ADVERTISEMENT

ರಾಜ್ಯದ ಯೋಜನೆಗಳಿಗೆ ಅನುದಾನ: ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 10:00 IST
Last Updated 14 ಫೆಬ್ರುವರಿ 2011, 10:00 IST

ಬಂಗಾರಪೇಟೆ: ಜಿಲ್ಲೆಗೆ ಒಳ   ಪಡುವ ಪ್ರತಿಯೊಂದು ಪ್ರದೇಶಕ್ಕೆ ಸೌಲಭ್ಯ ಪೂರೈಸಲು ಆಯವ್ಯಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ಚಿಂತನೆಯಿದೆ. ರಾಜ್ಯ ಸರ್ಕಾರ ಹಮ್ಮಿಕೊಳ್ಳುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಏರ್ಪಾಡು ಮಾಡುವೆ. ಫೆ.25ರ ನಂತರ ಕಾರ್ಯಾಚರಣೆ ಶುರುವಾಗಲಿದೆ. 5 ವರ್ಷದ ಅವಧಿಯಲ್ಲಿ ಮೂಲಭೂತ ಕೊರತೆಗಳ ನಿವಾರಣೆ ಮಾಡಲು ಯತ್ನಿಸುವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಶನಿವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಡನೆ ಮಾತನಾಡಿದರು.ರೈಲು ಪ್ರಯಾಣಿಕರ ಕಷ್ಟ-ಸುಖವನ್ನು ಪ್ರತ್ಯಕ್ಷವಾಗಿ ಕಂಡರಿಯುವ ಸಲುವಾಗಿ ಇಂದು ಸಾಮಾನ್ಯ ರೈಲಿನಲ್ಲಿ ಪ್ರಯಾಣಿಸಿ ಬಂದಿದ್ದೇನೆ. ಮಾರಿಕುಪ್ಪಂಗೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹೆಚ್ಚುವರಿ ಬೋಗಿ ಅಳವಡಿಸಲು ಅಲ್ಲಿವರೆಗೂ ಎಲೆಕ್ಟ್ರಿಕಲ್ ಲೈನ್ ಇಲ್ಲ. ಇನ್ನೂ ಬೋಗಿಗಳನ್ನು ಅಳವಡಿಸಲು ಎಂಜಿನ್‌ಗೆ ಸಾಮರ್ಥ್ಯವಿಲ್ಲ. ಆದ್ದರಿಂದ ಇನ್ನೊಂದು ರೈಲು ಕಲ್ಪಿಸುವ ಆಲೋಚನೆಯಿದೆ ಎಂದರು.

ಈ ಸಂಬಂಧ ಕಾಮಗಾರಿಗಳಿಗೆ ಸರ್ವೆ ಕಾರ್ಯ ಮುಗಿದಿದೆ. ಕುಪ್ಪಂ, ಕಡಪ, ಮದನಪಲ್ಲಿ, ಪುಟ್ಟಪರ್ತಿ, ಗೌರಿದನೂರು ಲಿಂಕ್ ಕಲ್ಪಿಸಲಾಗುವುದು. ನೀರು, ಶೌಚಾಲಯ, ಆಸನ, ತಂಗುದಾಣ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಹಳೇ ಕೋಚ್ ತೆಗೆದು ಹೊಸ ಕೋಚ್ ಅಳವಡಿಸಲಾಗುವುದು ಎಂದರು.

ಉದ್ಯಮಿ ಕೆ.ಎಂ.ನಾರಾಯಣಸ್ವಾಮಿ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರವಿ ಬಳ್ಳೂರಿ, ರಕ್ಷಣಾ ಆಯುಕ್ತ ಜಿ.ನಿತ್ಯಾನಂದ, ಮುಖ್ಯ ಎಂಜಿನಿಯರ್ (ನಿರ್ಮಾಣ) ಜಿ.ಪಿ.ಕೋಸ್ಟ, ಜಿ.ಪಂ. ಮಾಜಿ ಸದಸ್ಯ ರಾಮಚಂದ್ರ, ಪಾರ್ಥಸಾರಥಿ, ನಾರಾಯಣರೆಡ್ಡಿ, ಸಿ.ವಿ.ಕೃಷ್ಣಪ್ಪ, ಲಕ್ಷ್ಮೀನಾರಾಯಣ, ರೈಲ್ವೆ ಸಲಹಾ ಸಮಿತಿ ಸದಸ್ಯ ಡಿ.ಕಿಶೋರ್‌ಕುಮಾರ್, ವೆಂಕಟರಮಣಪ್ಪ, ಶಂಶುದ್ದೀನ್‌ಬಾಬು, ಶಾಂತಿನಗರ ಕೃಷ್ಣಮೂರ್ತಿ, ರಾಜನ್, ರಫೀಕ್, ಅಜ್ಮತ್ತುಲ್ಲಾ, ಆಜಂ ಷರೀಫ್, ನಾಗರತ್ನ, ಶಾರದ, ಆದಿಲ್, ರವಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಹೊಳಲಿ ಪ್ರಕಾಶ್, ಅನಿಲ್ ಕುಮಾರ್, ಬಿಸೇಗೌಡ, ಗುಡಿರೆಡ್ಡಿ, ಜಯಪಾಲ್, ರಷೀದ್‌ಖಾನ್, ಟಿ.ಜಾನ್ ಹಾಜರಿದ್ದರು.

ಜನದಟ್ಟಣೆ: ರೈಲಿನಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರ ಕಷ್ಟ ಸುಖ ಪರಿಶೀಲಿಸಿ ಪಟ್ಟಣಕ್ಕೆ ಮಧ್ಯಾಹ್ನ 1.40ಕ್ಕೆ ಸಚಿವರು ಬರಲಿದ್ದಾರೆ ಎಂಬ ವದಂತಿಯೇ ನಿಲ್ದಾಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರುವಂತೆ ಮಾಡಿತ್ತು. ಬೆಳಗಿನಿಂದಲೇ ಸಂಸದರನ್ನು ಸ್ವಾಗತಿಸಲು ಶಾಲು, ಹೂ-ಹಾರಗಳ ಸಮೇತ ಕಾರ್ಯಕರ್ತರು ತಯಾರಿ  ನಡೆಸಿದ್ದರು. ಕೆಲಕಾಲ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈಲ್ವೆ ರಾಜ್ಯ ಸಚಿವರೇ ಖುದ್ದಾಗಿ ಪ್ರಯಾಣಿಸುತ್ತಿದ್ದರೂ; ಮಾರಿಕುಪ್ಪಂ ಎಕ್ಸ್‌ಪ್ರೆಸ್ ರೈಲು ಮಾಮೂಲಿನಂತೆ 2 ಗಂಟೆ ತಡವಾಗಿಯೇ ನಿಲ್ದಾಣಕ್ಕೆ ಬಂದಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.