ADVERTISEMENT

ಮೂಲ ಪ್ರಮಾಣಪತ್ರ ಸಲ್ಲಿಸದ ಜೆಡಿಎಸ್‌ ಅಭ್ಯರ್ಥಿ

ಜಾತಿ ಪ್ರಮಾಣ ಪತ್ರ: ಕೇಶವಗೆ ಚುನಾವಣಾಧಿಕಾರಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:59 IST
Last Updated 24 ಮಾರ್ಚ್ 2014, 9:59 IST

ಕೋಲಾರ: ಪರಿಶಿಷ್ಟ ಜಾತಿಗೆ ಮೀಸಲಾದ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಪ್ರಮಾಣಪತ್ರದ ವಿವಾದ ಕೊನೆಗೊಳ್ಳುವುದಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭ ಮತ್ತು ಫಲಿ­ತಾಂಶ ಪ್ರಕಟವಾದ ಬಳಿಕವೂ ಪರಿಶಿಷ್ಟ ಜಾತಿಗೆ ಮೀಸಲಾದ ಮುಳಬಾಗಲು ಕ್ಷೇತ್ರದ ಶಾಸಕ ಜಿ.ಮಂಜುನಾಥ್‌ ಅವರ ಜಾತಿ ಪ್ರಮಾಣಪತ್ರ ವಿವಾದ ಇನ್ನೂ ಉಸಿರಾಡುತ್ತಿದೆ. ಇದೇ ವೇಳೆ­ಯಲ್ಲಿ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿ­ಸಿರುವ ಕೆ.ಕೇಶವ ಅವರು, ಕೋಲಾರ ತಹಶೀಲ್ದಾರರಿಂದ 1994ರಲ್ಲಿ ಪಡೆದ ಜಾತಿ ಪ್ರಮಾಣ­ಪತ್ರದ ಮೂಲಪ್ರತಿಯನ್ನು ಸಲ್ಲಿಸದೆ ನಕಲು ಪ್ರತಿಯನ್ನು ಮಾತ್ರವೇ ಸಲ್ಲಿಸಿರುವುದರಿಂದ ಸನ್ನಿವೇಶ ಜಟಿಲ­ಗೊಂಡಿದೆ.

ನಾಮಪತ್ರ ಸಲ್ಲಿಸುವ ಸಮಯ­ದಲ್ಲಿ, ತನ್ನ ಜಾತಿಯನ್ನು ಅಭ್ಯರ್ಥಿ ಘೋಷಿಸಿಕೊಂಡರೆ ಸಾಕು. ಜಾತಿ ಪ್ರಮಾಣಪತ್ರವನ್ನು ನೀಡಲೇಬೇಕು ಎಂದು ಯಾವುದೇ ಚುನಾವಣಾ­ಧಿಕಾರಿ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಕೇಶವ ಪರ ವಕೀಲ ಶಂಕರಪ್ಪ ಸಮಜಾಯಿಷಿ ನೀಡಿದ್ದರು. ಅವರ ಮಾತಿಗೆ ತಲೆದೂಗಿದ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್‌ಕುಮಾರ್‌ ರಾಜು ಮಾ.21ರಂದು ನಾಮಪತ್ರ ಸ್ವೀಕರಿಸಿದ್ದರು. ಅದಾದ ಬಳಿಕ, ಚುನಾವಣಾ ಆಯೋಗದೊಡನೆ ಚರ್ಚಿಸಿದ ಚುನಾವಣಾಧಿಕಾರಿ ಡಿ.ಕೆ.ರವಿ ಕೇಶವ ಅವರಿಗೆ ನೋಟಿಸ್‌ ನೀಡಿದ್ದಾರೆ. ಜಾತಿ ಪ್ರಮಾಣ ಪತ್ರದ ಮೂಲಪ್ರತಿ ಮತ್ತು ಪ್ರಮಾಣೀಕರಿಸಿದ ಪ್ರತಿಯನ್ನು ನಾಮ­ಪತ್ರ ಪರಿಶೀಲನೆಯ ದಿನಾಂಕದೊಳಗೆ ಸಲ್ಲಿಸಲು ಅವರು ಸೂಚಿಸಿದ್ದಾರೆ.

