ADVERTISEMENT

ಮತ್ತೆ ಕಾಣಿಸಿಕೊಂಡ ಆನೆ-ಆತಂಕಕ್ಕೀಡಾದ ಜನತೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:59 IST
Last Updated 10 ಏಪ್ರಿಲ್ 2013, 6:59 IST
ಮತ್ತೆ ಕಾಣಿಸಿಕೊಂಡ ಆನೆ-ಆತಂಕಕ್ಕೀಡಾದ ಜನತೆ
ಮತ್ತೆ ಕಾಣಿಸಿಕೊಂಡ ಆನೆ-ಆತಂಕಕ್ಕೀಡಾದ ಜನತೆ   

ಕೆಜಿಎಫ್: ಕಳೆದ ಫೆಬ್ರುವರಿ ತಿಂಗಳು ಪೂರ್ತಿ ಪೊಲೀಸರು, ಅರಣ್ಯ ಇಲಾಖೆ, ಗ್ರಾಮೀಣ ಭಾಗದ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿ, ತಮಿಳುನಾಡಿಗೆ ವಾಪಸ್ ತೆರಳಿದ್ದ ಕಾಡಾನೆಗಳು ಸೋಮವಾರ ಮುಂಜಾನೆ ಪುನಃ ನಗರ ಪ್ರವೇಶಿಸಿವೆ.

ಮುಂಜಾನೆ ಒಂದು ಗಂಟೆ ಸಮಯದಲ್ಲಿ ಚಿನ್ನದ ಗಣಿಯ ಶಾಫ್ಟ್‌ಗಳ ಬಳಿ ಬೆಳೆದಿರುವ ಹುಲ್ಲಿನ ಪೊದೆಗಳ ಬಳಿ ಕಾಣಿಸಿಕೊಂಡ ಆನೆಗಳು ಮಾರಿಕುಪ್ಪಂ ಪೊಲೀಸ್ ಠಾಣೆವರೆಗೂ ಬಂದವು. ಕತ್ತಲಲ್ಲಿ ಎರಡು ಆನೆಗಳನ್ನು ಗುರುತಿಸಿದ ಪೊಲೀಸ್ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಇಡೀ ರಾತ್ರಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಜಾಡನ್ನು ಕಂಡು ಹಿಡಿಯಲು ಪ್ರಯತ್ನಿಸಿದರು.

ತಮಿಳುನಾಡಿನ ಕೃಷ್ಣಗಿರಿ ಕಾಡಿನಿಂದ ಕಾಮಸಮುದ್ರ ಮಾರ್ಗವಾಗಿ ನಾಲ್ಕು ದಿನಗಳ ಮೊದಲೇ ರಾಜ್ಯಕ್ಕೆ ಆನೆಗಳು ಬಂದ ಬಗ್ಗೆ ಸುದ್ದಿಯಿದ್ದರೂ; ಅವು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿರಲಿಲ್ಲ.

ಫೆಬ್ರುವರಿ ತಿಂಗಳಲ್ಲಿ ಕಾಮಸಮುದ್ರ, ಕೆಜಿಎಫ್ ನಗರ, ಬೇತಮಂಗಲ ಸಮೀಪದ ಪ್ರದೇಶದಲ್ಲಿ ಓಡಾಡಿ ಸಾವಿರಾರು ರೂಪಾಯಿ ಬೆಳೆ ನಾಶ ಮಾಡಿ, ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆಗಳು ನಂತರ ಒಂದು ತಿಂಗಳ ನಂತರ ತಮಿಳುನಾಡಿಗೆ ವಾಪಸ್ ತೆರಳಿದ್ದವು.

