ADVERTISEMENT

ಮಾಲೂರು: ಪೌಷ್ಟಿಕ ಆಹಾರಕ್ಕಾಗಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 6:30 IST
Last Updated 10 ಮಾರ್ಚ್ 2012, 6:30 IST

ಮಾಲೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ 120 ಅಂಗನವಾಡಿ ಕೇಂದ್ರಗಳಲ್ಲಿ 45 ದಿನಗಳಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುತ್ತಿಲ್ಲ ಎಂದು ಆರೋಪಿಸಿ ಅಂಗನವಾಡಿ ಶಿಕ್ಷಕಿಯರು, ಕರವೇ ಕಾರ್ಯಕರ್ತರು ಇಲ್ಲಿನ ಸಿಡಿಪಿಒ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.

ತಾಲ್ಲೂಕಿನಲ್ಲಿ 290 ಅಂಗನವಾಡಿ ಕೇಂದ್ರಗಳಿದ್ದು, 170 ಕೇಂದ್ರಗಳಿಗೆ ಮಾತ್ರ ಆಹಾರ ಸರಬರಾಜು ಮಾಡುತ್ತಿದ್ದು, ಇನ್ನುಳಿದ 120 ಕೇಂದ್ರಗಳಿಗೆ 45 ದಿನಗಳಿಂದ ಶಿಶು ಪೌಷ್ಟಿಕ ಆಹಾರ ಸರಬರಾಜಾಗಿಲ್ಲ. ಇದರಿಂದ ಮಕ್ಕಳಿಗೆ ಮಧ್ಯಾಹ್ನದ ವೇಳೆ ಊಟ ನೀಡಲಾಗುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

ಇದೇ ಸಂದರ್ಭ ಕಚೇರಿ ಭೇಟಿಗಾಗಿ ಬಂದಿದ್ದ ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಿಮಲಾ ಅವರ ಗಮನಕ್ಕೆ ಸಮಸ್ಯೆ ತರಲಾಯಿತು. ಇದಕ್ಕೆ ಸಂದಿಸಿದ ಉಪ ನಿರ್ದೇಶಕಿ ಆದಷ್ಟು ಶೀಘ್ರ ಪರಿಹರಿಸುವ ಭರವಸೆ ನೀಡಿದರು.

ಕರವೇ ತಾಲ್ಲೂಕು ಕಾರ್ಯಾಧ್ಯಕ್ಷ ಬಡಗಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜು, ಸಂಚಾಲಕ ಚಾಕನಹಳ್ಳಿ ನಾಗರಾಜ್, ವಿದ್ಯಾರ್ಥಿ ಮುಖಂಡ ನವೀನ್, ಅಂಗನವಾಡಿ ಕಾರ್ಯಕರ್ತೆಯರಾದ ನಾಗರತ್ನಮ್ಮ, ಜಯಮ್ಮ, ಹೇಮಲತಾ, ಲೋಕೇಶ್ವರಿ ಈ ಸಂದರ್ಭದಲ್ಲಿದ್ದರು.

ಕೊಲೆ: ಮಹಿಳೆ ಬಂಧನ
ಶ್ರೀನಿವಾಸಪುರ: ಪಟ್ಟಣದ ಹಳೆ ಪೇಟೆಯಲ್ಲಿ ಈಚೆಗೆ ಮಂಜುನಾಥ ಎಂಬುವರು ತಮ್ಮ ಪತ್ನಿ ರಶ್ಮಿ ಅವರನ್ನು ಹೊಡೆದು ಸಾಯಿಸಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮೀಳಾ (25) ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.

ಘಟನೆ ನಡೆದ ದಿನದಿಂದ ಪ್ರಮೀಳಾ ತಲೆ ತಪ್ಪಿಸಿಕೊಂಡಿದ್ದರು. ದೊರೆತ ಖಚಿತ ಸುಳಿವಿನ ಮೇರೆಗೆ ಈಚೆಗೆ ಕೋಲಾರದ ಮನೆಯೊಂದಲ್ಲಿ ಆಶ್ರಯ ಪಡೆದಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ಸಿಪಿಐ ಕೆ.ಲಿಂಗಯ್ಯ ತಿಳಿಸಿದರು.

ಬಂಧಿತ ಮಹಿಳೆಯನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಡಿ.ಆರ್.ಪ್ರಕಾಶ್, ವಾಸು ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿತು ಎಂಬುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.