ADVERTISEMENT

ಮುಚ್ಚಿದ ರಾಜಕಾಲುವೆ; ನೀರು ನುಗ್ಗುವ ಭೀತಿ

ಕಾಂತರಾಜು ಸಿ. ಕನಕಪುರ
Published 14 ಅಕ್ಟೋಬರ್ 2017, 8:25 IST
Last Updated 14 ಅಕ್ಟೋಬರ್ 2017, 8:25 IST
ಮಳೆಯಿಂದ ತುಂಬಿರುವ ದೇಶಹಳ್ಳಿ ಕೆರೆ
ಮಳೆಯಿಂದ ತುಂಬಿರುವ ದೇಶಹಳ್ಳಿ ಕೆರೆ   

ಬಂಗಾರಪೇಟೆ: ಪಟ್ಟಣ ಹೊರವಲಯದ ದೇಶಹಳ್ಳಿ ಕೆರೆಯಿಂದ ಅತ್ತಿಗಿರಿ ಕೊಪ್ಪದ ಕೆರೆಗೆ ಸಂಪರ್ಕ ಕಲ್ಪಿಸುವ ರಾಜ ಕಾಲುವೆ ಕೆಲವೆಡೆ ಸಂಪೂರ್ಣ ಮುಚ್ಚಿಹೋಗಿದೆ. ಕೋಡಿ ಬಿದ್ದರೆ ಅಮರಾವತಿ ನಗರಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ.

ತಾಲ್ಲೂಕಿನಲ್ಲಿ ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಬಹುತೇಕ ಕೆರೆಗಳು ತುಂಬಿದ್ದು, ದೇಶಿಹಳ್ಳಿ ಕೆರೆಗೆ ಸುಮಾರು ಅರ್ಧ ಭಾಗದಷ್ಟು ನೀರು ಬಂದಿದೆ. ದಿನೇ ದಿನೇ ನೀರಿನ ಮಟ್ಟ ಏರುತ್ತಿದೆ.

ಕೆರೆ ಕೋಡಿ ಬಳಿ ಸುಮಾರು 100 ಅಡಿಗಿಂತ ಹೆಚ್ಚು ವಿಸ್ತಾರವಾಗಿರುವ ಕಾಲುವೆ 50 ಮೀಟರ್ ಸಾಗಿದಂತೆ ವಿಸ್ತೀರ್ಣ ಗುಗ್ಗಿದೆ. 150 ಮೀಟರ್ ಅಂತರದಲ್ಲೇ ಕಾಲುವೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಪಟ್ಟಣದ ಅಮರಾವತಿ ನಗರ ಈ ಕಾಲುವೆ ಅಂಚಿನವರೆಗೂ ವಿಸ್ತರಿಸಿದೆ. ಪ್ರಬಾವಿ ವ್ಯಕ್ತಿಯೊಬ್ಬರು ಕಾಲುವೆ ಪಕ್ಕ ನಿವೇಶನಗಳನ್ನು ವಿಂಗಡಿಸಿದ್ದಾರೆ. ಇದರಿಂದ ಎರಡು ಕಡೆ ಕಾಲುವೆ ಮುಚ್ಚಿದ್ದು, ಇನ್ನು ಕೆಲವೆಡೆ ಒತ್ತುವರಿಯಾಗಿದೆ.

ADVERTISEMENT

ಮಳೆಯಾದರೆ 11 ಕೆರೆ ನೀರು ದೇಶಿಹಳ್ಳಿ ಕೆರೆ ಸೇರಲಿದೆ. ಬೇಟರಾಯನಬೆಟ್ಟ, ಬೆಮಲ್‌ನಗರ, ಎಸ್.ಜಿ.ಕೋಟೆ ಕಡೆಯಿಂದ ಈ ಕೆರೆಗೆ ನೀರು ಹರಿಯಲಿದೆ. ಮತ್ತೊಂದೆಡೆ 18 ಎಕರೆಗಿಂತ ಹೆಚ್ಚು ಒತ್ತುವರಿಯಾಗಿದೆ. ಸವಕಳಿಯಿಂದ ಕಟ್ಟೆಯ ಗಾತ್ರ ಕುಗ್ಗಿದೆ. ನೀರಿನ ಮಟ್ಟ ಏರಿದಂತೆ ಸವಕಳಿ ಜಾಗದಲ್ಲಿ ಕಟ್ಟೆ ಒಡೆಯುವ ಸಾಧ್ಯತೆ ಇದೆ ಎಂಬುದು ಪ್ರಕಾಶ್ ಕುಟುಂಬ ಆತಂಕ ವ್ಯಕ್ತಪಡಿಸಿದೆ.

ಕೆರೆಕಟ್ಟೆಗೆ ಮಣ್ಣು ಹಾಕಿ, ಎದುರಾಗುವ ಅನಾಹುತ ತಪ್ಪಿಸಬೇಕು. ಕಟ್ಟೆ ಮೇಲಿನ ಮುಳ್ಳು ಗಿಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಪ್ರಕಾಶ್ ಅವರು ವರ್ಷದ ಹಿಂದೆಯೇ ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಜರುಗಿಲ್ಲ.

ದೇಶಿಹಳ್ಳಿ ಕೆರೆಯ ಕೆಳಭಾಗದಲ್ಲಿರುವ ಅತ್ತಿಗಿರಿ ಕೊಪ್ಪದ ಕೆರೆ ಈಗಾಗಲೆ ಕೋಡಿ ಹರಿದಿದೆ. ಕೆರೆ ನೀರಿನ ಮಟ್ಟಕ್ಕಿರುವ ಕಾಲುವೆಯಲ್ಲಿ ಈಗಾಗಲೆ ನೀರು ನಿಂತಿದೆ. ಇನ್ನು ದೇಶಿಹಳ್ಳಿ ಕೆರೆ ನೀರು ಹರಿದರೆ ಕಾಲುವೆ ಇಕ್ಕೆಲದ ಮನೆಗಳಿಗೆ ನೀರು ನುಗ್ಗಲಿದೆ ಎನ್ನುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

ಎಸ್.ಜಿ.ಕೋಟೆಯಿಂದ ಈ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಕೂಡ ಒತ್ತುವರಿಯಾಗಿದ್ದು, ಕಾಲುವೆಯಲ್ಲಿ ನೀರು ಹೆಚ್ಚಾದರೆ ಕವೇರಿ ನಗರಕ್ಕೆ ನೀರು ನುಗ್ಗಲಿದೆ ಎನ್ನುವುದು ಸ್ಥಳೀಯರ ದೂರು.

ಪಟ್ಟಣದ ಸಿ.ರಹೀಂ, ಸೇಟ್ ಕಾಂಪೌಡ್ ಬಡಾವಣೆ ಪಕ್ಕದ ಕಾಲುವೆಯಲ್ಲಿ ಪ್ರವಾಹ ಉಂಟಾಗಿ 100ಕ್ಕಿಂತ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಪುರಸಭೆ ಕಾಲುವೆಯ ಕೆಲವೆಡೆ ಸ್ವಚ್ಛತೆ ಕೈಗೊಂಡಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.