ADVERTISEMENT

ರೇಷ್ಮೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಭೆ

ರೇಷ್ಮೆಗೂಡು ಮಾರುಕಟ್ಟೆಗೆ ಜಿಲ್ಲಾ ಪಂಚಾಯಿತಿ ಸಿಇಒ ಲತಾಕುಮಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:58 IST
Last Updated 15 ಜೂನ್ 2018, 12:58 IST

ಕೋಲಾರ: ‘ಜಿಲ್ಲೆಯ ರೇಷ್ಮೆ ಬೆಳೆಗಾರರು ಹಾಗೂ ರೀಲರ್‌ಗಳ ಸಮಸ್ಯೆ ಪರಿಹಾರಕ್ಕೆ ಸದ್ಯದಲ್ಲೇ ಸಭೆ ಕರೆಯುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಭರವಸೆ ನೀಡಿದರು.

ತಾಲ್ಲೂಕಿನ ಚಿಟ್ನಹಳ್ಳಿ, ಅಂಕತಟ್ಟಿ ಗ್ರಾಮದ ಹಿಪ್ಪುನೇರಳೆ ತೋಟ, ಅರಹಳ್ಳಿ ಸಮೀಪದ ಸ್ವಯಂಚಾಲಿತ ನೂಲು ಬಿಚ್ಚಾಣಿಕೆ ಕೇಂದ್ರ, ನಗರದ ಶಾಹಿನ್‌ಷಾ ನಗರ ಬಡಾವಣೆಯಲ್ಲಿನ ರೀಲಿಂಗ್ ಘಟಕ ಹಾಗೂ ರೇಷ್ಮೆಗೂಡು ಮಾರುಕಟ್ಟೆ ಮತ್ತು ಹುಳು ಸಾಕಾಣಿಕೆ ಮನೆಗೆ ಗುರುವಾರ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು.

‘ಜಿಲ್ಲೆಯ ಜೀವನಾಡಿಯಾದ ರೇಷ್ಮೆ ಕೃಷಿ ಅಭಿವೃದ್ಧಿ ಸಂಬಂಧ ಚರ್ಚಿಸಲು ರೈತ ಪ್ರತಿನಿಧಿಗಳು, ರೀಲರ್‌ಗಳು ಹಾಗೂ ಅಧಿಕಾರಿಗಳು ಸಭೆಗೆ ಬರಬೇಕು. ಮಾರುಕಟ್ಟೆಯಲ್ಲಿ ಮಾರಾಟಗಾರರು ಮತ್ತು ರೈತರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ರಾಜ್ಯ ಸರ್ಕಾರವು ರೇಷ್ಮೆ ಇಲಾಖೆ ಮೂಲಕ ಹಾಗೂ ಕೇಂದ್ರವು ಕೇಂದ್ರ ರೇಷ್ಮೆ ಮಂಡಳಿ ಮೂಲಕ ರೇಷ್ಮೆ ಕೃಷಿ ಮತ್ತು ಉದ್ಯಮದ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿವೆ. ರೈತರು ಹಾಗೂ ನೂಲು ಬಿಚ್ಚಾಣಿಕೆದಾರರು ಈ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.

ಎಚ್ಚರ ವಹಿಸಬೇಕು: ‘ಗೂಡು ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಇ–ಹರಾಜು ಪ್ರಕ್ರಿಯೆ ಮುಂದುವರಿಯಬೇಕು. ಗೂಡು ಖರೀದಿಸಿದ ರೀಲರ್‌ಗಳು ರೈತರಿಗೆ ಸಕಾಲಕ್ಕೆ ಹಣ ಪಾವತಿಸಬೇಕು. ರೀಲರ್‌ಗಳು ತೂಕ ಮತ್ತು ಬೆಲೆಯಲ್ಲಿ ಮೋಸ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಸೂಚಿಸಿದರು.

