ಕೋಲಾರ: ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ನೆರವು ನೀಡುವಂತೆ ಕೋರಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ಸರ್ವಪಕ್ಷದ ನಿಯೋಗ ಮುಂದಿನ ವಾರ ದೆಹಲಿಗೆ ತೆರಳಲಿದೆ ಎಂದು ಕಾನೂನು ಸಚಿವ ಎಸ್.ಸುರೇಶಕುಮಾರ್ ತಿಳಿಸಿದರು.
ಬರ ಪರಿಸ್ಥಿತಿ ಅಧ್ಯಯನಕ್ಕೆ ಜಿಲ್ಲೆಗೆ ಮಂಗಳವಾರ ಸಚಿವರಾದ ಬಿ.ಎನ್.ಬಚ್ಚೇಗೌಡ, ರವೀಂದ್ರನಾಥ್ ಮತ್ತು ಆರ್.ಅಶೋಕ್ ಅವರೊಡನೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬರ ನಿರ್ವಹಣೆಗೆ ರೂ. 2200 ಕೋಟಿ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಹಿಂದೆಯೇ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಬರ ಪರಿಸ್ಥಿತಿ ಕುರಿತು ಸರ್ಕಾರ ನಿರಂತರ ಅಧ್ಯಯನ ನಡೆಸುತ್ತಿದೆ. ಬರಗಾಲದಲ್ಲಿ ಉದ್ಯೋಗ ಸೃಷ್ಟಿಸಬೇಕೆನ್ನುವ ಮಾತು ಚಾಮರಾಜನಗರದಲ್ಲೂ ಕೇಳಿ ಬಂದಿದೆ. ಎಲ್ಲ ಜಿಲ್ಲೆಗಳ ಅಧ್ಯಯನ ಮಾಡಿದ ಬಳಿಕ, ಬರಗಾಲದ ಅವಧಿಯಲ್ಲಿ ಉದ್ಯೋಗ ಸೃಷ್ಟಿಗಾಗಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುವ ಚಿಂತನೆ ನಡೆದಿದೆ ಎಂದರು.
ಮಳೆ ಪ್ರಮಾಣ, ಬೆಳೆ ನಷ್ಟ ಮೊದಲಾದ ಅಂಶ ಗಮನಿಸಿ ರಾಜ್ಯದ 123 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜೊತೆಗೆ ಹೊಸದಾಗಿ 23 ತಾಲ್ಲೂಕುಗಳನ್ನು ಸೇರಿಸಲಾಗಿದೆ. ಬರಪೀಡಿತ ಎಂದು ಘೋಷಿಸಲು ಅಗತ್ಯವಿರುವ ಮಾನದಂಡಗಳಿಗೆ ಹೊಂದಿಕೆಯಾಗುವ ಬೇರೆ ತಾಲ್ಲೂಕುಗಳನ್ನೂ ಘೋಷಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕೋಲಾರದಲ್ಲಿ ಇಡೀ ವರ್ಷದ ಎಲ್ಲ ದಿನವೂ ಕುಡಿಯುವ ನೀರಿನ ಸಮಸ್ಯೆ ಇದೆ. ಶಾಶ್ವತ ವ್ಯವಸ್ಥೆ ಇಲ್ಲದಿರುವುದರಿಂದ ಹಳ್ಳಿಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕುಡಿಯುವ ನೀರು ದೊರಕುತ್ತಿಲ್ಲ. ಮೇವಿನ ಸಮಸ್ಯೆಯ ಕುರಿತೂ ಹಳ್ಳಿಯ ಜನ ಹೇಳಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿ ಹಣ ಕೊಟ್ಟಿಲ್ಲ ಎಂಬುದನ್ನೂ ತಿಳಿಸಿದ್ದಾರೆ. ಒಟ್ಟಾರೆ ಎಲ್ಲವನ್ನೂ ಅಧ್ಯಯನ ಮಾಡಿ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳ ಜೊತೆ ಚರ್ಚಿಸಿ, ಕ್ರಮದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು ಎಂದರು.
ಜಿಲ್ಲೆಗೆ ಅಗತ್ಯವಿರುವ ಹಣ ಮತ್ತು ಯಾವುದಾದರೂ ಯೋಜನೆ ಬಗ್ಗೆ, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು. 20 ಲಕ್ಷ ಪಡಿತರ ಕಾರ್ಡುಗಳನ್ನು ರದ್ದುಗೊಳಿಸಿರುವುದಕ್ಕೆ ಅದರದ್ದೇ ಆದ ಕಾರಣವಿರಬಹುದು. ಆದರೆ ಬರಗಾಲದಲ್ಲಿ ರದ್ದುಗೊಳಿಸಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಕಳೆದ ಡಿಸೆಂಬರ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡದ ವರದಿ ಮತ್ತು ಫಲಶೃತಿ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.