ADVERTISEMENT

ಹಳಿ ತಪ್ಪಿದ ಪಾಠ ಪ್ರವಚನ

ಶಿಕ್ಷಕರ ಕೊರತೆ: ಜಿಲ್ಲೆಯ ಶಾಲೆಗಳಲ್ಲಿ ಪಾಲನೆಯಾಗದ ಮಾರ್ಗಸೂಚಿ

ಜೆ.ಆರ್.ಗಿರೀಶ್
Published 8 ಜೂನ್ 2017, 7:05 IST
Last Updated 8 ಜೂನ್ 2017, 7:05 IST
ಹಳಿ ತಪ್ಪಿದ ಪಾಠ ಪ್ರವಚನ
ಹಳಿ ತಪ್ಪಿದ ಪಾಠ ಪ್ರವಚನ   

ಕೋಲಾರ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 11 ದಿನಗಳು ಕಳೆದಿದ್ದು, ಜಿಲ್ಲೆಯಾದ್ಯಂತ ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯಾರಂಭ ಮಾಡಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 78.51 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನಕ್ಕೇರಿರುವ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಪಾಠ ಪ್ರವಚನ ಹಳಿ ತಪ್ಪಿದೆ.

ಜಿಲ್ಲೆಯಲ್ಲಿ ನೀರಿಗೆ ಬರವಿದ್ದರೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬರವಿಲ್ಲ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಿಲ್ಲೆಯ ಅಭ್ಯರ್ಥಿಗಳು ಅಪ್ರತಿಮ ಸಾಧನೆ ಮಾಡುತ್ತಾ ಬಂದಿದ್ದಾರೆ.

ಜಿಲ್ಲೆಯಲ್ಲಿ 1,204 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 629 ಹಿರಿಯ ಪ್ರಾಥಮಿಕ ಹಾಗೂ 124 ಪ್ರೌಢ ಶಾಲೆಗಳಿವೆ. ಒಟ್ಟಾರೆ ಆರು ಶೈಕ್ಷಣಿಕ ವಲಯಗಳಲ್ಲಿ 77,617 ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದೇ ರೀತಿ 27,455 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾರೆ.

ADVERTISEMENT

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 6,291 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 6,125 ಹುದ್ದೆಗಳು ಭರ್ತಿಯಾಗಿವೆ. 166 ಶಿಕ್ಷಕರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಅದೇ ರೀತಿ ಪ್ರೌಢ ಶಾಲೆಗಳಿಗೆ 1,294 ಶಿಕ್ಷಕರ ಹುದ್ದೆಗಳು ಮಂಜೂರಾ ಗಿದ್ದು, 1,040 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ 254 ಹುದ್ದೆಗಳು ಖಾಲಿ ಇವೆ.

ನಗರ ಮತ್ತು ಗ್ರಾಮಾಂತರ ಪ್ರದೇಶ ವೆಂಬ ಭೇದವಿಲ್ಲದೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕೆಂದು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರು ಹಲವು ವರ್ಷ ಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಮಾರ್ಗಸೂಚಿ ಏನು?: ಸರ್ಕಾರದ ಮಾರ್ಗಸೂಚಿ ಪ್ರಕಾರ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಪ್ರತಿ 10 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕ ರಿರಬೇಕು. 60 ವಿದ್ಯಾರ್ಥಿಗಳಿಗೆ ಇಬ್ಬರು, 90 ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿ ರಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿ ದಂತೆ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸ ಬೇಕು.

ಇನ್ನು ಪ್ರೌಢ ಶಾಲಾ ಹಂತದಲ್ಲಿ ಪ್ರತಿ ವಿಷಯಕ್ಕೆ ಒಬ್ಬರು ಶಿಕ್ಷಕರಿರಬೇಕು. ಪ್ರೌಢ ಶಾಲಾ ಹಂತದ ಯಾವುದೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 70ರ ಗಡಿ ದಾಟಿದರೆ ಆ ತರಗತಿಗೆ ಪ್ರತ್ಯೇಕ ಸೆಕ್ಷನ್‌ ತೆರೆದು ಶಿಕ್ಷಕರ ಸಂಖ್ಯೆ ಹೆಚ್ಚಿಸಬೇಕು. ಆದರೆ, ಜಿಲ್ಲೆಯ ಶಾಲೆ ಗಳಲ್ಲಿ ಈ ಮಾರ್ಗಸೂಚಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ.

ಕಾರ್ಯ ಒತ್ತಡ: ಶಿಕ್ಷಕರ ಕೊರತೆಯಿಂದ ಒಂದೆಡೆ ವಿದ್ಯಾರ್ಥಿಗಳಿಗೆ ತೊಂದರೆ ಯಾದರೆ ಮತ್ತೊಂದೆಡೆ ಹಾಲಿ ಶಿಕ್ಷಕ ರಿಗೂ ಸಮಸ್ಯೆಯಾಗುತ್ತಿದೆ.
ಶಿಕ್ಷಕರ ಹುದ್ದೆಗಳು ಖಾಲಿ ಇರುವ ಶಾಲೆಗಳಲ್ಲಿ ಹಾಲಿ ಶಿಕ್ಷಕರೇ ಹೆಚ್ಚಿನ ತರಗತಿಗಳಿಗೆ ಪಠ್ಯ ಬೋಧಿಸುವಂತಾಗಿದೆ. ಮತ್ತೆ ಕೆಲವೆಡೆ ಅಕ್ಕಪಕ್ಕದ ಗ್ರಾಮಗಳ ಶಾಲೆ ಗಳಿಗೆ ವಾರದಲ್ಲಿ ಮೂರ್ನಾಲ್ಕು ದಿನ ತಾತ್ಕಾಲಿಕ ನಿಯೋಜನೆ ಮೇಲೆ ಹೋಗಿ ಪಾಠ ಮಾಡುವಂತಾಗಿದೆ. ಇದರಿಂದ ಹಾಲಿ ಶಿಕ್ಷಕರ ಮೇಲೆ  ಒತ್ತಡ ಹೆಚ್ಚಿದೆ. ಶಿಕ್ಷಕರ ಕೊರತೆಯಿಂದ ಪಾಠ ಪ್ರವಚನ ಸರಿಯಾಗಿ ನಡೆಯದೆ ಪೋಷಕರು  ಆತಂಕಗೊಂಡಿದ್ದಾರೆ.

**

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರನ್ನು ನೇಮಿಸಿ ಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಜುಲೈ ಅಂತ್ಯದೊಳಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ

-ಕೆ.ಜಿ.ರಂಗಯ್ಯ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.