ಶ್ರೀನಿವಾಸಪುರ: ಈಗ ಸುಗ್ಗಿ ಕಾಲ. ಎಲ್ಲೆಲ್ಲೂ ಕಾಳು ಕಾಣುವ ಸಮಯ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿ ಪ್ರಿಯರ ಬಾಯಲ್ಲಿ ನೀರೂರುವ ಪರಿಸರ ನಿರ್ಮಾಣವಾಗಿದೆ.
ಹೌದು, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೊಯಿಲು ಮುಗಿದ ಹೊಲ, ಕಣ, ತಿಪ್ಪೆ, ರಸ್ತೆ ಬದಿ, ಹೀಗೆ ಎಲ್ಲೆಂದರಲ್ಲಿ ನಾಟಿ ಕೋಳಿ ಹಿಂಡುಗಳು ಕಂಡುಬರುತ್ತವೆ. ಇವುಗಳ ಜೊತೆಗೆ ಗಿರಿರಾಜ, ಟರ್ಕಿ, ಸೀಟಿ ಕೋಳಿಗಳು ಸೇರಿಕೊಂಡಿವೆ. ಕಡತನ, ಮೊಟ್ಟೆ ಕೋಳಿ, ಮರಿಕೋಳಿ, ಕೂಗು ತಿರುಗದ ಹುಂಜ, ಕೂಗುವ ಹುಂಜ, ಹೀಗೆ ಬೇರೆ ಬೇರೆ ವಯೋಮಾನದ ಕೋಳಿಗಳು ಹಳ್ಳಿಗಳಲ್ಲಿ ತುಂಬಿಹೋಗಿವೆ.
ನಾಟಿ ಕೋಳಿ ಸಾಕುವುದು ರೈತ ಸಂಸ್ಕೃತಿಯ ಒಂದು ಭಾಗವಾಗಿತ್ತು. ಕೋಳಿ ಸಾಕಾಣಿಕೆ ಕೃಷಿಕರ ಉಪ ಕಸುಬಾಗಿ ಪರಿಣಮಿಸಿತ್ತು.
ಮನೆಯ ಹೊರಗೆ ಮೇದು ಬಂದು ಮೊಟ್ಟೆ ಇಡುತ್ತಿದ್ದವು. ಮರಿ ಮಾಡಿ ಸಂಖ್ಯೆ ಹೆಚ್ಚಿಸುತ್ತಿದ್ದವು. ಸಂಕ್ರಾಂತಿ, ಗಂಗಮ್ಮನ ಹಬ್ಬ, ಮುನಿದ್ಯಾವರ ಸಂದರ್ಭದಲ್ಲಿ ನಾಟಿ ಕೋಳಿ ಕೊಯ್ಯುವುದು ರೂಢಿಯಲ್ಲಿತ್ತು. ನೆಟರಿಷ್ಟರು ಮನೆಗೆ ಹೋದರೆ ನಾಟಿ ಕೋಳಿ ಸಾರು ಸಾಮಾನ್ಯವಾಗಿತ್ತು. ಹುಂಜದ ಬಾಡು ಪಲ್ಯ, ರಾಗಿ ಸೇವಿಗೆ ಹಾಕಿದರಂತೂ, ನೆಂಟರ ಮುಖ ಅರಳುತ್ತಿತ್ತು. ಮನೆಗೆ ಅಗತ್ಯವಾದ ಕೋಳಿ, ಮೊಟ್ಟೆ ಉಳಿಸಿಕೊಂಡು, ಹೆಚ್ಚಿನದನ್ನು ಮಾರಿಬಿಡುತ್ತಿದ್ದರು. ಖರ್ಚಿಗೆ ನಾಲ್ಕು ಕಾಸು ಸಿಗುತ್ತಿತ್ತು.
