ADVERTISEMENT

ಬಂಜರು ಭೂಮಿಯಲ್ಲಿ ಭರ್ಜರಿ ಟೊಮೆಟೊ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 8:10 IST
Last Updated 15 ಜುಲೈ 2013, 8:10 IST

ಮಾಲೂರು: ಕಲ್ಲುಗುಡ್ಡಗಳ ಇಳಿಜಾರು ಪ್ರದೇಶವಾಗಿರುವ ಬಂಜರು ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂದು ಮೂಗು ಮುರಿಯವರೇ ಹೆಚ್ಚಾಗಿರುವ ದಿನಗಳಲ್ಲಿ ತಾಲ್ಲೂಕಿನ ನಲ್ಲದಿಮ್ಮನಹಳ್ಳಿಯ ರೈತ ರಾಮಣ್ಣ ನಾಯಕ್ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.

ತಾಲ್ಲೂಕಿನ ಟೇಕಲ್ ಹೋಬಳಿಯ ನೂಟವೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲದಿಮ್ಮನಹಳ್ಳಿಯ ಗ್ರಾಮವು ಕಲ್ಲುಗುಡ್ಡಗಳಿಂದ ಕೂಡಿದ ಗ್ರಾಮ. ಸಮತಟ್ಟು ಭೂಮಿ ಕಾಣುವುದೇ ದುರ್ಲಭವಾಗಿರುವ  ಪ್ರದೇಶದಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ ಎಂದು ಸ್ವತಃ ನಾಯಕರ ಕುಟುಂಬದವರೇ ನಿರ್ಲಕ್ಷಿಸಿದ್ದರು. ಭೂಮಿ ಸರಿಯಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ, ಕೂಲಿ ಆಳುಗಳು ಸಿಗುವುದಿಲ್ಲ ಹಾಗೂ ನೀರಿನ ಸಮಸ್ಯೆ  ಮುಂದಿಟ್ಟು ಇಲ್ಲಿನ ರೈತರು ನೂರಾರು ಎಕರೆ ಭೂಮಿಯನ್ನು ಜಲ್ಲಿ ಕ್ರಷರ್ಸ್‌ ಸೇರಿದಂತೆ ಇತರೆ ಉಪಯೋಗಕ್ಕೆ ಭೂಮಿಯನ್ನು ಗುತ್ತಿಗೆಗೆ ನೀಡಿ ಸುಮ್ಮನಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಮಣ್ಣನಾಯಕ್ 3 ಲಕ್ಷ ರೂಪಾಯಿ ವೆಚ್ಚ ಮಾಡಿ 5 ಎಕರೆ ಭೂಮಿಯನ್ನು  ಸಮತಟ್ಟುಗೊಳಿಸಿ 3 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದು 20 ಲಕ್ಷ ಗಳಿಸುವ ಮೂಲಕ ಎಲ್ಲರ ಕಣ್ಣರಳಿಸಿದ್ದಾರೆ.

ಫಲವತ್ತಾದ ಭೂಮಿ: ಬಂಗಾರಪೇಟೆಯ ಅರಣ್ಯ ವಲಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ತಾಲ್ಲೂಕಿನ ನಲ್ಲದಿಮ್ಮನಹಳ್ಳಿ ಗ್ರಾಮದ ರಾಮಣ್ಣ ನಾಯಕ್ ಗಿಡ, ಮರ, ಬಂಡೆಗಳಿಂದ ಕೂಡಿದ್ದ ಭೂಮಿಯನ್ನು ಸವಾಲಾಗಿ ಸ್ವೀಕರಿಸಿ ಜೆ.ಸಿ.ಬಿ. ಮೂಲಕ ಜೆಸಿಬಿ ಯಂತ್ರಗಳ ಮೂಲಕ ಸಮತಟ್ಟು ಮಾಡಿ ಭೂಮಿಯನ್ನು ಹದಮಾಡಿ ಕೊಟ್ಟಿಗೆ ಗೊಬ್ಬರ ಮತ್ತು ಕೋಳಿ ಗೊಬ್ಬರವನ್ನು ತಮಿಳುನಾಡಿನ ಕೃಷ್ಣಗಿರಿಯಿಂದ ಖರೀದಿಸಿ ತಂದು ಭೂಮಿಗೆ ಹಾಕಿ ಫಲವತ್ತತೆಗೊಳಿಸಿದ್ದಾರೆ.

