ಮುಳಬಾಗಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಮೂಲಕ ಮಲ್ಲಪನಹಳ್ಳಿ ಗ್ರಾಮ ಸಂಪರ್ಕಿಸುವ ದೇವರಾಯಸಮುದ್ರ ಕೆರೆಕಟ್ಟೆ ಮೇಲಿರುವ ವಿದ್ಯುತ್ ಕಂಬ ಉರುಳಿ ಬೀಳುವ ಸ್ಥಿತಿಯಲ್ಲಿದೆ.
ಜನರು ಮತ್ತು ಆಟೊ, ದ್ವಿಚಕ್ರ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಕಟ್ಟೆಯ ಮೇಲ್ಭಾಗದ ವಿದ್ಯುತ್ ಕಂಬಗಳು ಕೆಳಕ್ಕೆ ಉರುಳಿರುವ ಕಾರಣ ಜನರು ಭೀತರಾಗಿದ್ದಾರೆ.
ದೇವರಾಯ ಸಮುದ್ರದಿಂದ ಮಲ್ಲಪನಹಳ್ಳಿ, ಬೆಳ್ಳಂಬಳ್ಳಿ, ದೊಡ್ಡಿಗಾನಹಳ್ಳಿ ಗ್ರಾಮಗಳಿಗೆ ವಿದ್ಯುತ್ ತಂತಿಗಳು ಹಾದು ಹೋಗಿವೆ. ವಾಲಿದ ವಿದ್ಯುತ್ ಕಂಬಗಳನ್ನು ಕಟ್ಟೆಯ ಕಲ್ಲೊಂದಕ್ಕೆ ಕಂಬಿಯಿಂದ ಎಳೆದು ಕಟ್ಟಲಾಗಿದೆ. ಕಟ್ಟೆಯ ಕಲ್ಲುಗಳೂ ಕೂಡ ಕಿತ್ತು ಹೋಗುವ ಸ್ಥಿತಿ ತಲುಪಿವೆ. ಇದರಿಂದ ದಾರಿಯಲ್ಲಿ ಜನರು ಸಂಚರಿಸಲು ಭಯಪಡುವಂತಾಗಿದೆ.
ಮಲ್ಲಪನಹಳ್ಳಿ ಗ್ರಾಮದಿಂದ ದೇವರಾಯಸಮುದ್ರಕ್ಕೆ ಹೆದ್ದಾರಿ ಮೂಲಕ ಬರಬೇಕಾದರೆ 4 ಕಿ.ಮೀ ಬೇಕು. ಕೆರೆಕಟ್ಟೆ ರಸ್ತೆ ಮೂಲಕ ಬಂದರೆ 1 ಕಿ.ಮೀ ಆಗುತ್ತದೆ. ಹಾಗಾಗಿ ಗ್ರಾಮಸ್ಥರೆಲ್ಲರೂ ಇದೇ ದಾರಿಯನ್ನು ಬಳಸುತ್ತಿದ್ದಾರೆ.
ಹಾಲಿನ ಡೇರಿ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಗ್ರಾಮ ಪಂಚಾಯಿತಿ ಕಚೇರಿ ಸೇರಿದಂತೆ ಹಲವಾರು ಕೆಲಸ ಕಾರ್ಯಗಳಿಗೆ ಇದೇ ದಾರಿಯಲ್ಲಿ ಬಂದು ಹೋಗುತ್ತಾರೆ. ಜನ ಸಂಚಾರ ಹೆಚ್ಚಾಗಿರುವ ಕಾರಣ, ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಬದಲಿಸಲು ಶೀಘ್ರ ಗಮನ ಹರಿಸಬೇಕು ಎಂದು ಮಲ್ಲಪನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೊನಗಾನಹಳ್ಳಿ ಗ್ರಾಮದ ಕೆರೆಕಟ್ಟೆಯ ಮೇಲೂ ಇದೇ ರೀತಿ ವಿದ್ಯುತ್ ತಂತಿ ನೇತಾಡುತ್ತಿದೆ. ಕಂಬ ಬೀಳುವ ಸ್ಥಿತಿಯಲ್ಲಿದೆ. ಗ್ರಾಮದಿಂದ ಹೊಲ ಗದ್ದೆಗಳಿಗೆ ಹೋಗಲು ಇದೇ ಹಾದಿ ಬಳಸಬೇಕಿದೆ. ಯಾವುದೇ ಸಮಯದಲ್ಲಿ ವಿದ್ಯುತ್ ತಂತಿ ಕಳಚಿ ಬೀಳಬಹುದು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.