ADVERTISEMENT

ರೈತರ ಒಳಿತಿಗೆ ಕಾಳಜಿ ವಹಿಸಿ: ವರ್ತೂರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:50 IST
Last Updated 14 ಸೆಪ್ಟೆಂಬರ್ 2011, 9:50 IST

ಕೋಲಾರ: `ಹೈನುಗಾರಿಕೆ, ಕೃಷಿ ಮತ್ತು ತೋಟಗಾರಿಕೆಯೇ ಜೀವಾಳವಾಗಿರುವ ಜಿಲ್ಲೆ ಯಲ್ಲಿ ಎಲ್ಲ ರೈತರ ಒಳಿತಿಗೆ ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆ ಇಲಾಖೆ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೂರೂ ಇಲಾಖೆಗಳ ಕಾರ್ಯ ವೈಖರಿ, ಪ್ರಗತಿ, ಅನುದಾನದ ಕುರಿತು ಮಾಹಿತಿ ಪಡೆದ ಬಳಿಕ, ರೈತರಿಗೆ ನಿಗದಿಯಾಗಿರುವ ಸಹಾಯಧನ, ಸೌಲಭ್ಯಗಳು ಸಲೀಸಾಗಿ ದೊರಕು ವಂತಾಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಯಾವ ಪ್ರಲೋಭನೆಗೂ ಒಳಗಾಗದೆ, ರೈತರನ್ನು ಹಿಂಸಿಸದೆ ಕೆಲಸ ಮಾಡಬೇಕು ಎಂದರು.

ಪಶುಪಾಲನೆ ಇಲಾಖೆಯ ವೈದ್ಯರು ರೈತರಲ್ಲಿಗೆ ಬಂದು ಪಶುಗಳಿಗೆ ಚಿಕಿತ್ಸೆ ನೀಡಲು ಹಣ ಪಡೆಯುವುದೇ ಅಲ್ಲದೆ, ಪ್ರತ್ಯೇಕ ಔಷಧಿ ಚೀಟಿಗಳನ್ನೂ ಬರೆದುಕೊಡುವುದು ಮಾಮೂಲಾ ಗಿದೆ. ಅದನ್ನು ನಿಯಂತ್ರಿಸಲು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಎಂದು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಕ್ಷಮೆ ಯಾಚನೆ: ತಾಲ್ಲೂಕಿನ ಅಮ್ಮನಲ್ಲೂರಿಗೆ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸ್ಥಳವಿದ್ದರೂ, ಕಾಮಗಾರಿ ಶುರುವಾಗುವ ಹಂತದಲ್ಲಿ ಅದನ್ನು ಹುತ್ತೂರಿಗೆ ಸ್ಥಳಾಂತರಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಎಚ್.ಸಿ.ರಮೇಶ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಭೂಮಿ ಮಂಜೂರಾಗಿರುವ ಪ್ರಮಾಣಪತ್ರವನ್ನು ಸಚಿವರು ಪ್ರದರ್ಶಿಸಿದರು.

ಕೇಂದ್ರವನ್ನು ನಿರ್ಮಿಸಲು ಜಾಗವನ್ನು ದಾನವನ್ನಾಗಿ ನೀಡಲಾಗಿದೆ. ಅನುದಾನವೂ ಬಿಡುಗಡೆಯಾಗಿದೆ. ಈ ಹಂತದಲ್ಲಿ ಕೇಂದ್ರವನ್ನು ಸ್ಥಳಾಂತರಿಸಬೇಕು ಎಂದು ಇಲಾಖೆ ಆಯುಕ್ತರಿಗೆ, ಸರ್ಕಾರಕ್ಕೆ ಪತ್ರ ಬರೆಯುವ ಆತುರ ಏಕೆ? ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದ್ದೀರಿ. ಹಳ್ಳಿಗೆ ಆಸ್ಪತ್ರೆ ಮಂಜೂರು ಮಾಡಿಸಬೇಕೆಂದರೆ ಕಣ್ಣಲ್ಲಿ ರಕ್ತ ಬರುತ್ತದೆ. ಅದನ್ನು ಸ್ಥಳಾಂತರಿಸಲು ಎಷ್ಟು ಧೈರ್ಯ ನಿಮಗೆ ಎಂದು ಪ್ರಶ್ನಿಸಿದರು.

ಎಂಜಿನಿಯರ್ ಪತ್ರದ ಮೇರೆಗೆ ಪತ್ರ ಬರೆಯಲಾಗಿದೆ ಎಂಬ ವೈದ್ಯಾಧಿಕಾರಿ ಸ್ಪಷ್ಟನೆ ಒಪ್ಪದ ಸಚಿವರು, ಜಿಲ್ಲಾ ಆಸ್ಪತ್ರೆ ಸರಿ ಇಲ್ಲ ಎಂದು ಎಂಜಿನಿಯರ್ ಪತ್ರ ಬರೆದರೆ ಅದನ್ನು ಒಡೆದು ಉರುಳಿಸಿಬಿಡುವಿರಾ? ಎಂದು ಮರುಪ್ರಶ್ನಿಸಿದರು. ನಂತರ ಅಧಿಕಾರಿ ತಪ್ಪಾಯಿತು ಎಂದು ಕ್ಷಮೆ ಕೋರಿದರು.

