ADVERTISEMENT

ಸಿಮೆಂಟ್ ಕಾರ್ಖಾನೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:30 IST
Last Updated 21 ಸೆಪ್ಟೆಂಬರ್ 2011, 9:30 IST

ಗೌರಿಬಿದನೂರು: ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಬರುತ್ತಿರುವ ದೂಳಿ ನಿಂದ ಎಲ್ಲೆಡೆ ಮಾಲಿನ್ಯ ಹೆಚ್ಚಿದ್ದು, ಕೂಡಲೇ ಕಾರ್ಖಾನೆ ಮುಚ್ಚಬೇಕು ಇಲ್ಲವೆ ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವ ದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು, ಅಂಗನವಾಡಿ ಕಾರ್ಯಕರ್ತೆಯರು, ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಮಂಗಳವಾರ ತಾಲ್ಲೂಕಿನ ತೊಂಡೇ ಬಾವಿ ರೈಲು ನಿಲ್ದಾಣದ ಬಳಿಯಿರುವ ಕಾರ್ಖಾನೆ ಎದರು ಪ್ರತಿಭಟನೆ ನಡೆಸಿದರು.

ಸಿಐಟಿಯು ಮುಖಂಡ ಸಿದ್ದಗಂಪ್ಪ ಮಾತನಾಡಿ, `ಜನವಸತಿ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸಲಾಗಿದೆ.
ಸಿಮೆಂಟ್ ದೂಳಿನಿಂದ ಮಕ್ಕಳು ಸೇರಿದಂತೆ ಬಹುತೇಕ ಮಂದಿ ಅಸ್ವಸ್ಥರಾಗುತ್ತಿದ್ದಾರೆ. ಕಾರ್ಖಾನೆ ಸುತ್ತಮುತ್ತಲಿನ 8 ಕಿ.ಮೀ. ಪ್ರದೇಶದಲ್ಲಿ ಸಿಮೆಂಟ್ ದೂಳು ವ್ಯಾಪಿಸಿದ್ದು, ಭೂಮಿಯ ಫಲವತತ್ತೆಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಕೂಡಲೇ ಕಾರ್ಖಾನೆ ಮುಚ್ಚಬೇಕು ಇಲ್ಲ ಸ್ಥಳಾಂತರಿಸಬೇಕು~ ಎಂದು ಒತ್ತಾಯಿಸಿದರು.

ಮುಖಂಡ ನಾಚಕುಂಟೆ ಗೋಪಾಲ ಮಾತನಾಡಿ, `ಕಾರ್ಖಾನೆ ಪಕ್ಕದಲ್ಲೇ ಇರುವ ಸ್ವಾಮಿ ಶಿವಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದಾರೆ. ಗಿಡಮರಗಳು ಬಿಳಿ ಬಣ್ಣಕ್ಕೆ ಮಾರ್ಪಟ್ಟಿವೆ. ಸುತ್ತಮುತ್ತಲಿನ ಕಟ್ಟಡಗಳ ಮೇಲೆಲ್ಲ ಸಿಮೆಂಟ್ ಆವರಿಸಿಕೊಂಡಿದೆ. ಕಾರ್ಖಾನೆಯವರು ಎಲ್ಲರಿಗೂ ಹಣವನ್ನು ನೀಡಿ ಬಾಯಿ ಮುಚ್ಚಿಸುತ್ತಿದ್ದಾರೆ. ಕಾರ್ಖಾನೆ ವಿರುದ್ಧ ಮಾತನಾಡದಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.

ಸ್ಥಳೀಯ ಮುಖಂಡರಾದ ಸಾದಿಕ್, ಸರಸ್ವತಿ, ಪೋತೇನಹಳ್ಳಿ ವೆಂಕಟೇಶ್, ಸಿ.ಸಿ.ಅಶ್ವತ್ಥಪ್ಪ, ನಿಜಲಿಂಗಪ್ಪ, ದಬೀರ್, ಪ್ರಭಾಕರ್, ಎಬಿವಿಪಿಯ ವಿಜಯ್‌ಕುಮಾರ್, ಹರೀಶ್, ಮಂಜುನಾಥ್, ಸಂತೋಷರೆಡ್ಡಿ, ಶ್ಯಾಮ, ನರಸಿಂಹರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾ ಪರಿಸರ ಅಧಿಕಾರಿ ರೇಖಾ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಕಾರ್ಖಾನೆ ಆಡಳಿತ ಮಂಡಳಿ ಮತ್ತು ಸ್ಥಳೀಯರ ಸಭೆಯನ್ನು ಶೀಘ್ರವೇ ಕರೆದು ಸಮಸ್ಯೆ ಬಗೆಹರಿಸಲಾಗುವುದು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.