ಹಟ್ಟಿ ಚಿನ್ನದ ಗಣಿ: ಈ ಗಣಿ ಸ್ವಾತಂತ್ರ್ಯ ದಿನಾಚರಣೆಯ ಐದು ವಾರ ಮುಂಚಿತವಾಗಿ ಸ್ಥಾಪನೆ ಗೊಂಡಿದೆ. ಚಿನ್ನದ ಬೆಲೆ ಹೆಚ್ಚಿದೆ ಎಂದು ಎಲ್ಲೆ ಮೀರಿ ಖರ್ಚು ಮಾಡದೆ ಗಣಿಯ ಭವಿಷ್ಯಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು. ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪರಿಸರ ಸಂರಕ್ಷಿಸುವ ನಮ್ಮ ಜವಾಬ್ದಾರಿಯಾಗಿದೆ. ಹಟ್ಟಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಜೈವಿಕ ಇಂಧನ ಕೊಡುವ ಗಿಡಗಳನ್ನು ಬೆಳೆಸಿ ಪರಿಸರ ರಕ್ಷಣೆ ಮತ್ತು ಆರ್ಥಿಕ ಲಾಭ ಪಡೆದುಕೊಳ್ಳಬೇಕು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ ಸಲಹೆ ನೀಡಿದರು.
ಹಟ್ಟಿ ಚಿನ್ನದ ಗಣಿಯ 65ನೇ ವರ್ಷದ ಸ್ಥಾಪನಾ ದಿನ ಆಚರಣೆ ಅಂಗವಾಗಿ ಆಡಳಿತ ಹಾಗೂ ಕಾರ್ಮಿಕ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಂಪೆನಿಯ ವಿಭಾಗಗಳಲ್ಲಿ ಸಮನ್ವಯತೆ ಕೊರತೆಯಿದ್ದು, ಎಲ್ಲರೂ ಒಗ್ಗಟ್ಟಿನಿಂದ ಗಣಿ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.
ಗಣಿ ಅಭಿವೃದ್ಧಿಗಾಗಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟ ಕಾರ್ಮಿಕರನ್ನು ನೆನೆಪಿಸುವ ದಿನ ಇದಾಗಿದೆ. ಗಣಿಯು ಕಾರ್ಮಿಕ ಪ್ರಧಾನವಾಗಿರುವುದರಿಂದ ಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದುಮೊನ್ನಪ್ಪ ತಿಳಿಸಿದರು.
ಈಗಾಗಲೇ ಕಾರ್ಮಿಕ ಸಂಘ ಹಾಗೂ ಗಣಿ ಆಡಳಿತ ವೇತನ ಒಪ್ಪಂದಕ್ಕೆ ಸಹಿ ಹಾಕಿದ್ದು, ಸರ್ಕಾರ ಅನುಮೋದನೆ ಕೊಡುವುದೊಂದೇ ಬಾಕಿಯಿದೆ. ಕಾರ್ಮಿಕರಿಗೆ ಆದಷ್ಟು ಬೇಗ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
ಗಣಿ, ಅರಣ್ಯ ಇಲಾಖೆ ಹಾಗೂ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಇದ್ದರು. ರಾಘವ ಸ್ವಾಗತಿಸಿದರು. ನಿಂಗಪ್ಪ ನಿರೂಪಸಿದರು. ಅಮರೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.