ADVERTISEMENT

ಲೂಟಿಯಲ್ಲಿ ನಾರಾಯಣಸ್ವಾಮಿಗೆ ಮೊದಲ ಸ್ಥಾನ

ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಲೇವಡಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 12:46 IST
Last Updated 9 ಮೇ 2018, 12:46 IST

ಕೋಲಾರ: ‘ಸರ್ಕಾರದ ಹಣ ಲೂಟಿ ಮಾಡುವಲ್ಲಿ ಬಂಗಾರಪೇಟೆಯ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೊದಲ ಸ್ಥಾನದಲ್ಲಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಲೇವಡಿ ಮಾಡಿದರು.

ಜಿಲ್ಲೆಯ ಬಂಗಾರಪೇಟೆಯಲ್ಲಿ ಮಂಗಳವಾರ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ಬಾಬು ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಎಸ್.ಎನ್.ನಾರಾಯಣಸ್ವಾಮಿ ಅವರು 2013ರಲ್ಲಿ ಆಕಸ್ಮಿಕವಾಗಿ ಶಾಸಕರಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ಬಿಜೆಪಿ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಿತ್ತು. ಜೆಡಿಎಸ್‌ನಲ್ಲೂ ಪ್ರಬಲ ಅಭ್ಯರ್ಥಿ ಇರಲಿಲ್ಲ’ ಎಂದರು.

‘2013ರ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯಾಗಿದ್ದೆ. ಆಗ ಪಕ್ಷದ ಬಿ.ಪಿ.ವೆಂಕಟಮುನಿಯಪ್ಪ ಅವರು ನನಗೆ ಬೆಂಬಲ ನೀಡದೆ ಎಸ್‌.ಎನ್.ನಾರಾಯಣಸ್ವಾಮಿ ಜತೆ ಒಳ ಒಪ್ಪಂದ ಮಾಡಿಕೊಂಡರು. ವೆಂಕಟಮುನಿಯಪ್ಪರ ಕುತಂತ್ರದಿಂದ ನಾನು ಸೋಲುವಂತಾಯಿತು’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಈ ಬಾರಿ ನನಗೆ ಟಿಕೆಟ್ ಕೊಡುವುದಾಗಿ ಮೋಸ ಮಾಡಿದ್ದಾರೆ. ಆ ಮುಖಂಡರೇ ಮಾಡಿಸಿದ ಸರ್ವೆಯಲ್ಲಿ ನನಗೆ ಟಿಕೆಟ್ ನೀಡಿದರೆ ಬಿಜೆಪಿ ಗೆಲ್ಲುತ್ತದೆ ಎಂದು ಗೊತ್ತಾಗಿದೆ. ಆದರೆ, ಮುಖಂಡರು ಕಾಂಗ್ರೆಸ್‌ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸೋಲುವ ವ್ಯಕ್ತಿ ಬಿ.ಪಿ.ವೆಂಕಟಮುನಿಯಪ್ಪಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ದೂರಿದರು.

ಬಿಜೆಪಿ ಛಿದ್ರವಾಗಿದೆ: ‘ವೆಂಕಟಮುನಿಯಪ್ಪ ಮತ್ತು ಅವರ ಮಗ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್‌ ಸೇರಿಕೊಂಡು ಕ್ಷೇತ್ರದಲ್ಲಿ ಬಿಜೆಪಿಯನ್ನು ಹಾಳು ಮಾಡಿದ್ದಾರೆ. ಈ ಸಂಗತಿ ಆ ಪಕ್ಷದ ರಾಜ್ಯ ನಾಯಕರಿಗೂ ಗೊತ್ತಾಗಿದೆ. ಮಹೇಶ್‌ ದರ್ಪದಿಂದ ಬಿಜೆಪಿ ಛಿದ್ರವಾಗಿದೆ’ ಎಂದು ಟೀಕಿಸಿದರು.

