ಶ್ರೀನಿವಾಸಪುರ: ಸರ್ಕಾರ ಎತ್ತಿನ ಹೊಳೆಯಿಂದ ಶಾಶ್ವತ ನೀರಾವರಿ ಒದಗಿಸುವ ನಾಟಕವಾಡುತ್ತಿದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಚಾಂಪಲ್ಲಿ ಗ್ರಾಮದ ರೈತ ಮುಖಂಡ ಟಿ.ಎಸ್.ವೆಂಕಟಾಚಲಪತಿ ಆಪಾದಿಸಿದರು.
ತಾಲ್ಲೂಕಿನ ಚಾಂಪಲ್ಲಿ ಗ್ರಾಮಸ್ಥರು ಪರಮಶಿವಯ್ಯ ವರದಿಗೆ ಆಗ್ರಹಿಸಿ ಸೋಮವಾರ ಪಟ್ಟಣಕ್ಕೆ ಬಂದು ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಎತ್ತಿನ ಹೊಳೆಯಲ್ಲಿ ಶಾಶ್ವತ ನೀರಾವರಿಗೆ ಅಗತ್ಯವಾದ ನೀರಿನ ಲಭ್ಯತೆ ಇಲ್ಲವೆಂದು ತಜ್ಞರು ಹೇಳಿದ್ದರೂ ಸರ್ಕಾರ ಅದನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸಲು ಪರಮಶಿವಯ್ಯ ವರದಿ ಅಂತಿಮ. ಅದನ್ನು ಹೊರತುಪಡಿಸಿ ಬೇರೆ ಕಡೆಯಿಂದ ನೀರು ತರುವುದನ್ನು ಒಪ್ಪುವುದಿಲ್ಲ. ಶುದ್ಧ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಜನರಿಗೆ ನೀರು ಕೊಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಆದರೆ ಕಾರ್ಯಸಾಧುವಲ್ಲದ ಯೋಜನೆಗಳಿಗೆ ಹಣ ವ್ಯಯಿಸುವುದು ಸರಿಯಲ್ಲ ಎಂದು ಹೇಳಿದರು.
ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ವರೆಗೆ ಚಾಂಪಲ್ಲಿ ಗ್ರಾಮಸ್ಥರು ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸದಿರುಲು ನಿರ್ಧರಿಸಿದ್ದಾರೆ. ಚುನಾವಣೆ ಬಹಿಷ್ಕಾರ ನಿರ್ಧಾರ ಅಚಲ. ಇದು ಸಾಂಘಿಕವಾಗಿ ಕೈಗೊಂಡಿರುವ ನಿರ್ಧಾರವಾಗಿದೆ. ಜನ ಪ್ರತಿನಿಧಿಗಳು ಈ ನಿರ್ಧಾರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು. ಪರಮಶಿವಯ್ಯ ವರದಿ ಜಾರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡ ನೀಲಟೂರು ಚಂದ್ರಶೇಖರ್ ಮಾತನಾಡಿ, ಯಾವುದೇ ಚಳವಳಿ ಯಶಸ್ವಿಯಾಗಲು ಸಾರ್ವಜನಿಕರ ಪಾತ್ರ ಹಿರಿದು. ಮುಖಂಡರನ್ನೇ ನಂಬಿ ಕೂತರೆ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರದ ಮೇಲೆ ಬಲವಾದ ಒತ್ತಡ ಹಾಕಬೇಕು. ಸಮಸ್ಯೆ ಕಡೆ ಗಮನ ಹರಿಸುವಂತೆ ಮಾಡಬೇಕು. ಅದಕ್ಕೆ ಸಮಾಜದ ಎಲ್ಲ ವರ್ಗದ ಜನರ ಬೆಂಬಲ ಅಗತ್ಯ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಸಿ.ಎನ್.ನಾರಾಯಣಸ್ವಾಮಿ, ಜಿ.ಕೃಷ್ಣಪ್ಪ, ಸಿ.ವಿ.ನಾರಾಯಣಸ್ವಾಮಿ, ಶ್ರೀನಿವಾಸ್, ಎಸ್.ಚೌಡರೆಡ್ಡಿ, ವಿಜಯಮ್ಮ, ರತ್ನಮ್ಮ, ಕಸ್ತೂರಮ್ಮ, ಸರೋಜಮ್ಮ, ಮುನಿಯಮ್ಮ ಮತ್ತಿತರರು ಜಾಥಾ ನೇತೃತ್ವ ವಹಿಸಿದ್ದರು.
ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಾಲ್ಲೂಕು ಕಚೇರಿ ಅಧಿಕಾರಿ ನಾರಾಯಣರೆಡ್ಡಿ ಅವರಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.