ನಾಮಪತ್ರ ಪರಿಶೀಲನೆ ಗುರುವಾರ ನಡೆಯಲಿದೆ. ಹೀಗಾಗಿ ಉಳಿದಿರುವುದು ಮೂರೇ ದಿನ. ಹೀಗಾಗಿ ಲೋಕಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿ, ಜೆಡಿಎಸ್‌ ಪಾಳೆಯದಲ್ಲಿ, ಟಿಕೆಟ್‌ ದೊರಕದೆ ನಿರಾಶರಾಗಿದ್ದ ಆಕಾಂಕ್ಷಿಗಳಲ್ಲಿ ಸಂಚಲನವನ್ನು ಮೂಡಿಸಿದೆ.
ರದ್ದತಿ ಮಾಹಿತಿ ಬಂದಿದೆ

ಜಾತಿ ಪ್ರಮಾಣ ಪತ್ರ ವಿವಾದದ ಹಿನ್ನೆಲೆಯಲ್ಲಿ ಭಾನುವಾರ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಿ.ಕೆ.ರವಿ, ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರರು ಕೇಶವ ಅವರಿಗೆ ನೀಡಿದ್ದ ಜಾತಿ ಪ್ರಮಾಣಪತ್ರ ರದ್ದುಗೊಳಿಸುವ ಕುರಿತು ದಾಖಲೆಗಳನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆಲವು ಮುಖಂಡರು ತಮಗೆ ಈಗಾ­ಗಲೇ ಮನವಿ ಸಲ್ಲಿಸಿದ್ದಾರೆ.

ಜಾತಿ ಪ್ರಮಾಣಪತ್ರ ರದ್ದುಗೊಳಿಸ­ಲಾಗಿದೆ ಎಂಬ ಮಾಹಿತಿಯುಳ್ಳ ಪತ್ರವೂ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರರ ಕಚೇರಿ­ಯಿಂದ ತಮಗೆ ಬಂದಿದೆ ಎಂದರು.

ಕೇಶವ  ನಾಮಪತ್ರದೊಡನೆ ಜಾತಿಪ್ರಮಾಣ ಪತ್ರದ ಮೂಲಪ್ರತಿ­ಸಲ್ಲಿಸಿಲ್ಲ. ಬದಲಿಗೆ ದೃಢೀ­ಕರಿಸಿದ ಪ್ರತಿ ಸಲ್ಲಿಸಿದ್ದಾರೆ. ಹೀಗಾಗಿಯೇ ಜಾತಿಪ್ರಮಾಣ ಪತ್ರದ ಮೂಲಪ್ರತಿ ಮತ್ತು ಸಂಬಂಧಿಸಿದ ಅಧಿ­ಕಾರಿಯಿಂದ ಪ್ರಮಾಣೀಕರಿಸಿದ ಪ್ರತಿ­ ಸಲ್ಲಿಸಲು ಸೂಚಿಸಲಾಗಿದೆ. ಅವರು ಅವುಗಳನ್ನು ಸಲ್ಲಿಸಿದ ಬಳಿಕ ಪರಿಶೀಲನೆ ನಡೆಸಲಾಗುವುದು ಎಂದರು.

20 ವರ್ಷದ ಹಿಂದೆ
1994ರ ಮೇ 5ರಂದು ಕೇಶವ ಕೋಲಾರ ತಹಶೀಲ್ದಾರರಿಂದ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಅದರ ಮೂಲಪ್ರತಿಯೂ ಅವರ ಬಳಿ ಇದೆ. ಆದರೆ ಅದನ್ನು ಪಡೆಯುವ ಸಂದರ್ಭ ಅವರು, ತಾವು ಪರಿಶಿಷ್ಟ ಜಾತಿಯವರೆಂದು ಸಮರ್ಥಿಸಿಕೊಳ್ಳಲು ಹಾಜರುಪಡಿಸಿದ ದಾಖಲೆಗಳು ಯಾವುವು? ಅವುಗಳನ್ನು ತಹಶೀಲ್ದಾರರ ಕಚೇರಿಯಲ್ಲಿ  ಸಂಗ್ರಹಿಡಲಾಗಿದೆಯೇ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡಿದೆ.

ಕೇಶವ ಪರಿಶಿಷ್ಟ ಜಾತಿಯವರಲ್ಲ ಎಂದು ಪ್ರತಿಪಾದಿ­ಸುತ್ತಿರುವವರು ಅವರು ಆಂಧ್ರ­ಪ್ರದೇಶದಲ್ಲಿದ್ದಾಗ, ಅಲ್ಲಿ ಹಿಂದುಳಿದ ವರ್ಗಕ್ಕೆ ಸೇರುವ ವಡ್ಡೆ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.  ಕೇಶವ ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕಿನ ಮಾಲಪಾಟು ಗ್ರಾಮದ ನಿವಾಸಿಗಳಾಗಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ವಡ್ಡೆ ಜಾತಿಗೆ ಸೇರುತ್ತಾರೆ. 10 ವರ್ಷ ಶಿಕ್ಷಣವನ್ನು ಹಿಂದುಳಿದ ವರ್ಗಗಳ ಕೋಟಾದಡಿ ಪಡೆದಿದ್ದಾರೆ.

