ADVERTISEMENT

ಸಾಹಿತ್ಯ ಸಮ್ಮೇಳನದಲ್ಲಿ ಭೂಮಿ ಪ್ರೀತಿಯ ಪಾಠ!

ವಿಜ್ಞಾನ ಉಪನ್ಯಾಸಗಳ ಸೊಗಬು: ಕವಿ ಕಾವ್ಯ ಗಾಯನ, ನಾಟ್ಯದ ಮೆರುಗು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 7:16 IST
Last Updated 14 ಫೆಬ್ರುವರಿ 2014, 7:16 IST
ಸಮ್ಮೇಳನದಲ್ಲಿ‘ಕಾದ ಭೂಮಿ ಮತ್ತು ಕೋಲಾರ’ ಕುರಿತು ಲೇಖಕ ಡಾ.ನಾಗೇಶ ಹೆಗಡೆ ಉಪನ್ಯಾಸ ನೀಡಿದರು.
ಸಮ್ಮೇಳನದಲ್ಲಿ‘ಕಾದ ಭೂಮಿ ಮತ್ತು ಕೋಲಾರ’ ಕುರಿತು ಲೇಖಕ ಡಾ.ನಾಗೇಶ ಹೆಗಡೆ ಉಪನ್ಯಾಸ ನೀಡಿದರು.   

ಕೋಲಾರ (ಡಾ.ಸಿ.ಎನ್.ಆರ್‍.ರಾವ್‍ ವೇದಿಕೆ): ನೋಡಿ, ಪಾಪ ಭೂಮಿ ಹುಟ್ಟುವಾಗಿನಿಂದಲೂ ಸಂಕಟ ಅನುಭವಿಸುತ್ತಲೇ ಇದೆ. ಧೂಮಕೇತು­ಗಳು, ಅನ್ಯಗ್ರಹಗಳ ಕಾಟದಂಥ ತೊಂದರೆಗಳ ನಡುವೆ ಎಲ್ಲಿಯೂ ಜೀವ ಹುಟ್ಟಲು ಸಾಧ್ಯವೇ ಇರಲಿಲ್ಲ. ವಿಕಿರಣ ವಸ್ತುಗಳೇ ತುಂಬಿದ್ದವು. 450 ಕೋಟಿ ವರ್ಷದ ಹಿಂದೆ, ಅದನ್ನು ಸರಳವಾಗಿ 46 ವರ್ಷ ಎಂದುಕೊಳ್ಳೋಣ, 42 ವರ್ಷದ ಹಿಂದೆ ಮೊದಲನೇ ಹೂ ಅರಳಿತು...

–ಭೂಮಿಯ ಕತೆಯನ್ನು ಜನಪ್ರಿಯ ವಿಜ್ಞಾನ ಲೇಖಕ ಡಾ.ನಾಗೇಶ ಹೆಗಡೆ ಹೀಗೆ ಹೇಳುತ್ತಾ ಹೋದಂತೆ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಭರ್ತಿ ನೆರೆದಿದ್ದ, ನೆಲದ ಮೇಲೆ ಕುಳಿತಿದ್ದ ನೂರಾರು ಮಕ್ಕಳು ಸೇರಿದಂತೆ ಎಲ್ಲರೂ ಗದ್ದಕ್ಕೆ ಕೈಹಚ್ಚಿ ಮುಂದೇನು ಎನ್ನುವಂತಿದ್ದರು.

ಜಿಲ್ಲಾ ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ­ವಾದ ಗುರುವಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ವಿಜ್ಞಾನ ಮತ್ತು ಪ್ರಸ್ತುತತೆ ಕುರಿತ ಗೋಷ್ಠಿಯಲ್ಲಿ ‘ಕಾದ ಭೂಮಿ ಮತ್ತು ಕೋಲಾರ’ ಕುರಿತು ಉಪನ್ಯಾಸ ನೀಡಿದ ಅವರು, ಭೂಗೋಳ ಮತ್ತು ತಾಪಮಾನದಂಥ ಗಂಭೀರ­ವಾದ ವಿಜ್ಞಾನ ಸಂಬಂಧಿ ವಿಷಯವನ್ನು ಮೊನಚು ಹಾಸ್ಯ, ಸರಳ ಸಂವಾದ ರೂಪಿ ಭಾಷೆ ಮೂಲಕವೇ ಹೃದಯಕ್ಕೆ ಮುಟ್ಟುವ ರೀತಿ ವಿವರಿಸಿದರು.

ಅದು ಉಪನ್ಯಾಸವಾಗಿರಲಿಲ್ಲ. ಸಂವಾದ­ವಾಗಿತ್ತು. ಮನುಷ್ಯ ಸರ್ವಭಕ್ಷಕ ಪ್ರಾಣಿ ಎನ್ನುತ್ತಲೇ ಅವರು ಕಲ್ಲು, ಕಬ್ಬಿಣ, ಮರಳು ಗಣಿಗಾರಿಕೆ­ಯಿಂದ ಜೀವವೈವಿಧ್ಯದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ಸಭಿಕರ ಮುಂದಿಟ್ಟರು.

