ADVERTISEMENT

ರಾಜಕೀಯ ಕಾರಣಕ್ಕಾಗಿ ವರ್ಗಾವಣೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:05 IST
Last Updated 13 ಅಕ್ಟೋಬರ್ 2012, 9:05 IST

ಕೆಜಿಎಫ್: ನಗರಸಭೆಯ ಆಯುಕ್ತ ಬಾಲಚಂದ್ರ ಅವರ ವರ್ಗಾವಣೆ ಖಂಡಿಸಿ ನಗರಸಭೆಯ 23 ಸದಸ್ಯರು ಶುಕ್ರವಾರ ನಗರಸಭೆ ಮುಂಭಾಗದಲ್ಲಿ ಧರಣಿ ನಡೆಸಿದರು.ನಗರಸಭೆ ಅಧ್ಯಕ್ಷ ಪಿ.ದಯಾನಂದ್ ಮತ್ತು ಉಪಾಧ್ಯಕ್ಷ ಎಂ.ಭಕ್ತವತ್ಸಲಂ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಧರಣಿಯಲ್ಲಿ ಪಾಲ್ಗೊಳ್ಳಲಿಲ್ಲ.

ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಮಾತನಾಡಿದ ನಗರಸಭೆ ಅಧ್ಯಕ್ಷ ಪಿ.ದಯಾನಂದ್, ಕಳೆದ ಹತ್ತು ತಿಂಗಳ ಹಿಂದೆ ನಗರಸಭೆಯ ಆಯುಕ್ತರಾಗಿ ಬಂದ ಬಾಲಚಂದ್ರ ಉತ್ತಮ ಕೆಲಸ ಮಾಡಿದ್ದಾರೆ. ಜನರ ಮತ್ತು ಜನಪ್ರತಿನಿಧಿಗಳ ಮೆಚ್ಚುಗೆ ಗಳಿಸಿದ್ದಾರೆ. ಗುಣಮಟ್ಟದ ಕಾಮಗಾರಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುವಂತೆ ಮಾಡಿದ್ದಾರೆ.

ಜನಮೆಚ್ಚಿದ ಅಧಿಕಾರಿಯನ್ನು ಶಾಸಕರು ವರ್ಗಾವಣೆ ಮಾಡಿಸಿದ್ದಾರೆ. ಆಯುಕ್ತ ಬಾಲಚಂದ್ರ ಉತ್ತಮ ಅಧಿಕಾರಿ ಎಂದು ಹಲವಾರು ಬಾರಿ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದಿದ್ದ ಶಾಸಕರಿಗೆ ಈಗ ಉತ್ತಮ ಅಧಿಕಾರಿ ಬೇಡವಾಗಿದೆ. ನಗರಸಭೆಯ ಗಂಧವೇ ಇಲ್ಲದ ಸಹಕಾರಿ ಇಲಾಖೆಯ ಅಧಿಕಾರಿಯನ್ನು ತಂದು ಆಯುಕ್ತರನ್ನಾಗಿ ಕುಳ್ಳಿರಿಸಲಾಗಿದೆ. ಶಾಸಕರ ಮರ್ಜಿಗೆ ತಕ್ಕಂತೆ ಆಯುಕ್ತರು ಕೆಲಸ ಮಾಡುತ್ತಿಲ್ಲ ಎಂದು ಬಾಲಚಂದ್ರರವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದರು.

ಆಯುಕ್ತ ಬಾಲಚಂದ್ರರವರನ್ನು ಪುನಃ ನಗರಸಭೆ ಆಯುಕ್ತರನ್ನಾಗಿ ವರ್ಗ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೆಜಿಎಫ್ ಬಂದ್ ಸೇರಿದಂತೆ ಹಲವಾರು ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆಯ ಇನ್ನೊಂದು ಭಾಗದಲ್ಲಿ ನಡೆದ ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಮಾತನಾಡಿದ ಕನ್ನಡ ಹೋರಾಟಗಾರ ವಿ.ಎಸ್.ಪ್ರಕಾಶ್, ನಗರಸಭೆ ಆಯುಕ್ತರು ಕನ್ನಡಪ್ರೇಮಿಗಳಾಗಿದ್ದರು. ನಗರದಲ್ಲಿ ಕನ್ನಡ ಪರ ಚಟುವಟಿಕೆಗಳು ಹೆಚ್ಚಾಗಿ ನಡೆಯಲು ಕಾರಣರಾಗಿದ್ದರು. ಇಂತಹ ಅಧಿಕಾರಿಯನ್ನು ಏಕಾಏಕಿ ಯಾವುದೋ ಕಾರಣವಿಟ್ಟುಕೊಂಡು ವರ್ಗ ಮಾಡುವುದನ್ನು ಕನ್ನಡ ಸಂಘಟನೆಗಳು ವಿರೋಧಿಸುತ್ತದೆ ಎಂದರು. ಕನ್ನಡ ಸಂಘದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಸಹ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.