ADVERTISEMENT

ಮೂಲ ಸೌಲಭ್ಯ ಒದಗಿಸಲು ಪಂಚಾಯಿತಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 9:20 IST
Last Updated 30 ಡಿಸೆಂಬರ್ 2017, 9:20 IST

ನಂಗಲಿ: ‘ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಪಂಚಾಯಿತಿ ಸಿದ್ಧವಿದ್ದು, ಸಾರ್ವಜನಿಕರಿಂದ ಏನೇ ದೂರು ಬಂದರೂ ಸಮಸ್ಯೆ ಪರಿಹರಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ.ಅಶ್ವತ್ಥ ನಾರಾಯಣ ಹೇಳಿದರು.

ಶುಕ್ರವಾರ ಮುಷ್ಟೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಗ್ರಾಮಗಳಲ್ಲಿ ವಾರ್ಡ್‌ ಸಭೆಗಳನ್ನು ಆಯಾಯ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಗ್ರಾಮಗಳಲ್ಲಿರುವ ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕೇವಲ ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಎಲ್ಲ ಗ್ರಾಮಗಳಲ್ಲಿ ಶೌಚಾಲಯಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದಿರುವುದರಿಂದ ಸ್ವಚ್ಛತೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹಾಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲರೂ ತಮ್ಮ ಮನೆಗಳ ಸುತ್ತಮುತ್ತ ಕಸ ಕಡ್ಡಿ ಹಾಕುವುದನ್ನು ನಿಲ್ಲಿಸಬೇಕು. ಇದರಿಂದ ಬರುವ ಸಾಂಕ್ರಾಮಿಕ ರೋಗಗಳು ತಡೆಯಬಹುದು ಎಂದು ಹೇಳಿದರು.

ADVERTISEMENT

ಎಂಜಿಎನ್‌ಆರ್‌ಇಜಿಯ ಹೊಸ ಯೋಜನೆಯ ಪ್ರಕಾರ ಯಾವುದೇ ಕಾಮಗಾರಿ ಮಾಡಲು ಜೆಇ ಅವರು ಕಾಮಗಾರಿ ನಡೆಯುವ ಕೆಲಸವನ್ನು ಸ್ಥಳದಲ್ಲಿಯೇ ಬಂದು ಜಿಪಿಎಸ್ ಮಾಡಬೇಕಾಗುತ್ತದೆ. ಇದರಿಂದ ಕಾಮಗಾರಿಗಳನ್ನು ಬಹು ಬೇಗ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ಈ ಯೋಜನೆಯು ಸರಳವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳು ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿ‌ ನೀಡಲಾಯಿತು. ಇದೇ ಸಂದರ್ಭದಲ್ಲಿ ವಸತಿ ಸಮಸ್ಯೆಗಳು, ಚರಂಡಿ ಸ್ವಚ್ಛತೆಯ ಸಮಸ್ಯೆಗಳು, ಕರಡಿಗಾನಹಳ್ಳಿ ಮತ್ತು ಮುಷ್ಟೂರು ಗ್ರಾಮದ ಅಂಬೇಡ್ಕರ್ ಕಾಲೊನಿಯಲ್ಲಿ ಪೈಪ್ ಲೈನ್ ಸಮಸ್ಯೆ ಸೇರಿದಂತೆ ಮುಂತಾದವುಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ನೀಡಿದರು.

ಗ್ರಾಮ ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಸರೋಜಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ಚಂಗಲರಾಯಪ್ಪ, ಚಿನ್ನಹಳ್ಳಿ ಗೋಪಾಲ್, ಭಾಸ್ಕರ್, ಬಿ.ವಿ.ಚಂಗಲರಾಯಪ್ಪ, ಶಾಂತಮ್ಮ ಕೃಷ್ಣಪ್ಪ, ರುಕ್ಮಿಣಮ್ಮ, ಗಾಯತ್ರಮ್ಮ, ಹೇಮಾವತಿ, ಸತ್ಯಪ್ಪ, ಸುಬ್ರಮಣಿ, ಪಂಚಾಯಿತಿ ನೋಡಲ್ ಅಧಿಕಾರಿ ಬೋಗೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.