಲ್ಲೂಕಿನ ಮಂಗಸಂದ್ರ ಸಮೀಪ ನಿರ್ಮಾಣ ಹಂತದಲ್ಲಿ ಸ್ಥಗಿತಗೊಂಡಿರುವ ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿಗೆ ಕೂಡಲೇ ಚಾಲನೆ ಕೊಡಬೇಕು ಎಂದು ಆಗ್ರಹಿಸಿ ಕೇಂದ್ರದ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಾಲಕರ ಸರ್ಕಾರಿ ಕಾಲೇಜಿನ ಒಳ ಆವರಣದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೇಂದ್ರದಲ್ಲಿ ಹಲವು ಸಮಸ್ಯೆಗಳಿವೆ. ಶೌಚಾಲಯ, ಗ್ರಂಥಾಲಯ, ವಿದ್ಯಾರ್ಥಿ ಕೊಠಡಿ, ಅಧ್ಯಾಪಕರ ಕೊಠಡಿ, ತರಗತಿ ಕೊಠಡಿಗಳ ಕೊರತೆ ಹೆಚ್ಚಿದೆ. ಇದೇ ವೇಳೆ, ಹೊಸ ಕಟ್ಟಡ ಕಾಮಗಾರಿ ಕೆಲವು ವರ್ಷಗಳಿಂದ ತೆವಳುತ್ತಿದೆ.
ಕೆಲವು ತಿಂಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಪೂರ್ಣ ಗೊಳಿಸಬೇಕು ಎಂದು ಧರಣಿ, ಪ್ರತಿಭಟನೆ ನಡೆಸಿದ ಸಂದರ್ಭಗಳಲ್ಲಿ ಭರವಸೆ ನೀಡುವ ವಿವಿ ಅಧಿಕಾರಿಗಳು ನಂತರ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಕೇಂದ್ರದ ಎಲ್ಲರಿಗೂ ತೊಂದರೆಯಾಗಿದೆ ಎಂದು ಆರೋಪಿಸಿದರು.
ಕೇಂದ್ರದಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಕಾಲೇಜು ವೃತ್ತ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಮುಖಂಡ ಸುರೇಶ್‌ಗೌಡ, ವಿದ್ಯಾರ್ಥಿಗಳಾದ ದೇವರಾಜ್, ಶಂಕರ್, ಶ್ರೀನಿವಾಸ್, ಕೃಷ್ಣಪ್ಪ, ಹರೀಶ್, ತಿಮ್ಮರಾಯಪ್ಪ, ಮಂಜುನಾಥ್, ಶಿಲ್ಪ, ಭಾರ್ಗವಿ, ಮಂಜುಳ, ಜಯಮ್ಮ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.