ತಮಿಳುನಾಡಿನ ಕೃಷ್ಣಗಿರಿ ಕಾಡಿನಲ್ಲಿ ಮೇವು, ನೀರಿನ ಕೊರತೆಯಿಂದ ಮರಳಿ ಆನೆಗಳು ಈ ಮಾರ್ಗಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೂಡ ಫೆಬ್ರುವರಿ ತಿಂಗಳಲ್ಲಿ ರಾಜ್ಯಕ್ಕೆ ಬಂದಿದ್ದ ಆನೆಗಳು ಒಬ್ಬ ರೈತನನ್ನು ಬಲಿ ತೆಗೆದುಕೊಂಡಿದ್ದವು. ಪ್ರಸ್ತುತ ಯರಗೋಳು ಕುಡಿಯುವ ನೀರು ಯೋಜನೆಯಿರುವ ಪ್ರದೇಶದಲ್ಲಿ ನೀರು, ಹಸಿರು ಇದೆ. ಕಾಮಸಮುದ್ರ ವೃಷಭಾವತಿ ಕೆರೆ ಕೋಡಿ ನೀರು ಸಾಗುವ ಮಾರ್ಗದಲ್ಲಿ ಸಹ ಹಸಿರು, ನೀರು ಸಿಗುತ್ತಿದೆ. ಈ ಕಾರಣದಿಂದಲೇ ಆನೆಗಳು ತಮಿಳುನಾಡಿನಲ್ಲಿ ಆಹಾರದ ಕೊರತೆ ಉಂಟಾದಾಗ ರಾಜ್ಯಕ್ಕೆ ಬಂದು ಹೋಗುತ್ತಿವೆ.

ವಾಸ್ತವವಾಗಿ ಕೃಷ್ಣಗಿರಿ ಕಾಡು, ಕಾಮಸಮುದ್ರ ಕಾಡು, ಕೆಜಿಎಫ್ ಹೊರವಲಯದ ಮಾರ್ಗವಾಗಿ ಆಂಧ್ರಪ್ರದೇಶದ ವಿ.ಕೋಟೆ ಕಾಡು ಇರುವ ಮಾರ್ಗ ಆನೆ ಪಥವಾಗಿದೆ. ಆಗಾಗ್ಗೆ ಈ ಮಾರ್ಗದಲ್ಲಿ ಆನೆಗಳು ಬರುತ್ತಿದ್ದ ಬಗ್ಗೆ ದಾಖಲೆಗಳು ಇವೆ. ನಗರೀಕರಣ ಈ ಮಾರ್ಗದಲ್ಲಿ ಅಂಥ ಬದಲಾವಣೆಯನ್ನೇನೂ ಮಾಡಿಲ್ಲ. ಈ ಜಾಗದಲ್ಲಿ ಜನವಸತಿಯೂ ಕಡಿಮೆ ಇದೆ. ಆದ್ದರಿಂದಲೇ ಆನೆಗಳು ಈ ಮಾರ್ಗವನ್ನು ಆಗಾಗ್ಗೆ ಉಪಯೋಗಿಸುತ್ತಿವೆ.

ಪ್ರಸ್ತುತ ಎರಡು ಆನೆಗಳನ್ನು ರಾತ್ರಿ ಗುರುತಿಸಲಾಗಿದ್ದರೂ; ಮುಂಜಾನೆ ನಗರದ ಹೊರವಲಯದ ಗಜರಾಜನಹಳ್ಳಿಯ ಕೆರೆಯಲ್ಲಿ ಒಂದು ಗಂಡು ಆನೆ ಮಾತ್ರ ಕಂಡು ಬಂದಿದೆ. ಮತ್ತೊಂದು ಆನೆ ಎಲ್ಲಿ ಹೋಗಿದೆ ಎಂಬ ಹುಡುಕಾಟದಲ್ಲಿ ಅರಣ್ಯ ಸಿಬ್ಬಂದಿ ತೊಡಗಿದ್ದಾರೆ. ಸುಮಾರು ಐದು ಆನೆಗಳು ಕರ್ನಾಟಕದತ್ತ ಬಂದಿವೆ ಎಂಬ ಮಾಹಿತಿ ಇರುವುದರಿಂದ ಆನೆಗಳು ಚದುರಿ ಹೋಗಿರುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂಟಿ ಆನೆ ದಾಳಿ ನಡೆಸುವ ಸ್ವಭಾವ ಹೊಂದಿರುವುದರಿಂದ ಬಳಿ ಹೋಗುವುದು, ಕೀಟಲೆ ಮಾಡುವುದನ್ನು ತಡೆಯುವುದೇ ಪೊಲೀಸರಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ. ಕಳೆದ ತಿಂಗಳು ಆನೆಯಿಂದ ಮೃತಪಟ್ಟ ಇಬ್ಬರೂ ವ್ಯಕ್ತಿಗಳು ಸಹ ಆನೆಯನ್ನು ಸಮೀಪದಿಂದ ನೋಡಲು ಹೋಗಿ ಮೃತಪಟ್ಟವರಾಗಿದ್ದು, ಜನ ಜಾತ್ರೆ ತಡೆಯುವುದೇ ಇಲಾಖೆಗೆ ದೊಡ್ಡ ಸಾಹಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.