ADVERTISEMENT

ಭೂ ಸುಧಾರಣಾ ಕಾಯ್ದೆ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:12 IST
Last Updated 12 ಡಿಸೆಂಬರ್ 2012, 11:12 IST

ಶ್ರೀನಿವಾಸಪುರ: ರಾಜ್ಯ ಸರ್ಕಾರ ಕಳೆದ ಬಜೆಟ್ ಅಧಿವೇಶನದಲ್ಲಿ ಸದನದ ಮುಂದೆ ತಂದಿರುವ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಪ್ರತಿಗಾಮಿಯಾಗಿದ್ದು, ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಪಟ್ಟಣದಲ್ಲಿ ಈಚೆಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಿಜೆಪಿ ಸರ್ಕಾರ ಬರಲಿರುವ ಮುಂಗಾರು ಅಧಿವೇಶನದಲ್ಲಿ ಜಾರಿ ಮಾಡಲು ಹೊರಟಿರುವ ತಿದ್ದುಪಡಿಗಳು ಹೆಚ್ಚು ಅಪಾಯಕಾರಿಯಾಗಿವೆ. ಬೇಸಾಯ ಆಧಾರಿತ ಕೈಗಾರಿಕೆಗಳು, ಬೇಸಾಯ ಸಂಸ್ಕರಣ ಕೈಗಾರಿಕೆಗಳು, ಸುಗ್ಗಿ ನಂತರದ ಕಾರ್ಯಾರಂಭ ಮತ್ತು ಬೇಸಾಯ ಮೂಲ ಸೌಕರ್ಯ ಎಂದು ಸೇರ್ಪಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಈ ತಿದ್ದುಪಡಿ ಅಂಗೀಕರಿಸಿದರೆ ಕೈಗಾರಿಕೆಗಳಿಗೆ ಕೃಷಿ ಕ್ಷೇತ್ರದಲ್ಲಿ ನುಗ್ಗಲು ಬಾಗಿಲು ತೆರೆದಂತಾಗುತ್ತದೆ. ಕೃಷಿಗೂ ಕೈಗಾರಿಕೆಗೂ ವ್ಯತ್ಯಾಸ ಇರುವುದಿಲ್ಲ. ಕೈಗಾರಿಕೋದ್ಯಮಿಗಳು ತಾವೂ ರೈತರೆಂದು ಹೇಳಿಕೊಂಡು ಕೃಷಿ ಕ್ಷೇತ್ರಕ್ಕೆ ಸಿಗುವ ಎಲ್ಲಾ ರಿಯಾಯಿತಿ, ಸೌಲಭ್ಯ ಕಬಳಿಸಲು ಸಾಧ್ಯವಾಗುತ್ತದೆ. ಅವರ ಒಟ್ಟು ಆದಾಯವನ್ನು ಕೃಷಿ ಆದಾಯವೆಂದು ತೋರಿಸಲು ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ತಿದ್ದುಪಡಿ ರೈತ ಸಮುದಾಯಕ್ಕೆ ಅಪಾಯಕಾರಿಯಾಗಿದ್ದು, ಜಾರಿಗೆ ಬಂದರೆ ರೈತ ಸಂಕಷ್ಟಕ್ಕೆ ಒಳಗಾಗುತ್ತಾನೆ. ಈವರೆಗೆ ರೈತ ಭೂಮಿಯನ್ನು ಭೂಹೀನ ಬಡವ ಗೇಣಿ ಆಧಾರದಲ್ಲಿ ಪಡೆದು ಬೇಸಾಯ ಮಾಡುತ್ತಿದ್ದ. ಈಗ ಅಗತ್ಯಕ್ಕಾಗಿ ತನ್ನ ಭೂಮಿಯನ್ನು ಬೃಹತ್ ಕಂಪೆನಿಗಳಿಗೆ ಗೇಣಿ ಆಧಾರದಲ್ಲಿ ಕೊಟ್ಟು ಗುಲಾಮನಾಗಲು ಸರ್ಕಾರ ಆಹ್ವಾನ ನೀಡಿದೆ. ದೀರ್ಘಾವಧಿ ಗೇಣಿ ಎಂದರೆ ರೈತರು ತಮ್ಮ ಜಮೀನನ್ನು ಶಾಶ್ವತವಾಗಿ ಕಂಪೆನಿಗೆ ಕೊಟ್ಟಂತೆಯೆ ಎಂದು ವಿಶ್ಲೇಷಿಸಿದರು.

ಕಂಪೆನಿಗಳ ಅನುಕೂಲಕ್ಕಾಗಿ ಮತ್ತು ವ್ಯಕ್ತಿಗತ ಲಾಭ ಪಡೆಯುವ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ಪ್ರತಿಗಾಮಿ ತಿದ್ದುಪಡಿ ತರಲು ಉದ್ದೇಶಿಸಿರುವ ಸರ್ಕಾರದ ಕ್ರಮವನ್ನು ರೈತ ಸಮುದಾಯ ವಿರೋಧಿಸಬೇಕು. 2012ನೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಸದನದಲ್ಲಿ ಅಂಗೀಕಾರವಾಗದಂತೆ ತಡೆಯಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಪಿ.ಆರ್.ನವೀನ್ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮುಖಂಡ ಆನಂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.