ADVERTISEMENT

ಯೋಜನೆಗಳು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 9:30 IST
Last Updated 8 ಮಾರ್ಚ್ 2018, 9:30 IST
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ’ ಸಂವಾದದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಮಾತನಾಡಿದರು.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ’ ಸಂವಾದದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಮಾತನಾಡಿದರು.   

ಕೋಲಾರ: ‘ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾತ್ರ ಸೌಕರ್ಯ ಕಲ್ಪಿಸಿದೆ. ಸರ್ಕಾರಕ್ಕೆ ಇತರೆ ವರ್ಗಗಳ ಬಡ ವಿದ್ಯಾರ್ಥಿಗಳು ನೆನಪಿಗೆ ಬರಲಿಲ್ಲವೇ’ ಎಂದು ವಿದ್ಯಾರ್ಥಿಗಳು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ಗೆ ಪ್ರಶ್ನೆ ಮಾಡಿದರು.

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು (ಎನ್‌ಎಸ್‌ಯುಐ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ’ ಕುರಿತ ಸಂವಾದದಲ್ಲಿ ವಿದ್ಯಾರ್ಥಿಗಳಾದ ಚೈತ್ರಾ, ರೇವಂತ್ ಮಾತನಾಡಿ, ‘ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಆ ಯೋಜನೆಗಳು ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿವೆ’ ಎಂದು ದೂರಿದರು.

ಸರ್ಕಾರದ ಯೋಜನೆಗಳಿಂದ ಬೇರೆ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿಲ್ಲ. ಮೊದಲ ಬಾರಿಗೆ ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬಸ್‌ ಪಾಸ್ ವಿತರಿಸುವ ಬದಲು ಬಡವರನ್ನು ಗುರುತಿಸಿ ಕೊಡಬಹುದಿತ್ತು. ಈ ತಾರತಮ್ಯ ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, ‘ಲ್ಯಾಪ್‌ಟಾಪ್‌ ಸೌಲಭ್ಯವನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.

ನಿರ್ವಾಹಕರ ಕಿರಿಕಿರಿ: ‘ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಾಸ್‌ ಇಟ್ಟುಕೊಂಡು ಪ್ರಯಾಣಿಸುವಾಗ ನಿರ್ವಾಹಕರು ಕಿರಿಕಿರಿ ಮಾಡುತ್ತಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ವಿದ್ಯಾರ್ಥಿನಿ ಗೀತಾ ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಹಿತದೃಷ್ಟಿಯಿಂದ ರಿಯಾಯಿತಿ ದರದ ಬಸ್‌ ಪಾಸ್‌ ವಿತರಣೆ ಮಾಡಲಾಗಿತ್ತು, ಮುಂದಿನ ಶೈಕ್ಷಣಿಕ ವರ್ಷದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ಬರುತ್ತದೆ. ನಿರ್ವಾಹಕರು ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸಿಕೊಳ್ಳದೆ ಅಥವಾ ಬಸ್‌ ನಿಲ್ಲಿಸದೆ ಸಮಸ್ಯೆ ಮಾಡಿದರೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಯೋಜನೆ ದುರುಪಯೋಗ: ‘ಲ್ಯಾಪ್‌ಟಾಪ್ ಯೋಜನೆ ದುರುಪಯೋಗವಾಗುತ್ತಿದೆ. ಲ್ಯಾಪ್‌ ಟಾಪ್ ಪಡೆದ ವಿದ್ಯಾರ್ಥಿಗಳನ್ನು ಅದನ್ನು ಬಳಸಲು ಬಾರದೆ ಕಡಿಮೆ ಹಣಕ್ಕೆ ಮಾರುತ್ತಿದ್ದಾರೆ’ ಎಂದು ವಿದ್ಯಾರ್ಥಿ ಶ್ರೇಯಸ್ ತಿಳಿಸಿದರು.

‘ಹಣವಂತರಿಗೆ ಮಾತ್ರ ರಾಜಕಾರಣವೆಂಬ ಪರಿಸ್ಥಿತಿ ಇದೆ. ಮತದಾರರು ದುಡ್ಡು ತೆಗೆದುಕೊಂಡು ಮತ ಹಾಕುವ ದುಸ್ಥಿತಿಗೆ ತಲುಪಿದ್ದಾರೆ. ಇದು ಸರಿಯೇ’ ಎಂದು ವಿದ್ಯಾರ್ಥಿನಿ ಚೈತ್ರಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದುಡ್ಡಿದ್ದವರಿಗೆ ಮಾತ್ರ ರಾಜಕಾರಣ ಎನ್ನುವುದು ತಪ್ಪು. ಜನ ಬೆಂಬಲ ಇದ್ದವರು ಸಹ ರಾಜಕೀಯ ಪ್ರವೇಶಿಸಬಹುದು. ಬಡ ಕುಟುಂಬದಲ್ಲಿ ಹುಟ್ಟಿದ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿರುವುದೇ
ಇದಕ್ಕೆ ಸಾಕ್ಷಿ’ ಎಂದು ಅವರು ಹೇಳಿದರು.

ಸವಲತ್ತು ಒದಗಿಸುತ್ತಿದೆ: ‘ರಾಜ್ಯ ಸರ್ಕಾರವು ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತು ಒದಗಿಸುತ್ತಿದೆ. ವಿದ್ಯಾರ್ಥಿವೇತನ ಸೇರಿದಂತೆ ತರಬೇತಿಗೂ ಧನ ಸಹಾಯ ನೀಡಲಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ವರ್ಷಕ್ಕೆ ₹ 20 ಲಕ್ಷ ನೀಡುತ್ತಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ವಿವರಿಸಿದರು.

ಸಂವಾದದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮೀಸಲಾತಿ ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದರು. ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗಡೆ, ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥಗೌಡ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ನವೀನ್‌ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಲಾವಣ್ಯ ಪಾಲ್ಗೊಂಡಿದ್ದರು.

**

ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಒದಗಿಸಿ ಸಮಾನತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಶೋಷಿತ ವರ್ಗಗಳಿಗೆ ಯೋಜನೆ ರೂಪಿಸಲಾಗುತ್ತಿದೆ.

–ವಿ.ಆರ್‌.ಸುದರ್ಶನ್‌, ಕೆಪಿಸಿಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.