ADVERTISEMENT

ಸರ್ಕಾರಿ ಶಾಲೆ ಮುಚ್ಚದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 7:50 IST
Last Updated 27 ಅಕ್ಟೋಬರ್ 2011, 7:50 IST

ಕೋಲಾರ: ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪ್ರಮುಖರು ಸೋಮವಾರ ಕೋಲಾರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ  ವ್ಯಾಮೋಹದಿಂದ ಸರ್ಕಾರವು ಕನ್ನಡ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ ಪರಿಣಾಮವಾಗಿ ಇಂದು ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಿಂದ 1 ಕಿಮೀ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದ ಬಡ-ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ನಗರದ ಗಾಂಧಿವನದಿಂದ ಮೆರವಣಿಗೆ ನಡೆಸಿದ ಪ್ರಮುಖರು ಎಂ.ಜಿ.ರಸ್ತೆ, ಬಾಲಕರ ಕಾಲೇಜು ವೃತ್ತ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೆರೆದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಯದೇವ ಪ್ರಸನ್ನ, ಕೂಟೇರಿ ನಾಗರಾಜ್, ವಿಶ್ವನಾಥ್,  ಮುನಿಕೃಷ್ಣ, ಸಂತೋಷ್, ಕೃಷ್ಣವೇಣಿ, ಕಿಶೋರ್, ಉಮೇಶಗೌಡ, ನಾಗರಾಜ್, ಚಂದ್ರು ಭಾಗವಹಿಸಿದ್ದರು.
 

ದೀಪಾವಳಿ ಶುಭಾಶಯ: ಬೆಳಕಿನ ಹಬ್ಬವಾದ ದೀಪಾವಳಿ ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ ತರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್‌ಪ್ರಕಾಶ್, ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕರಾದ ವಿ.ಆರ್. ಸುದರ್ಶನ್, ಡಿ.ಎಸ್.ವೀರಯ್ಯ, ಜಿ.ಕೆ. ವೆಂಕಟಶಿವಾರೆಡ್ಡಿ, ಎಂ. ನಾರಾಯಣಸ್ವಾಮಿ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT