ಕೋಲಾರ: ಮಹಿಳೆಯರಿಗೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಬೇಕು. ಪಡಿತರ ವ್ಯವಸ್ಥೆ ಸಾರ್ವತ್ರೀಕರಣಗೊಳಿಸಬೇಕು, ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ಜನವಾದಿ ಮಹಿಳಾ ಸಂಘಟನೆ ಏರ್ಪಡಿಸಿದ್ದ ಜೈಲ್ ಭರೋ-ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ನಗರದ ಪ್ರವಾಸಿ ಮಂದಿರದಿಂದ ಮಧ್ಯಾಹ್ನ 12ಕ್ಕೆ ಶುರುವಾದ ಮೆರವಣಿಗೆ ಎಂ.ಜಿ.ರಸ್ತೆ ಮೂಲಕ ಪ್ರಧಾನ ಅಂಚೆ ಕಚೇರಿಯಲ್ಲಿ ಕೊನೆಗೊಂಡಿತು.
ಅಲ್ಲಿ, ಮಹಿಳೆಯರ ಬೇಡಿಕೆ ಕುರಿತು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಗೀತಾ ಮಾತನಾಡಿದರು.
ನಂತರ ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರನ್ನು ಪೊಲೀಸರು ಬಂಧಿಸಿದರು. ಗಲ್‌ಪೇಟೆ ಠಾಣೆಗೆ ಮಹಿಳೆಯರನ್ನು ಕರೆದೊಯ್ದ ಪೊಲೀಸರು ನಂತರ ಬಿಡುಗಡೆ ಮಾಡಿದರು. ಪ್ರಮುಖರಾದ ಜಿಲ್ಲಾ ಘಟಕದ ಅಧ್ಯಕ್ಷೆ ಈಶ್ವರಮ್ಮ, ಖಚಾಂಚಿ ಜ್ಯೋತಿ, ಸುಶೀಲಾ, ಆಂಜಿನಮ್ಮ, ಲೋಕೇಶ್ವರಿ, ನಾಗರತ್ನ ನೇತೃತ್ವ ವಹಿಸಿದ್ದರು. ವಿವಿಧ ತಾಲ್ಲೂಕುಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.