ADVERTISEMENT

ರೇಷ್ಮೆ ಮಾರುಕಟ್ಟೆ ಸುಧಾರಣೆ: ಬಿಸ್ಸೇಗೌಡ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 10:46 IST
Last Updated 19 ಡಿಸೆಂಬರ್ 2012, 10:46 IST

ಕೋಲಾರ: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ಮಾರುಕಟ್ಟೆ ಆಧುನೀಕರಣಗೊಳಿಸುವುದು, ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎನ್.ಎಸ್.ಬಿಸ್ಸೇಗೌಡ ಇಲ್ಲಿ ಈಚೆಗೆ ತಿಳಿಸಿದರು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, 11ನೇ ಪಂಚವಾರ್ಷಿಕ ಯೋಜನೆಯಡಿ ಉತ್ತರ ಕರ್ನಾಟಕ ಭಾಗದ ಪ್ರದೇಶಗಳಲ್ಲೂ ರೇಷ್ಮೆ ಗೂಡುಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕಿದೆ. ಅದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಉತ್ಪಾದನೆಯಾಗುವ ರೇಷ್ಮೆಗೆ ಅಷ್ಟಾಗಿ ಬೇಡಿಕೆ ಇಲ್ಲದಿರುವುದಕ್ಕೆ ಮಿಶ್ರತಳಿಯಾಗಿರುವುದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಿಶ್ರತಳಿಯಿಂದ ದ್ವಿತಳಿಯತ್ತ ರೈತರ ಒಲವು ತೋರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದೇಶದಲ್ಲಿ ಉತ್ಪಾದನೆಯಾಗುತ್ತಿರುವ ರೇಷ್ಮೆ ಗುಣಮಟ್ಟ ಹೆಚ್ಚಿಸಬೇಕಿದೆ. ಅದಕ್ಕಾಗಿ ಹೆಚ್ಚಿನ ಸಂಶೋಧನೆ, ರೈತರಿಗೆ ಸಾಲ, ತಾಂತ್ರಿಕ ನೆರವು ನೀಡಲಾಗುವುದು. ಜಿಲ್ಲೆಯಲ್ಲಿ ಹಿಪ್ಪು ನೇರಳೆ ಬೇಸಾಯ, ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ರೇಷ್ಮೆ ಕೃಷಿ ವಿಜ್ಞಾನಿ ನೊಬೆಲ್ ಮಾರಿಸನ್ ಮಾತನಾಡಿ, ಇನ್ನು ಮೂರು ವರ್ಷಗಳಲ್ಲಿ ರೇಷ್ಮೆ ಉತ್ಪಾದನೆ, ಗುಣಮಟ್ಟದಲ್ಲಿ ಚೀನಾ ದೇಶವನ್ನು ಹಿಂದಕ್ಕಲಿದ್ದೇವೆ ಎಂದರು.ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲಕುಮಾರ್, ಡಿ.23ರಂದು ನಗರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ರಾಜ್ಯ, ಕೇಂದ್ರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡರಾದ ಪ್ರಸಾದಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್, ಕುಮಾರ್, ಇಕ್ಬಾಲ್, ಅಶ್ವತ್ಥನಾರಾಯಣ, ಷಫೀ, ಗೋಪಾಲಗೌಡ, ಶಿವಕುಮಾರ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.