ದ್ವಿತಳಿ ರೇಷ್ಮೆ: ‘ವಿದೇಶಿ ರೇಷ್ಮೆ ಗೂಡಿನ ಪೈಪೋಟಿಗೆ ಅನುಗುಣವಾಗಿ ಜಿಲ್ಲೆಯ ರೈತರು ಇತ್ತೀಚಿನ ವರ್ಷಗಳಲ್ಲಿ ದ್ವಿತಳಿ ರೇಷ್ಮೆ ಗೂಡು ಬೆಳೆಯುತ್ತಿದ್ದು, ಕೋಲಾರ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈ ಗೂಡು ಬರುತ್ತಿದೆ’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಮಾಹಿತಿ ನೀಡಿದರು.

‘ಶಾಶ್ವತ ನೀರಾವರಿ ಸೌಲಭ್ಯ ಇಲ್ಲದಿದ್ದರೂ ಜಿಲ್ಲೆಯ ರೈತರು ಕಷ್ಟಪಟ್ಟು ರೇಷ್ಮೆ ಉತ್ಪಾದನೆ ಮಾಡುತ್ತಿದ್ದಾರೆ. ರೇಷ್ಮೆ ಕೃಷಿ ಹಾಗೂ ಉದ್ಯಮದ ಮೇಲೆ ಸಾಕಷ್ಟು ರೈತರು ಮತ್ತು ರೀಲರ್‌ಗಳು ಅವಲಂಬಿತರಾಗಿದ್ದಾರೆ. ಬರ ಪರಿಸ್ಥಿತಿ ನಡುವೆಯೂ ರೈತರು ಈ ರೇಷ್ಮೆ ಕೃಷಿಯಲ್ಲಿ ಬದುಕು ಕಂಡುಕೊಂಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಮನ ಹರಿಸಬೇಕು: ‘ಹಿಪ್ಪು ನೇರಳೆಯಲ್ಲಿ ಅನೇಕ ತಳಿಗಳಿವೆ. ಒಣ ಭೂಮಿ ಬೇಸಾಯಕ್ಕೆ ಅನುಗುಣವಾಗಿ ಸೊಪ್ಪು ಬೆಳೆಯುವುದರ ಬಗ್ಗೆ ಮಾಹಿತಿ ನೀಡಿದರೆ ಹೆಚ್ಚಿನ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ರೇಷ್ಮೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕಚೇರಿಗೆ ಸೀಮಿತವಾಗುವುದನ್ನು ಬಿಟ್ಟು ಕ್ಷೇತ್ರ ಕೆಲಸದತ್ತ ಗಮನ ಹರಿಸಬೇಕು’ ಎಂದು ಸಿಇಒ ತಾಕೀತು ಮಾಡಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ವಿಸ್ತರಣಾಧಿಕಾರಿ ಜಯಶಂಕರ್, ವಲಯಾಧಿಕಾರಿ ಬ್ಯಾಟರಾಯಪ್ಪ, ರೇಷ್ಮೆ ಪ್ರವರ್ತಕ ಶ್ರೀನಿವಾಸಗೌಡ ಹಾಜರಿದ್ದರು.

ಚೀನಾ ರೇಷ್ಮೆ ಆಮದು ತಡೆಗೆ ಆಮದು ಸುಂಕ ಏರಿಕೆಯು ಮಾರ್ಗೋಪಾಯವಲ್ಲ. ದೇಸಿ ರೈತರು ಅದೇ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಗಮನ ಹರಿಸಬೇಕು. ಆಗ ಚೀನಾ ರೇಷ್ಮೆ ಆಮದಿಗೆ ಕಡಿವಾಣ ಬೀಳುತ್ತದೆ. ಇದರಿಂದ ಸ್ಥಳೀಯ ರೇಷ್ಮೆ ಬೆಳೆಗಾರರ ಹಿತ ರಕ್ಷಣೆಯಾಗುತ್ತದೆ
ಕೆ.ಎಸ್‌.ಲತಾಕುಮಾರಿ, ಜಿ.ಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.