ಶ್ರೀನಿವಾಸಪುರ: ತಾಲ್ಲೂಕಿನ ರೈತರು ಒಂದೇ ಬೆಳೆ ಬೆಳೆದು ಉಂಟಾಗುವ ನಷ್ಟ ತಪ್ಪಿಸಲು ತಾಕು ಪದ್ಧತಿಯಲ್ಲಿ ಬಹು ಬೆಳೆಗಳನ್ನು ಬೆಳೆಯತೊಡಗಿದ್ದಾರೆ. ಈ ಹಿಂದೆ ಟೊಮೆಟೊ, ಕೋಸು, ಆಲೂಗಡ್ಡೆ, ದೊಣ್ಣೆ ಮೆಣಸಿನ ಕಾಯಿ ಮುಂತಾದ ಬೆಳೆಗಳ ಪೈಕಿ ಯಾವುದಾದರೂ ಒಂದು ಬೆಳೆಯನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದರು.
ಮನೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಕಾಯಿ, ಸೊಪ್ಪು ಹಾಗೂ ತರಕಾರಿಗಳನ್ನು ಮಾರುಕಟ್ಟೆಯಿಂದ ಕೊಂಡು ತರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ.
ಈ ಹಿಂದೆ ಈರುಳ್ಳಿ ಬೆಲೆ ಗಗನಕ್ಕೆ ಏರಿದ ಹಿನ್ನೆಲೆಯಲ್ಲಿ ರೈತರು ಮನೆಗೆ ಅಗತ್ಯವಾದ ಬೆಳೆಗಳನ್ನು ಬೆಳೆಯತೊಡಗಿದ್ದಾರೆ. ವಾನರಾಸಿ ಗ್ರಾಮದ ಸಮೀಪ ರೈತರೊಬ್ಬರು ಕಡಿಮೆ ವಿಸ್ತೀರ್ಣದಲ್ಲಿ ದನಗಳಿಗೆ ಜೋಳದ ದಂಟು, ಮನೆಗೆ ಬೇಕಾದ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಕಾಯಿ, ಸೊಪ್ಪು ಇತ್ಯಾದಿಗಳನ್ನು ಬೆಳೆದಿದ್ದಾರೆ.
ಹೀಗೆ ಬೆಳೆದ ಎಲ್ಲವನ್ನು ಮನೆಗೆ ಉಳಿಸಿಕೊಳ್ಳುವುದಿಲ್ಲ. ಹೆಚ್ಚುವರಿ ಉತ್ಪನ್ನವನ್ನು ಸಮೀಪದ ಮಾರುಕಟ್ಟೆಗೆ ಕೊಂಡೊಯ್ದು ಮಾರಿ ನಾಲ್ಕು ಕಾಸು ಸಂಪಾದಿಸುತ್ತಾರೆ.
ಈ ಹಿಂದೆ ಮನೆಗಳ ಹಿಂದೆ ಕೈತೋಟ ಬೆಳೆಸುತ್ತಿದ್ದರು. ಸಮೀಪದ ಕುಂಟೆ ಅಥವಾ ಬಾವಿಯಿಂದ ನೀರನ್ನು ಹೊತ್ತು ತಂದು ಮನವೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರು. ಆದರೆ ಈಗ ನೀರಿನ ಅಭಾವ ಹೆಚ್ಚಿದೆ ಮತ್ತು ಕೋತಿ ಕಾಟ ವಿಪರೀತವಾಗಿದೆ.
ಇದರಿಂದ ಕೈತೋಟ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದೆ. ದಿನೇ ದಿನೇ ಅಂತರ್ಜಲ ಕುಸಿಯುತ್ತಿರುವುದರಿಂದ ತೋಟಗಳಲ್ಲಿಯೂ ಬೆಳೆ ಇಡುವ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ತಡವಾಗಿಯಾದರೂ ರೈತರು ಎಚ್ಚೆತ್ತುಕೊಂಡಿದ್ದಾರೆ.ಮನೆ ಅಗತ್ಯಗಳಿಗೆ ಸ್ಪಂದಿಸಿ ಬೆಳೆ ಇಡುತ್ತಿದ್ದಾರೆ. ಏಕ ಬೆಳೆ ಪದ್ಧತಿಯನ್ನು ಕೈಬಿಟ್ಟು ಬಹುಬೆಳೆ ಪದ್ಧತಿಗೆ ಮಣೆ ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.