ADVERTISEMENT

ಸಾಂಕ್ರಾಮಿಕ ರೋಗ: ಮುನ್ನೆಚ್ಚರಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 7:30 IST
Last Updated 21 ಜುಲೈ 2012, 7:30 IST

ಕೋಲಾರ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರತ್ತ ಅಧಿಕಾರಿಗಳು ಗಮನಹರಿಸುವಂತೆ ಎಂದು  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಿ.ವಿ.ಹರೀಶ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ನೀರು ಪೂರೈಕೆ ಮಾಡುವ ಎಲ್ಲಾ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 71 ಡೆಂಗೆ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಕೋಲಾರ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಜಗದೀಶ್ ವಿವರಿಸಿದರು.

ಹಾವು ಕಡಿತದಿಂದ 24 ರೈತರು ಮೃತಪಟ್ಟಿದ್ದಾರೆ. ಇವರಲ್ಲಿ 11 ಪ್ರಕರಣಗಳಿಗೆ ಪರಿಹಾರ ಹಣ ಬಿಡುಗಡೆಯಾಗಿದೆ. ಉಳಿದ ಪ್ರಕರಣಗಳಿಗೆ ಅನುದಾನ ಬಿಡುಗಡೆಯಾದ ಕೂಡಲೇ ಪರಿಹಾರ ಧನ ವಿತರಿಸಬೇಕು ಎಂದರು.

ಪರಿಶೀಲನೆ: ಕೆಲವೆಡೆ ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ತಡೆಯೊಡ್ಡಲು
ಎಲ್ಲ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಂಥ ಪ್ರಕರಣಗಳು ಪತ್ತೆಯಾದಲ್ಲಿ ಪರವಾನಗಿ ಕೂಡಲೇ ರದ್ದು ಗೊಳಿಸಬೇಕು, ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಸೂಚಿಸಿದರು.

ಸ್ಥಾಯಿ ಸಮಿತಿ ಸದಸ್ಯರಾದ ಕಿಟ್ಟಪ್ಪ, ಬಿ.ವಿ.ಕೃಷ್ಣಪ್ಪ, ರತ್ನಮ್ಮ, ಅಲಮೇಲಮ್ಮ, ಉಪಕಾರ್ಯದರ್ಶಿ ಬದನೂರು, ಯೋಜನಾಧಿಕಾರಿ ವೆಂಕಟರಮಣಪ್ಪ, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.