ಕೆ.ಎಸ್‍.ನಿಸಾರ್‍ ಅಹ್ಮದರ ನಿತ್ಯೋ­ತ್ಸವ ಕವಿತೆಯನ್ನು ಮಕ್ಕಳಿಂದ ಹೇಳಿಸು­ತ್ತಲೇ ತುಂಗೆಯ ತೆನೆ ಬಳಕಿನಲ್ಲಿ ಆಗುತ್ತಿರುವ ಭೂಮಿ ತಾಯಿಯ ಮೇಲಿನ ದೌರ್ಜನ್ಯವನ್ನು ಮನದಟ್ಟು ಮಾಡಿಸಿದ್ದು ವಿಶೇಷ ಗಮನ ಸೆಳೆಯಿತು.

ಕೋಲಾರ, ಸಿಡ್‍ನಿ ಮತ್ತು ಆಸ್ಟ್ರೇಲಿಯಾದ ಉಲ್ಲೇಖ ಮಾಡಿದ ಅವರು, ಆಸ್ಟ್ರೇಲಿಯಾಕ್ಕೆ ಹೊಂದಿಕೊಂಡಿದ್ದ ಕೋಲಾರದಂತೆಯೇ ಅಲ್ಲಿಯೂ ಚಿನ್ನದ ಗಣಿಗಳಿದ್ದವು. ಈಗ ಅದೇ ಆಸ್‍ಟ್ರೇಲಿಯಾದ ಮಂದಿ ಮತ್ತೆ ಕೆಜಿಎಫ್‍ ಗಣಿಗಳಲ್ಲಿ ಚಿನ್ನ ತೆಗೆಯಲು ಬರುತ್ತಿದ್ದಾರೆ ಎಂಬ ಸಂಪರ್ಕ ಕೊಂಡಿಯನ್ನು ಕಲ್ಪಿಸಿದರು.

ಭೂಮಿ ತಾಪಮಾನ ಹೆಚ್ಚಾದರೆ ಏನಾಗುತ್ತದೆ ಎಂಬುದನ್ನು ಸರಳವಾಗಿ ವಿವರಿಸುವ ಸಲುವಾಗಿಯೇ ಅವರು ಪ್ರದರ್ಶಿಸಿದ ಚಿತ್ರವೊಂದು ಸಭಿಕರನ್ನು ಗಾಂಭೀರ್ಯದ ನಡುವೆಯೂ ನಗೆ ಅಲೆ ಮೇಲೆ ತೇಲುವಂತೆ ಮಾಡಿತು. ಮೈಪೂರ್ತಿ ಬಟ್ಟೆ ಧರಿಸಿದ ವ್ಯಕ್ತಿಚಿತ್ರವೊಂದು ಕೊನೆಯಲ್ಲಿ ಲಂಗೋಟಿಯಂಥ ಒಂದು ತುಂಡನ್ನು ಮಾತ್ರ ಧರಿಸಿದ ಸನ್ನಿವೇಶ ತಾಪಮಾನ ಏರಿಕೆಯ ತೀವ್ರ ಪರಿಣಾಮದ ಕುರಿತು ಚಿಂತಿಸುವಂತೆ ಮಾಡಿತು.

ಕೋಲಾರದ ಜನ ತುಂಬಾ ಜಾಣರಿದ್ದರು. 25 ವರ್ಷದ ಹಿಂದೆ ಜಿಲ್ಲೆಯಲ್ಲಿ 30 ಸಾವಿರ ಕೆರೆಗಳಿದ್ದವು. ಈಗ ಕೇವಲ 2600 ಇವೆ. ನೀರೆಲ್ಲವೂ ತರಕಾರಿಗಳಾಗಿ ಬೆಂಗಳೂರು ಸೇರಿದೆ ಎಂದರು.

ನಾವು ಮಾಡುವ ಪ್ರತಿ ಕೆಲಸವೂ ಭೂಮಿ ತಾಪ ಹೆಚ್ಚಿಸುತ್ತದೆ. 20 ವರ್ಷದ ಬಳಿಕ ಮಕ್ಕಳಿಗೆ ಚಮಚದಲ್ಲಿ ನೀರು ಕೊಡುವ ಸನ್ನಿವೇಶ ನಿರ್ಮಾಣವಾಗಬಹುದು. ಇಂಥ ಭೂಮಿ ಕತೆಯನ್ನು ಎಲ್ಲರೂ ಪ್ರೀತಿ, ತಾಳ್ಮೆಗಳಿಂದ ಕೇಳಿಸಿಕೊಳ್ಳಲೇಬೇಕಿದೆ ಎಂದು ಅವರು ತಮ್ಮ ಉಪನ್ಯಾಸವನ್ನು ಪೂರ್ಣಗೊಳಿಸಿದರು.

ವಿಜ್ಞಾನದ ಸಾಮಾಜೀಕರಣ ಕುರಿತು ಪ್ರೊ.ಎಂ.ಆರ್.ನಾಗರಾಜರಾವ್ ಕನ್ನಡದಲ್ಲಿ ಖಗೋಳ ಸಾಹಿತ್ಯ ಅವಲೋಕನ ಕುರಿತು ಖಗೋಳ ವಿಜ್ಞಾನಿ ಡಾ.ಬಿ.ಎಸ್‌.ಶೈಲಜಾ ವಿಷಯ ಮಂಡಿಸಿದರು. ವಿಎಸ್‌ಎಸ್‌ ಶಾಸ್ತ್ರಿ ಮತ್ತು ರೋಹಿತ್ ಚಕ್ರವರ್ತಿ ಪ್ರಸ್ತಾವನೆ ಮತ್ತು ಪರಿಚಯ ಮಾಡಿದರು.  ಎಚ್.ಎ.ಪುರುಷೋತ್ತಮರಾವ್‌ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.