ಕೊಳವೆ ಬಾವಿ ಸಂಸ್ಕೃತಿ ಆರಂಭದೊಂದಿಗೆ, ಹಳ್ಳಿ ಸಮೀಪದ ಜಮೀನೂ ಸಹ ಕೃಷಿಗೆ ಬಳಸಲ್ಪಟ್ಟಿತು. ಸಾಂಪ್ರದಾಯಿಕ ಹೊಲ ನೇಪಥ್ಯಕ್ಕೆ ಸರಿಯಿತು. ಕೋಳಿ ಮನೆಯಿಂದ ಹೊರಟರೆ ತೋಟ ಸೇರುತ್ತಿತ್ತು. ಬೆಳೆದ ಬೆಳೆ ಕೋಳಿ ಪಾಲಾಗತೊಡಗಿತು. ಇದರಿಂದ ಹಳ್ಳಿಗಳಲ್ಲಿ ಜಗಳ ಶುರುವಾಯಿತು. ಕೆಲವರು ತೋಟದ ಅಂಚಲ್ಲಿ ಇಲಿ ಪಾಷಾಣ ಇಟ್ಟು ಕೋಳಿಗಳನ್ನು ಕೊಲ್ಲತೊಡಗಿದರು. ಇದರಿಂದ ಬೇಸತ್ತು ಕೋಳಿ ಸಾಕುವುದೇ ಬೇಡ ಎಂದು ಕೆಲವು ವರ್ಷಗಳ ಕಾಲ ಬಿಡಲಾಯಿತು.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂತರ್ಜಲ ಕೊರತೆಯಿಂದಾಗಿ ಹಳ್ಳಿ ಸಮೀಪದ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿವೆ. ನೀರಾವರಿ ಕೃಷಿ ನಿಂತುಹೋಗಿದೆ. ಮತ್ತೆ ಮಳೆ ಆಶ್ರಯದಲ್ಲಿ ಸಾಂಪ್ರದಾಯಿಕ ಬೇಸಾಯ ಪ್ರಾರಂಭವಾಗಿದೆ. ಹಾಗಾಗಿ ನಾಟಿ ಕೋಳಿ ಸಾಕಾಣಿಕೆ ಹಿಂದಿನ ವೈಭವ ಪಡೆದುಕೊಂಡಿದೆ.
ಈಗ ನಾಟಿ ಕೋಳಿ ಸಾಕಾಣಿಕೆ ಆರ್ಥಿಕ ಲಾಭ ತರುತ್ತಿದೆ. ಒಂದು ಕೆಜಿ ಕೋಳಿ ರೂ.250 ರಂತೆ ಮಾರಾಟವಾಗುತ್ತಿದೆ. ಒಂದು ಕೆಜಿ ಮಾಂಸ ಬೇಕೆಂದರೆ ರೂ.300 ರಿಂದ 350 ತೆರಬೇಕಾಗಿದೆ. ನಾಟಿ ಕೋಳಿ ಮೊಟ್ಟೆಯ ಬೆಲೆಯೂ ಗಗನಕ್ಕೇರಿದೆ. ಮೊಟ್ಟೆಯೊಂದಕ್ಕೆ ರೂ. 12 ರಿಂದ 15 ಕೊಟ್ಟು ಖರೀದಿಸಬೇಕಾಗಿದೆ. ಈ ಬೆಲೆಯಲ್ಲಿ ನಾಟಿ ಕೋಳಿ ಸಾಕಿದ ರೈತರಿಗೆ ಒಳ್ಳೆ ಲಾಭ ಸಿಗುತ್ತಿದೆ.
ಬೇಸಿಗೆ ಬಂತೆಂದರೆ ಕೋಳಿಗಳಿಗೆ ಕೊಕ್ಕರೆ ರೋಗ ಸಾಮಾನ್ಯವಾಗಿತ್ತು. ಹೆಚ್ಚಿನ ಸಂಖ್ಯೆಯ ಕೋಳಿಗಳು ಈ ರೋಗಕ್ಕೆ ಬಲಿಯಾಗುತ್ತಿದ್ದವು. ಆದರೆ ಈಗ ಪಶು ವೈದ್ಯಕೀಯ ಸೇವೆ ಹಳ್ಳಿಗಳಿಗೆ ಪೂರ್ಣ ಪ್ರಮಾದಲ್ಲಿ ಲಭ್ಯವಾಗಿದೆ. ಕೊಕ್ಕರೆ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಹಾಗಾಗಿ ಕೊಕ್ಕರೆ ರೋಗ ನಿಯಂತ್ರಣದಲ್ಲಿದೆ. ಕೋಳಿ ಸಾವಿನ ಭಯ ಕಡಿಮೆಯಾಗಿದೆ.