ವಡ್ಡೆ ಜಾತಿ ಆಂಧ್ರದಲ್ಲಿ ಹಿಂದುಳಿದ ಜಾತಿಯೇ ಹೊರತು ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಅನ್ವಯಿಸುವುದಿಲ್ಲ. ಹೀಗಾಗಿ ಕೇಶವ ಅವರಿಗೆ ಭೋವಿ ಪ್ರಮಾಣಪತ್ರ ನೀಡಿದರೆ ಅಸಿಂಧುವಾಗುತ್ತದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕೋಲಾರ ತಹಶೀಲ್ದಾರರ ಕಚೇರಿಯಲ್ಲಿರುವ 20 ವರ್ಷದ ಹಿಂದಿನ ದಾಖಲೆಗಳು ಈಗ ಮಹತ್ವದ ಪಾತ್ರ ವಹಿಸಲಿವೆ.

ದಾಖಲೆ ಲಭ್ಯವಿಲ್ಲ!
20 ವರ್ಷದ ಹಿಂದೆ ಕೇಶವ ಅವರಿಗೆ ಜಾತಿಪ್ರಮಾಣಪತ್ರ ನೀಡಿದ ದಾಖಲೆಗಳು ಕೋಲಾರ ತಹಶೀಲ್ದಾರ್ ಕಚೇರಿಯಲ್ಲಿ ಲಭ್ಯವಾಗಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ಕೇಶವ ನಾಮಪತ್ರದ ಜತೆ ಸಲ್ಲಿಸಿರುವ ಜಾತಿಪ್ರಮಾಣಪತ್ರ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಲು ಜಿಲ್ಲಾ ಚುನಾವಣಾಧಿಕಾರಿ ಸೂಚನೆ ಮೇರೆಗೆ ನಾವು ರೆಕಾರ್ಡ್ ಸೆಕ್ಷನ್‌ನಲ್ಲಿ ಹುಡುಕಾಟ ನಡೆಸಿದೆವು. ಆದರೆ ಯಾವುದೇ ದಾಖಲೆ ಸಿಗಲಿಲ್ಲ. ಪ್ರಮಾಣಪತ್ರ ವಿತರಣೆ ರಿಜಿ­ಸ್ಟರ್‌ಗಳೂ ಕೂಡ ನಾಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

1994ರಲ್ಲಿ ಸಜಿಯಾ ಸುಲ್ತಾನ ಎಂಬುವರು ತಹಶೀಲ್ದಾರರಾಗಿದ್ದರು. ಕೇಶವ ಹೋಳೂರು ಹೋಬಳಿ, ನಾಗನಾಯಕನಹಳ್ಳಿಯ ನಿವಾಸಿ ಎಂದು ಹೇಳಿ ಪ್ರಮಾಣಪತ್ರ ಪಡೆದಿದ್ದಾರೆ. ಅವರು ಸಲ್ಲಿಸಿರುವ ಪ್ರಮಾಣಪತ್ರದ ನಕಲು ಪ್ರತಿಯಲ್ಲಿ ಸಹಿ, ಹೆಸರು ಸ್ಪಷ್ಟವಾಗಿಲ್ಲ. ಅದು ನಕಲಿಯಾಗಿರಬಹುದೇ ಎಂಬ ಅನುಮಾನವೂ ಮೂಡಿದೆ. ‘ದಾಖಲೆ ಲಭ್ಯವಿಲ್ಲ ಎಂದೇ ವರದಿ ಸಲ್ಲಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುನಿವೆಂಕಟಪ್ಪ ನಾಮಪತ್ರ ಸಲ್ಲಿಕೆಗೆ ಸಿದ್ಧತೆ
ಕೇಶವ ಅವರ ಜಾತಿ ಪ್ರಮಾಣಪತ್ರ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ, ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಬಿ.­ಮುನಿ­ವೆಂಕ­ಟಪ್ಪ ಅವರಿಂದ ನಾಮಪತ್ರವನ್ನು ಸಲ್ಲಿಸುವ ಸಿದ್ಧತೆಯನ್ನು ಜೆಡಿಎಸ್‌ ನಡೆ­ಸುತ್ತಿದೆ ಎಂದು ಮೂಲಗಳು ಹೇಳಿವೆ.


ಅತೃಪ್ತ ಆಕಾಂಕ್ಷಿ ಮುನಿವೆಂಕಟಪ್ಪ ಅವರಲ್ಲಿ ಸ್ಪರ್ಧಿಸುವ ಕನಸು ಮತ್ತೆ ಚಿಗುರಿದೆ. ಕೆಲವು ಮುಖಂಡರು ತಮ್ಮನ್ನು ಸಂಪರ್ಕಿಸಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿ­ಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ಪ್ರಮಾಣಪತ್ರಗಳನ್ನು ಸಿದ್ಧ ಮಾಡಿಕೊಳ್ಳು­ತ್ತಿರುವೆ. ಎರಡು– ಮೂರು ದಿನದೊಳಗೆ ಸಿದ್ಧತೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.