ADVERTISEMENT

ಲಕ್ಷಾಂತರ ನಷ್ಟ: ದೂರು ನೀಡದ ನಗರಸಭೆ ಮಡೇರಹಳ್ಳಿ ಪಂಪ್ ಹೌಸ್‌ಗೆ ಹಾನಿ.

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 9:50 IST
Last Updated 29 ಮಾರ್ಚ್ 2011, 9:50 IST
ಲಕ್ಷಾಂತರ ನಷ್ಟ: ದೂರು ನೀಡದ ನಗರಸಭೆ ಮಡೇರಹಳ್ಳಿ ಪಂಪ್ ಹೌಸ್‌ಗೆ ಹಾನಿ.
ಲಕ್ಷಾಂತರ ನಷ್ಟ: ದೂರು ನೀಡದ ನಗರಸಭೆ ಮಡೇರಹಳ್ಳಿ ಪಂಪ್ ಹೌಸ್‌ಗೆ ಹಾನಿ.   

ಕೋಲಾರ: ನಗರಕ್ಕೆ ನೀರು ಪೂರೈಸುವ, ನಗರದ ಹೊರವಲಯದಲ್ಲಿರುವ ಮಡೇರಹಳ್ಳಿ ಕೆರೆ ಆವರಣದಲ್ಲಿರುವ ಪಂಪ್ ಹೌಸ್‌ಗೆ ಶನಿವಾರ ರಾತ್ರಿ ನುಗ್ಗಿದ ದುಷ್ಕರ್ಮಿಗಳು ಸ್ವಿಚ್ ಪ್ಯಾನೆಲ್ ಬೋರ್ಡ್‌ಗನ್ನು ದ್ವಂಸಗೊಳಿಸಿದ್ದಾರೆ. ಪಂಪ್‌ಹೌಸ್‌ಗೆ ವಿದ್ಯುತ್ ಪೂರೈಸುವ ಕಂಬಗಳ ವೈರ್‌ಗಳನ್ನು ಕೂಡ ಕತ್ತರಿಸಿ ಕಳವು ಮಾಡಿದ್ದಾರೆ. ಅಲ್ಲದೆ, ಕೊಳವೆಬಾವಿಗಳ ಮುಚ್ಚಳವನ್ನು ಕಿತ್ತು ಅದರೊಳಕ್ಕೆ ಕಲ್ಲುಗಳನ್ನು ಸೇರಿಸಿದ್ದಾರೆ.
 

ಅಲ್ಲದೆ, ಈ ಘಟನೆ ಭಾನುವಾರ ಬೆಳಿಗ್ಗೆಯೇ ಗೊತ್ತಾದರೂ ನಗರಸಭೆಯು ಪೊಲೀಸರಿಗೆ ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದೆ. ಈ ಘಟನೆ ಕುರಿತು ಇದುವರೆಗೂ ನಗರಸಭೆಯು ಪೊಲೀಸರಿಗೆ ಅಧಿಕೃತ ದೂರನ್ನು ಇನ್ನೂ ಸಲ್ಲಿಸಿಲ್ಲ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ.ನಗರಸಭೆ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡರು ಡಿವೈಎಸ್‌ಪಿ ಪ್ರಕಾಶಗೌಡರಿಗೆ ನೀಡಿದ ಮಾಹಿತಿ ಮೇರೆಗೆ ಬೆಳಿಗ್ಗೆ 11ರ ವೇಳೆಗೆ ಸ್ಥಳಕ್ಕೆ ಬಂದ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಧನಂಜಯಕುಮಾರ, ಗ್ರಾಮಾಂತರ ಠಾಣೆ ಎಸ್‌ಐ ಗಣೇಶ್ ಸ್ಥಳ ಪರಿಶೀಲನೆ ನಡೆಸಿದರು. ನಗರಸಭೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್, ಮುಖ್ಯ ಮೆಕ್ಯಾನಿಕ್ ಲಕ್ಷ್ಮಿನಾರಾಯಣಪ್ಪ ಹಾಜರಿದ್ದು ಅಂದಾಜು ನಷ್ಟದ ಮಾಹಿತಿ ನೀಡಿದರು.
 

