ADVERTISEMENT

ವೈರಾಣು ರೋಗಕ್ಕೆ ಪಪ್ಪಾಯಿ ಬಲಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 9:40 IST
Last Updated 17 ಜನವರಿ 2012, 9:40 IST

ಶ್ರೀನಿವಾಸಪುರ: ಇಲ್ಲಿನ ಪಪ್ಪಾಯಿ ಬೆಳೆ ವೈರಾಣು ರೋಗ ಪೀಡಿತವಾಗಿದ್ದು, ಬೆಳೆಗಾರರು ಹೆಚ್ಚಿನ ಬಂಡವಾಳ ಹಾಕಿ ಬೆಳೆದಿರುವ ಗಿಡಗಳನ್ನು ಕಡಿದು ಹಾಕುತ್ತಿದ್ದಾರೆ.

ಈ ಹಿಂದೆ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಕೆಲವು ಕಡೆ ವೈರಾಣು ರೋಗ ಕಾಣಿಸಿಕೊಂಡರೂ ತೀವ್ರತೆ ಅಷ್ಟಾಗಿ ಇರುತ್ತಿರಲಿಲ್ಲ. ಆದರೆ ಈಗ ರೋಗ ಹತೋಟಿ ಮೀರಿ ಹೋಗಿದೆ. ದಿಕ್ಕು ತೋಚದ ಬೆಳೆಗಾರರು ಫಸಲಿಗೆ ಬಂದಿರುವ ಪರಂಗಿ ಗಿಡಗಳಿಗೆ ಕೊಡಲಿ ಹಾಕುತ್ತಿದ್ದಾರೆ. ಎಳೆ ಗಿಡಗಳಿಗೂ ರೋಗ ಹರಡಿದ್ದು ಬೆಳೆಯುವ ಸೂಚನೆ ಕಂಡುಬರುತ್ತಿಲ್ಲ.

ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಪಪ್ಪಾಯಿ ಬೆಳೆದು ಒಳ್ಳೆ ಹಣ ಮಾಡಿದರು. ಅವರಿಂದ ಪ್ರೇರಿತರಾದ ಹೆಚ್ಚಿನ ಸಂಖ್ಯೆಯ ರೈತರು ಈಗ ಪಪ್ಪಾಯಿ ಬೆಳೆದಿದ್ದಾರೆ. ಆದರೆ ಬೆಳೆಗೆ ವ್ಯಾಪಕವಾಗಿ ತಟ್ಟಿರುವ ವೈರಾಣು ರೋಗ ಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗಿ, ಕ್ರಮೇಣ ಒಣಗಿ ಉದುರುತ್ತಿದೆ. ಬೆಳೆದಿರುವ ಮರಗಳಲ್ಲಿ ಬಂಜೆತನ ಕಾಣಿಸಿಕೊಂಡಿದೆ. ಕಾಯಿಯ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿಲ್ಲ.

ವೈರಾಣು ರೋಗ ಬೆಳೆಯನ್ನು ಬಲಿ ತೆಗೆದುಕೊಂಡಿದೆ. ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಎಲೆಗಳು ಉದುರಿ ಮರಗಳು ಬೋಳಾಗುತ್ತಿವೆ. ಇರುವ ಕಾಯಿಗಳ ಮೇಲೆ ಬಿಳಿ ಮತ್ತು ಕಪ್ಪು ಮಚ್ಚೆಗಳು ಕಾಣಿಸಿಕೊಂಡಿವೆ. ಸಿಹಿಯೂ ಕಡಿಮೆಯಾಗಿದೆ. ಈ ಥರದ ಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಬೆಳೆದ ತಪ್ಪಿಗೆ ಹೆಚ್ಚಿನ ನಷ್ಟ ಅನುಭವಿಸಬೇಕಾಗಿ ಬಂದಿದೆ ಎಂದು ಪಪ್ಪಾಯಿ ಬೆಳೆಗಾರ ಮಧ್ವೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಈಗ ಪಪ್ಪಾಯಿ ಬೀದಿಗೆ ಬಿದ್ದಿದೆ. ತೋಟದಿಂದ ನಿರ್ದಿಷ್ಟ ಕಂಪನಿಗೆ ಹೋಗುತ್ತಿದ್ದ ಈ ಉತ್ಪನ್ನ ಸಂತೆ ಹಾಗೂ ಪೇಟೆಯ ರಸ್ತೆಬದಿಗೆ ಬಂದಿದೆ. ಬಹಳಷ್ಟು ಹಣ್ಣು ತೋಟಗಳಲ್ಲಿಯೇ ಕೊಳೆತು ನಾರುತ್ತಿದೆ. ಕೋತಿ, ಹಕ್ಕಿಗಳಿಗೆ ಆಹಾರವಾಗುತ್ತಿದೆ. ಕೆಲವರು ತೋಟಗಳಲ್ಲಿನ ಹಣ್ಣನ್ನು ಬಿಡಿಸಿ ತಂದು ಹೋದಷ್ಟಕ್ಕೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಕಿತ್ತು ತಂದ ಕೂಲಿಯೂ ಸಿಗುತ್ತಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದೆ.

  ಅಂತೂ ಕಳೆದ ಒಂದು ವರ್ಷದಿಂದ ರೈತರಿಗೆ ಅದೃಷ್ಟ ಕೈಕೊಟ್ಟಿದೆ. ಟೊಮೆಟೊ ಬೆಲೆ ಕುಸಿತದಿಂದಾಗಿ ತೋಟಗಳಲ್ಲಿ ಕೊಳೆಯುತ್ತಿದೆ. ಆಲೂಗಡ್ಡೆ ಬೆಳೆ ಅಂಗಮಾರಿಗೆ ತುತ್ತಾಗಿ ಹಾಳಾಗಿದೆ. ಕೈಗೆ ಸಿಕ್ಕಿದ ಗಡ್ಡೆಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ಕೋಸಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಷ್ಟರ ನಡುವೆ ಅಂತರ್ಜಲ ಬರಿದಾಗುತ್ತಿದೆ. ಬೇಸಿಗೆ ಬರುವ ಮುನ್ನವೇ ಕೊಳವೆ ಬಾವಿಗಳಲ್ಲಿ ನೀರು ಖಾಲಿಯಾಗುತ್ತಿದೆ. ಇದು ರೈತರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.