ADVERTISEMENT

ಸಮುದಾಯಕ್ಕೆ ದೊರೆತ ಜಯ

ಬಡ್ತಿ ಮೀಸಲಾತಿಗೆ ರಾಷ್ಟ್ರಪತಿ ಅಂಕಿತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 8:31 IST
Last Updated 18 ಜೂನ್ 2018, 8:31 IST

ಬಂಗಾರಪೇಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ್ತಿ ಮೀಸಲಾತಿಗೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ ಎಂದು ಪರಿಶಿಷ್ಟ ಜಾತಿ/ ಪಂಗಡದ ಹಿರಿಯ ಮುಖಂಡ, ನಿವೃತ್ತ ಮುಖ್ಯ ಶಿಕ್ಷಕ ಬಂಗವಾದಿ ನಾರಾಯಣಪ್ಪ ಅಭಿಪ್ರಾಯಪಟ್ಟರು.

ಪರಿಶಿಷ್ಟ ಜಾತಿ/ ಪಂಗಡದ ನೌಕರರ ಸಂಘದ ವತಿಯಿಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿ/ ಪಂಗಡದ ನೌಕರರಿಗೆ ಹಿಂಬಡ್ತಿ ನೀಡಿರುವ ಬಗ್ಗೆ ಹೋರಾಟಗಳು ನಡೆಸಿದ್ದರ ಪ್ರತಿಫಲ ಸಮುದಾಯಕ್ಕೆ ದೊರೆತಿದೆ ಎಂದರು.

ಹಿಂಬಡ್ತಿಯಾದ ಸಂದರ್ಭ ಕಂಗಾಲಾದ ನೌಕರರು ನ್ಯಾಯ ದೊರಕಿಸಿಕೊಡುವಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಸಲ್ಲಿಸಿದ್ದರು. ಸಿದ್ದರಾಮಯ್ಯ ನ್ಯಾಯಕೊಡಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್ ಸರ್ಕಾರದಿಂದ ಸಮುದಾಯದ ನೌಕರರಿಗೆ ನ್ಯಾಯ ಸಿಕ್ಕಿದೆ ಎಂದರು.

ADVERTISEMENT

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ವಿರೋಧದ ನಡುವೆಯೂ ಪರಿಶಿಷ್ಟ ಜಾತಿ, ಪಂಗಡದ ನೌಕರರ ಬಡ್ತಿ ಮೀಸಲಾತಿ ವಿಧೇಯಕ ಮಂಡಿಸಿತ್ತು. ಆದರೆ ರಾಜ್ಯಪಾಲರು ವಿಧೇಯಕಕ್ಕೆ ಅಂಗೀಕಾರ ನೀಡದೆ ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದರು. ರಾಷ್ಟ್ರಪತಿ ಅಂಕಿತ ಹಾಕಿರುವುದು ಸಂತಸ ತಂದಿದೆ ಎಂದರು.

ವಿಧೇಯಕವನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ ಚುನಾವಣೆ ಪೂರ್ವದಲ್ಲಿ ರಾಷ್ಟ್ರಪತಿಗೆ ಕಳುಹಿಸಿದ್ದರೆ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತಿತ್ತು. ತಡವಾಗಿಯಾದರೂ ಹಿಂಬಡ್ತಿ ನೌಕರರಿಗೆ ಅನುಕೂಲವಾಗಿರುವುದು ಸಂತಸದ ವಿಷಯ ಎಂದರು.

ಕಾಂಗ್ರೆಸ್ ರಾಜ್ಯ ಘಟಕ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಎನ್.ವೆಂಕಟೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಪ್ಪ, ರಾಮಕೃಷ್ಣ, ಸರಸ್ವತಿ, ಕಪಾಲಿ ಶಂಕರ್, ಡಾ.ವಾಣಿ, ದಲಿತ ಮುಖಂಡ ಹೂವರಸನಹಳ್ಳಿ ರಾಜಪ್ಪ, ಬಿ.ನಾಗರಾಜ್, ವೆಂಕಟೇಶ್, ಮುನಿನಾರಾಯಣ, ಎಂ.ನಾರಾಯಣ್, ವೆಂಕಟರಮಣಪ್ಪ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.