‘ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ ಆಸ್ಪತ್ರೆ, ದ್ವಿಪಥ ರಸ್ತೆ ಮತ್ತು ಮಿನಿ ವಿಧಾನಸೌಧ ಮಂಜೂರು ಮಾಡಿಸಿದ್ದೆ. ನನ್ನ ಕಾಲದಲ್ಲೇ ಮಿನಿ ವಿಧಾನಸೌಧ ಕಾಮಗಾರಿ ಪೂರ್ಣಗೊಂಡಿತು. ಚುನಾವಣೆ ನೀತಿಸಂಹಿತೆ ಜಾರಿಯಾದ ಕಾರಣ ಮಿನಿ ವಿಧಾನಸೌಧ ಉದ್ಘಾಟನೆಯಾಗಲಿಲ್ಲ. ಆದರೆ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ತನ್ನ ಅವಧಿಯಲ್ಲೇ ಮಿನಿ ವಿಧಾನಸೌಧ ನಿರ್ಮಾಣವಾಯಿತೆಂದು ಹೇಳುತ್ತಾ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.

ಉಳಿಗಾಲವಿಲ್ಲ: ‘ದ್ವಿಪಥ ರಸ್ತೆ ಕಾಮಗಾರಿಯನ್ನು ಬೇರೆ ಗುತ್ತಿಗೆದಾರರಿಗೆ ಕೊಟ್ಟಿರುವುದಾಗಿ ಶಾಸಕರು ಹೇಳುತ್ತಿದ್ದರು. ಆದರೆ, ಅವರದೇ ಟಿಪ್ಪರ್, ಟ್ರಾಕ್ಟರ್‌ಗಳು ಕಾಮಗಾರಿ ಸ್ಥಳದಲ್ಲಿ ಸಂಚರಿಸುತ್ತಿದ್ದವು. ಅವರಲ್ಲದೆ ಬೇರೆ ಯಾರು ಕಾಮಗಾರಿಯ ಗುತ್ತಿಗೆ ಪಡೆದಿದ್ದರು?’ ಎಂದು ಪ್ರಶ್ನಿಸಿದರು.

‘ಶಾಸಕರು ಬಂಗಾರಪೇಟೆ ಸಮೀಪದ ಕೆರೆ ಬಳಿ ನಡಿಗೆ ಪಥ ನಿರ್ಮಿಸುವುದಾಗಿ ಹೇಳಿ ₹ 100 ಕೋಟಿ ಲೂಟಿ ಮಾಡಿದ್ದಾರೆ. ಕೆರೆ ಜಾಗವನ್ನು ಮುಚ್ಚಿಸಿ ನಿವೇಶನಗಳಾಗಿ ಮಾಡಿದ್ದಾರೆ. ಈಗ ಅದೇ ನಿವೇಶನಗಳನ್ನು ಹರಾಜು ಹಾಕಿ ಹಣ ಮಾಡಲು ಪುರಸಭೆಯಲ್ಲಿ ಅನುಮೋದನೆ ಮಾಡಿಸಿದ್ದಾರೆ. ಈ ವ್ಯಕ್ತಿ ಮತ್ತೆ ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರಕ್ಕೆ ಉಳಿಗಾಲವಿಲ್ಲ’ ಎಂದರು.

ಜೆಡಿಎಸ್ ಜಿಲ್ಲಾ ಉಸ್ತುವಾರಿ ಕೆ.ಬಿ.ಗೋಪಾಲಕೃಷ್ಣ, ಅಭ್ಯರ್ಥಿ ಮಲ್ಲೇಶ್‌ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ರೈತ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಅನಿತಾ, ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ವಕೀಲ ಶಂಕರಪ್ಪ ಪಾಲ್ಗೊಂಡಿದ್ದರು.

ಪ್ರವಾಸ ರದ್ದು

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಬಂಗಾರಪೇಟೆಯ ಸಭೆಗೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರಣಕ್ಕಾಗಿ ಕೆಜಿಎಫ್‌ ಬಳಿ ಹೆಲಿಪ್ಯಾಡ್‌ ನಿರ್ಮಿಸಲಾಗಿತ್ತು. ದೇವೇಗೌಡರು ಬರುತ್ತಾರೆಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಬಂದಿದ್ದರು. ಆದರೆ, ಹವಾಮಾನ ವೈಪರಿತ್ಯದ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ದೇವೇಗೌಡರ ಬಂಗಾರಪೇಟೆ ಪ್ರವಾಸ ರದ್ದಾಯಿತು.

**
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತಕ್ಕಾಗಿ ಕೊಡುವ ಉಡುಗೊರೆಗಳನ್ನು ಮತದಾರರು ತೆಗೆದುಕೊಳ್ಳಬೇಕು. ಆದರೆ, ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆ ಮತ ಚಲಾಯಿಸಬೇಕು 
– ಎಂ.ನಾರಾಯಣಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.