ಅದೇ ಜಮೀನಿನಲ್ಲಿ ಕೊರೆಯಿಸಿದ ಒಂದೇ ಕೊಳವೆ ಬಾವಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಸಿಕ್ಕಿದ್ದು, ಹನಿ ನೀರಾವರಿ ಅಳವಡಿಸಿದ್ದಾರೆ. ಆಯಿಷ್ಮಾನ್ ತಳಿಯ 16 ಸಾವಿರ ಟೊಮೆಟೊ ಸಸಿಯನ್ನು 3 ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದಾರೆ. 

ಪ್ರತಿನಿತ್ಯ 10 ಮಂದಿ ಕೂಲಿ ಆಳುಗಳಿಗೆ ಕೆಲಸ ಒದಗಿಸಿದ್ದು, ದಿನವೊಂದಕ್ಕೆ ಗಂಡು ಕೂಲಿಕಾರ್ಮಿಕರಿಗೆ 200 ರೂಪಾಯಿ ಹಾಗೂ ಹೆಣ್ಣು ಕೂಲಿ ಕಾರ್ಮಿಕರಿಗೆ 150 ರೂಪಾಯಿ ನೀಡುತ್ತಿದ್ದಾರೆ. ದಿನ ಬಿಟ್ಟು ದಿನ ಟೊಮೆಟೋ ಕಟಾವು ಮಾಡುತ್ತಿದ್ದು ಒಂದು ದಿನಕ್ಕೆ ತಲಾ 15 ಕೆಜಿಯ 350 ರಿಂದ 400 ಬಾಕ್ಸ್ ಟೊಮೆಟೊ ಸಿಗುತ್ತಿದೆ.

ಕೋಲಾರ ಮಾರುಕಟ್ಟೆಗೆ ಟೊಮೆಟೊವನ್ನು ಸರಬರಾಜು ಮಾಡುತ್ತಿದ್ದು, ಬಾಕ್ಸ್ ಒಂದಕ್ಕೆ 650 ರಿಂದ 700 ರೂಪಾಯಿ ಬೆಲೆ ದೊರಕಿದೆ.
ಇಲ್ಲಿಯ ತನಕ ಮಾರುಕಟ್ಟೆಗೆ ಎರಡೂವರೆ ಟನ್‌ನಿಂದ ಮೂರು ಟನ್ ಟೊಮೆಟೊ ಸರಬರಾಜು ಮಾಡಲಾಗಿದೆ. 10 ಲಕ್ಷ ರೂಪಾಯಿ ಸಂಪಾದನೆಯಾಗಿದೆ.

ಇನ್ನೂ ಗಿಡಗಳಲ್ಲಿ 3 ರಿಂದ 4 ಟನ್ ಟೊಮೆಟೊ ಸಿಗುವುದರಿಂದ ಬೆಲೆ ಇದೇ ರೀತಿ ಮುಂದುವರಿದರೆ 10 ಲಕ್ಷ ರೂಪಾಯಿ ಸಂಪಾದನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.  ಟೊಮೆಟೊ ಬೆಳೆಗೆ  ಇಂಥ ಬೆಲೆ ದೊರೆತು 10 ವರ್ಷಗಳಾಗಿತ್ತು.

ಇತ್ತೀಚಿನ ದಿನಗಳಲ್ಲಿ ಮಳೆ ಜಾಸ್ತಿಯಾಗಿ ಆಂಧ್ರ ತಮಿಳುನಾಡು ಭಾಗಗಳಲ್ಲಿ ಬೆಳೆಯಾಗದೇ ಇರುವುದರಿಂದ ಜಿಲ್ಲೆಯಲ್ಲಿ ಟೊಮೆಟೊ ಬೆಳೆದಿರುವ ರೈತರಿಗೆ ಬಂಪರ್ ಬೆಲೆ ದೊರಕಿದೆ ಎಂದು ರಾಮಣ್ಣನಾಯಕ್ `ಪ್ರಜಾವಾಣಿ'ಗೆ ತಿಳಿಸಿದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.