ADVERTISEMENT

ಶ್ರೀನಿವಾಸಪುರ: ತೀರದ ಜಾನುವಾರು ಮೇವಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 10:50 IST
Last Updated 20 ಜುಲೈ 2012, 10:50 IST

ಶ್ರೀನಿವಾಸಪುರ: ತಡವಾಗಿ ಮಳೆಯಾಗಿದೆ. ಆದರೆ ಜಾನುವಾರು ಮೇವಿನ ಬವಣೆ ತೀರಿಲ್ಲ. ಒಣ ಹುಲ್ಲಿನ ಸಂಗ್ರಹ ಮುಗಿದಿರುವುದು ಸಮಸ್ಯೆಗೆ ಕಾರಣವಾಗಿದೆ. ಗ್ರಾಮೀಣರು ಪಟ್ಟಣದಿಂದ ಸೀಮೆ ಹಸುಗಳಿಗೆ ಹಸಿರು ಮೇವು ಖರೀದಿಸಿ ತರುವಂಥ ಪರಿಸ್ಥಿತಿ ಏರ್ಪಟ್ಟಿದೆ.

ಹಳ್ಳಿ ಮಹಿಳೆಯರಿಗೆ ಬಯಲಿನ ಮೇಲಿನ ಹುಲ್ಲನ್ನು ಸಂಗ್ರಹಿಸಿಕೊಂಡು ಬರುವುದೇ ದೊಡ್ಡ ಕೆಲಸ. ಸೂರ್ಯೋದಯಕ್ಕೆ ಮೊದಲೇ ಎದ್ದು ವರವಾರಿ ಹಿಡಿದು ಗುಂಪಾಗಿ ದೂರದ ಪ್ರದೇಶಕ್ಕೆ ಹೋಗುವ ರೈತ ಮಹಿಳೆಯರು, ಬಯಲಿನ ಮೇಲೆ ಒಣಗಿದ ಅಥವಾ ಚಿಗುರಿದ ಹುಲ್ಲನ್ನು ಸಂಗ್ರಹಿಸಿಕೊಂಡು ಬರುವ ಹೊತ್ತಿಗೆ ಮಧ್ಯಾಹ್ನ ಆಗಿರುತ್ತದೆ. ಇನ್ನು ಪುರಷರು ಸೈಕಲ್ ಏರಿ ಹುಲ್ಲಿಗಾಗಿ ಹೋಗುವುದು ಸಾಮಾನ್ಯವಾಗಿದೆ.

 ಇಷ್ಟರ ತನಕ ಹೇಗೋ ನಡೆಯಿತು. ಈಗ ಮಳೆಯಾಗಿದೆ.  ಬಿಡುವಿಲ್ಲದ ಕೆಲಸ. ಆದರೂ ದನಕರುಗಳನ್ನು ಬಿಡುವಂತಿಲ್ಲ. ಹಾಗಾಗಿ ಅರಳಿ, ಆಲ, ಗೋಣಿ, ಬೇವು ಮುಂತಾದ ಸೊಪ್ಪುಗಳನ್ನು ಕೊಯ್ದು ದನಗಳಿಗೆ ಹಾಕಲಾಗುತ್ತಿದೆ. ಕೆಲವರು ರಸ್ತೆ ಬದಿಯಲ್ಲಿ ಬೆಳೆಸಿರುವ ವಿವಿಧ ಜಾತಿಯ ಮರಗಳ ಸೊಪ್ಪನ್ನು ಕೊಯ್ದು ದನಗಳ ಬಾಯಿಗೆ ಇಡುತ್ತಿದ್ದಾರೆ.

ಮರಗಳ ಮೇಲೆ ಬೆಳೆದಿರುವ ಬಜನಿಕೆಗೂ ಬೇಡಿಕೆ ಹೆಚ್ಚಿದೆ. ಕೆಲವು ರೈತರು ಈ ಪರೋಪ ಸಸ್ಯವನ್ನು ಕೊಯ್ದು ಮೇಕೆಗಳಿಗೆ ಹಾಕುತ್ತಿದ್ದಾರೆ. ಒಣ ಹುಲ್ಲನ್ನು ಖರೀದಿಸಲು ಸಿದ್ಧರಿದ್ದರೂ ಸಿಗುತ್ತಿಲ್ಲ. ಮೇವಿನ ಸಮಸ್ಯೆಯಿಂದ ದನಗಳನ್ನು ಮಾರಲು ಹೋದರೂ ಒಳ್ಳೆ ಬೆಲೆ ಸಿಗುತ್ತಿಲ್ಲ. ವಾಸ್ತವದ ಬೆಲೆ ಬದಲಾಗಿ ಮಾಂಸದ ಬೆಲೆಗೆ ಕೇಳುತ್ತಾರೆ ಎಂದು ರೈತರು ತಿಳಿಸಿದರು.

ಈಗಷ್ಟೇ ಮಳೆಯಾಗಿದೆ. ರೈತರು ಜಾನುವಾರು ಮೇವಿಗೆ ಆದ್ಯತೆ ನೀಡಿ ಜೋಳ ಹಾಗೂ ಹುಲ್ಲಿನ ಬೀಜವನ್ನು ಬಿತ್ತುತ್ತಿದ್ದಾರೆ. ಸಮರ್ಪಕವಾಗಿ ಮಳೆಯಾಗಿ ಅದು ಬೆಳೆಯಲು ಕನಿಷ್ಠ ಒಂದು ತಿಂಗಳಾದರೂ ಬೇಕು. ಅಷ್ಟರ ತನಕ ಜಾನುವಾರುಗಳನ್ನು ಸುಧಾರಿಸುವುದು ಕಷ್ಟದ ಕೆಲಸ ಎಂಬುದು ರೈತರ ಅಳಲು.
ಹಸಿರು ಮೇವಿನ ಕೊರತೆಯಿಂದಾಗಿ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದೆ. ಬೂಸಾ, ಹಿಂಡಿಯ ಬೆಲೆ ಗಗನಕ್ಕೇರಿದೆ. ಅದನ್ನು ಕೊಂಡು ತಂದು ಹಸುಗಳಿಗೆ ನೀಡುತ್ತಿರುವುದರಿಂದ ಹಾಲಿನಿಂದ ಬರುವ ಹಣ ಮೇವಿಗೂ ಸಾಕಾಗುತ್ತಿಲ್ಲ ಎಂಬುದು ಹಾಲು ಉತ್ಪಾದಕರ ಸಂಕಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.