ಇಂದಿನ ಕೃಷಿಕ ಕೇವಲ ನಾಟಿ ಕೋಳಿ ಸಾಕಾಣಿಕೆಗೆ ಮಾತ್ರ ಕಟ್ಟುಬಿದ್ದಿಲ್ಲ. ಹೆಚ್ಚು ಮಾಂಸ ಕೊಡುವ ಗಿರಿರಾಜ, ಟರ್ಕಿ ಕೋಳಿಗಳನ್ನೂ ಸಾಕಲಾಗುತ್ತಿದೆ. ಇವುಗಳ ಸಾಕಾಣಿಕೆ ನಾಟಿ ಕೋಳಿ ಸಾಕಾಣಿಕೆಗಿಂತ ಭಿನ್ನವಾಗಿಲ್ಲ. ಮುದ್ದಾಗಿ ಓಡಾಡಿಕೊಂಡಿರುವ ಸೀಟಿ ಕೋಳಿಯನ್ನೂ ಸಾಕಲಾಗುತ್ತಿದೆ. ಸುಗ್ಗಿ ಕಾಲದಲ್ಲಿ ಬೇರೆ ಬೇರೆ ಕಾರಣಗಳಿಂದ ಮಣ್ಣು ಸೇರಿದ ಕಾಳು ಈ ಕೋಳಿಗಳಿಗೆ ಆಹಾರವಾಗುತ್ತಿದೆ. ಸ್ಥಳೀಯವಾಗಿ ಸಿಗುವ ಹುಲ್ಲು, ಸೊಪ್ಪು, ಹುಳು ಹುಪ್ಪಟೆ ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತಿವೆ.
ಇತ್ತೀಚಿನ ದಿನಗಳಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವ ನಾಟಿ ಕೋಳಿಗೆ ಬೇಡಿಕೆ ಹೆಚ್ಚಿದೆ. ಸಾಮೂಹಿಕ ಭೋಜನ ಕೂಟ, ಪಾರ್ಟಿ, ವರುಷ ತೊಡಕು, ಮಾಂಸದ ಹೋಟೆಲ್, ಮೆಸ್ ಹಾಗೂ ಡಾಬಾಗಳಲ್ಲಿ ನಾಟಿ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ.
ಇನ್ನು ಕೋಳಿ ಪಂದ್ಯ ಕಾನೂನು ಬಾಹಿರವಾದರೂ, ಪೊಲೀಸರ ಕಣ್ಣು ತಪ್ಪಿಸಿ ನಡೆಯುವುದುಂಟು. ಪಂದ್ಯಕ್ಕೆಂದೇ ಜಾತಿ ಹುಂಜಗಳನ್ನು ಸಾಕಲಾಗುತ್ತದೆ. ಅಂಥ ಹುಂಜದ ಬೆಲೆ ಹೆಚ್ಚು. ಪಂದ್ಯಗಾರ ಇಷ್ಟಪಟ್ಟರೆ, ಹುಂಜವೊಂದಕ್ಕೆ ರೂ.3000 ದಿಂದ 5000 ಕೊಟ್ಟು ಖರೀದಿಸುತ್ತಾನೆ. ಇಲ್ಲಿ ಹುಂಜದ ಗಾತ್ರ, ಬಣ್ಣ, ಗರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿ ಸಾಕಾಣಿಕೆ ಗರಿಗೆದರಿದೆ. ಕೋಳಿ ಮಾಂಸ ಪ್ರಿಯರನ್ನು ಕೈ ಬೀಸಿ ಕರೆದಿದೆ. ವ್ಯಾಪಾರವೂ ಕುದುರಿದೆ. ಉಪ ಕಸುಬು ರೈತನ ಕೈ ಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.