ಹಳ್ಳಿಗಳಿಗಿಂತ ಪಟ್ಟಣಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ಅನುದಾನ ದುರ್ಬಳಕೆಯಾಗುತ್ತಿದೆ. ಆ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ ಎಂದ ಅವರು, ಮಹಿಳೆಯರ ಕಾಲೇಜಿನಲ್ಲಿ ಪ್ರತಿ ವರ್ಷವೂ ಸುಣ್ಣ-ಬಣ್ಣಬಳಿಯಲು ಲಕ್ಷಾಂತರ ರೂಪಾಯಿ ಪಡೆಯುವ ಗುತ್ತಿಗೆದಾರರು ಕೆಲಸವನ್ನು ಮಾಡುವುದೇ ಇಲ್ಲ. ಈ ಬಗ್ಗೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಮಾತ್ರ ಗೊತ್ತಿರುತ್ತದೆಯೇ ಹೊರತು ಬೇರಾರ ಗಮನಕ್ಕೂ ಬರುವುದಿಲ್ಲ ಎಂದು ಆರೋಪಿಸಿದರು.

ಎಚ್ಚರಿಕೆ: ಪಟ್ಟಣ/ನಗರ ಪ್ರದೇಶಗಳಲ್ಲಿ ಸರ್ಕಾರದ ಹಣ ಲೋಪವಾಗದಂತೆ ಎಂಜಿನಿ ಯರ್‌ಗಳು ಎಚ್ಚರಿಕೆ ವಹಿಸಬೇಕು. ಇದುವರೆಗೂ ಜಿಲ್ಲೆಯಲ್ಲಿ ಮನೆ ಯಜಮಾನ ಎಂಬುವವರು ಇರಲಿಲ್ಲ. ಇದೀಗ ಪೂರ್ತಿ ಅಧಿಕಾರ ಪಡೆದು ಉಸ್ತುವಾರಿ ಸಚಿವನಾಗಿರುವೆ. ಮೊದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಜಿಲ್ಲಾ ಮಟ್ಟದ ಯಾವೊಬ್ಬ ಅಧಿಕಾರಿಯೂ ಕರ್ತವ್ಯ ನಿರ್ಲಕ್ಷ್ಯ ಮಾಡಬಾರದು. ಅನುದಾನ ಸದ್ಬಳಕೆ ಯಾಗುವಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಬಂಗಾರಪೇಟೆ ತಾಲ್ಲೂಕಿನ ಮಾವಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಕುಸಿದು ಯುವಕರೊಬ್ಬರು ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಕಟ್ಟಡದ ಗುತ್ತಿಗೆದಾರರನ್ನು ಕಪ್ಪಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಿ ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.

ನಗರದ ಕ್ಲಾಕ್‌ಟವರ್‌ನಲ್ಲಿರುವ ದರ್ಗಾ ಶಾಲೆಯಲ್ಲಿ ಶಿಕ್ಷಕರೊಬ್ಬರು ಗುತ್ತಿಗೆ ಪಡೆದು 2.60 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ತಡೆಯೊಡ್ಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದಾಗ, ಆ ಬಗ್ಗೆ ಕಣ್ಣಿಟ್ಟಿರಿ ಎಂದು ಸಚಿವರು ಸೂಚಿಸಿದರು.

ಎಲ್ಲ ಇಲಾಖೆಗಳ ಪೈಕಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಇಲಾಖೆಯ ಚೆಕ್‌ಗಳನ್ನು ಸಮಾಜ ಕಲ್ಯಾಣಾಧಿಕಾರಿ ಜೇಬಿನಲ್ಲೆ ಇಟ್ಟುಕೊಂಡಿದ್ದು ಬೇಕೆಂದಾಗ ಗುತ್ತಿಗೆ ಸಂಸ್ಥೆಯೊಂದರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕಿನಿಂದ ಪಡೆಯುತ್ತಾರೆ. ಗುತ್ತಿಗೆ ಸಂಸ್ಥೆಯು ಕೂಡ ಶಾಮೀಲಾಗಿ ಹಾಸ್ಟೆಲ್‌ಗಳಿಗೆ ಸಾಮಗ್ರಿ ಪೂರೈಸಿದಂತೆ ಬಿಲ್‌ಗಳನ್ನು ಸಿದ್ಧಪಡಿಸಿ ನೀಡುತ್ತದೆ. ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಇಂಥ ಅವ್ಯವಹಾರಗಳನ್ನು ಪತ್ತೆ ಹಚ್ಚಬೇಕು ಎಂದು ಸಚಿವರು ಪ್ರಭಾರಿ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ಮೀನಾ, ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ, ಕ್ರಮವಾಗಿ ಕೋಲಾರ-ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ.ತ್ಯಾಗರಾಜನ್ ಮತ್ತು ದೇವಜ್ಯೋತಿ ರೇ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.