20 ಲಕ್ಷ ಹಾನಿ: ವೈರುಗಳು ಮತ್ತು ಪ್ಯಾನೆಲ್ ಸ್ವಿಚ್ ಬೋರ್ಡ್, ಕೊಳವೆಬಾವಿಗಳಿಗೆ ಆಗಿರುವ ಹಾನಿಯ ಅಂದಾಜು ವೆಚ್ಚ 20 ಲಕ್ಷ ರೂಪಾಯಿ ಎಂಬುದು ನಗರಸಭೆ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡರ ನುಡಿ. ನಷ್ಟದ ಅಂದಾಜಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.‘ಕಳವು ಮಾಡುವವರು ವಸ್ತುಗಳನ್ನು ಕಳವು ಮಾಡುತ್ತಾರೆ. ಆದರೆ ಈ ಘಟನೆಯಲ್ಲಿ ಕೊಳವೆಬಾವಿಗಳಿಂದ ನೀರು ಎತ್ತಲಾಗದಂತೆ ಕಲ್ಲುಗಳನ್ನು ಹಾಕಿರುವುದು, ವಿದ್ಯುತ್ ಕಂಬಗಳನ್ನು ಮುರಿದಿರುವುದು ಹಲವು ಅನುಮಾನಗಳಿಗೆ ಈಡು ಮಾಡಿದೆ’ ಎಂಬುದು ಅವರ ಅಭಿಪ್ರಾಯ. ‘ಕೆಲವು ದಿನಗಳ ಹಿಂದೆ ವಿದ್ಯುತ್ ಕಂಬದ ವೈರುಗಳನ್ನು ಕತ್ತರಿಸಿ ಕಳವು ಮಾಡಲಾಗಿತ್ತು. ಆ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಈಗ ದುಷ್ಕರ್ಮಿಗಳು ಮತ್ತೆ ಕಂಬದ ವೈರುಗಳನ್ನು ಕತ್ತರಿಸಿ ಕಳವು ಮಾಡಿದ್ದಾರೆ’ ಎಂದು ಅವರು ತಿಳಿಸಿದರು.
 

ADVERTISEMENT

ತಡ: ಶನಿವಾರ ರಾತ್ರಿಯೇ ಘಟನೆ ನಡೆದಿದ್ದು ಭಾನುವಾರ ಬೆಳಿಗ್ಗೆ ಗೊತ್ತಾದರೂ ತಡವಾಗಿ ಪೊಲೀಸರಿಗೆ ಮಾಹಿತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಭಾನುವಾರ ನಗರಸಭೆಯ ಕೆಲವು ಸದಸ್ಯರು ಊರಲ್ಲಿ ಇರಲಿಲ್ಲ. ರಜೆ ದಿನವೂ ಆದ್ದರಿಂದ ಅಧಿಕಾರಿಗಳೂ ಲಭ್ಯವಿರಲಿಲ್ಲ. ಅವರ ಸಮ್ಮುಖದಲ್ಲೆ ದೂರು, ಸ್ಥಳಪರಿಶೀಲನೆ ನಡೆಯಲಿ ಎಂಬ ಉದ್ದೇಶದಿಂದ ಸೋಮವಾರ ಪೊಲೀಸರಿಗೆ ಮಾಹಿತಿ ನೀಡಲಾಯಿತು’ ಎಂದು ಹೇಳಿದರು. ನಗರಸಭೆ ಸದಸ್ಯರಾದ ಸಲಾವುದ್ದೀನ್ ಬಾಬು, ರಮೇಶ್, ಮಧುಸೂದನ್‌ಕುಮಾರ್, ಚಾಂದ್‌ಪಾಷಾ, ಜಾಫರ್, ರಿಯಾಜ್‌ಪಾಷಾ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.