ADVERTISEMENT

ಹಸಿರು ಕಾಮಾಲೆಗೆ ಹಸಿರೇ ಮದ್ದು

ಮಂಡಿಕಲ್ ಪುರುಷೋತ್ತಮ
Published 7 ಅಕ್ಟೋಬರ್ 2012, 7:35 IST
Last Updated 7 ಅಕ್ಟೋಬರ್ 2012, 7:35 IST

ಹೊಸ ವೈದ್ಯರಿಗಿಂತ ಹಳೇ ರೋಗಿಯೇ ಮೇಲು ಎಂಬ ಮಾತಿಗೆ ಉತ್ತಮ ನಿದರ್ಶನದಂತಿದ್ದಾರೆ ಮುಳಬಾಗಲು ತಾಲ್ಲೂಕಿನ ಸೊನ್ನವಾಡಿ ಗ್ರಾಮದ ಎನ್.ಗಂಗಿರೆಡ್ಡಿ.  65 ವಸಂತ ಕಂಡಿರುವ ರೆಡ್ಡಿ ಹಳೇರೋಗಿಯೂ ಹೌದು, ನಾಟಿ ವೈದ್ಯರೂ ಹೌದು.

ತಮ್ಮಇಪ್ಪತೈದನೇ ವಯಸ್ಸಿನಲ್ಲಿಹಳದಿ ಕಾಮಾಲೆ ರೋಗ ಅವರನ್ನು ಬಹುವಾಗಿ ಪೀಡಿಸಿತ್ತು. ಕಣ್ಣು,ಮೈ, ಎಲ್ಲ ಹಸಿರುಮಯವಾಗಿತ್ತು. ಕಾಯಿಲೆ ಏಕೆ ಬಂದಿದೆ ಎಂಬ ಅರಿವು ಸಹ ಆ ದಿವಸಗಳಲ್ಲಿ ಇರಲಿಲ್ಲ.  ನೆರೆಯ ಆಂಧ್ರಪ್ರದೇಶದ ಪುಂಗನೂರು ಬಳಿಯ ವೆಂಕಟಾಪುರ ಗ್ರಾಮದ ಬಳಿ ಅವರ ಸೋದರ ಸಂಬಂಧಿಯೊಬ್ಬರು ಹಸಿರು ಕಾಮಾಲೆಗೆ ಔಷಧಿ ನೀಡುವರು ಎಂದು ತಿಳಿದ ಅವರು ಅಲ್ಲಿಗೆ ಹೋಗಿ ಕಾಯಿಲೆಯನ್ನು ವಾಸಿಮಾಡಿಕೊಂಡಿದ್ದೇ ಅವರು ನಾಟಿ ವೈದ್ಯರಾಗಲು ದಾರಿಯಾಯಿತು.

ನಂತರ ಅದೇ ಸಂಬಂಧಿಯಿಂದ ಮೂಲಿಕೆಗಳ ರಹಸ್ಯವನ್ನು ತಿಳಿದುಕೊಂಡು ಅವರಿಂದ ಪಡೆದ ವಿದ್ಯೆಯನ್ನು ಹಣದ ಆಸೆಯಿಲ್ಲದೆ ಔಷಧಿ ನೀಡತೊಡಗಿದರು. ಅದು ಪೂರ್ಣ ಉಚಿತ. ಯಾವುದೇ ಪ್ರಚಾರವಿಲ್ಲದೇ ಎಲೆ ಮರೆಯ ಕಾಯಾಗಿ ಸೇವೆ ಮಾಡುತ್ತಿರುವ ಗಂಗಿರೆಡ್ಡಿ ಕೊಡುವ ಔಷಧದಿಂದ ಈಗಾಗಲೇ ಒಂದು ಸಾವಿರಕ್ಕೂ ಮೇಲ್ಮಟ್ಟು ರೋಗಿಗಳಿಗೆ ಕಾಯಿಲೆ ವಾಸಿಯಾಗಿದೆ. ವೈಯುಕ್ತಿಕ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿರುವ ಗಂಗಿರೆಡ್ಡಿ ತಾವು ಕಲಿತ ವೈದ್ಯವನ್ನು ಹಣಕ್ಕಾಗಿ ಪಣವಿಟ್ಟಿಲ್ಲ ಎಂಬುದು ವಿಶೇಷ.

ಹಸಿರು ಕಾಮಾಲೆಯುಳ್ಳ ದೊಡ್ಡವರಿಗೆ 5 ದಿವಸ ಮತ್ತು ಚಿಕ್ಕವರಿಗೆ ಮೂರು ದಿವಸ ಮೂಲಿಕೆಗಳ ವೈದ್ಯ ನೀಡುತ್ತಾರೆ. ಈ ದಿವಸಗಳಲ್ಲಿ ಕಠಿಣವಾದ ಉಪವಾಸವಿರಬೇಕಾಗುತ್ತದೆ.

ಔಷಧಿಯಾಗಿ ನೀಡುವ ಹಲವಾರು ಮೂಲಿಕೆಗಳು ಎಲ್ಲ ಕಡೆ ವಿಪುಲವಾಗಿ ದೊರೆತರೂ ಆ ಮೂಲಿಕೆಗಳ ಹೆಸರು ಮಾತ್ರ ಅವರಿಗೆ ತಿಳಿದಿಲ್ಲ. ಆದರೆ ಸ್ಪಷ್ಟವಾಗಿ ಗುರುತಿಸುವ ಸಾಮರ್ಥ್ಯವಿದೆ. ಅವುಗಳಿಂದ ರಸ ತಯಾರಿಸಿ ಔಷಧಿ ತಯಾರಿಸುತ್ತಾರೆ.  ಈ ವಿಶೇಷವಾದ ಗಿಡಮೂಲಿಕೆಗಳ ಔಷಧಿಯಿಂದಲೇ ಹಲವಾರು ಮಂದಿಯ ಕಾಮಾಲೆ ರೋಗವನ್ನು ಗುಣಪಡಿಸಲು ಸಾಧ್ಯವಾಗಿದೆ. ಗುಣಮುಖರಾದವರಿಂದ ರೆಡ್ಡಿ ಹಣ ಪಡೆಯುವುದಿಲ್ಲ.

ಯಾರಾದರೂ ಹಣ ಕೊಟ್ಟರೆ ಹುಂಡಿಯೊಂದನ್ನು ಇಟ್ಟು ಅದನ್ನು ಇಷ್ಟದ ದೇವರಿಗೆ ಮೀಸಲು ಕೊಡುತ್ತಾರೆ.
ವೈಯಕ್ತಿಕ ಜೀವನದಲ್ಲಿ ಬಡತನ, ಕಷ್ಟಕೋಟಲೆಗಳು ತಮ್ಮನ್ನು ಬಾಧಿಸುತ್ತಿದ್ದರೂ, ಎಲೆಮರೆಯ ಕಾಯಿಯಂತೆ ಕಾಮಾಲೆ ರೋಗಕ್ಕೆ ಔಷಧಿ ನೀಡುವ ಕಾಯಕದಲ್ಲಿ ರೆಡ್ಡಿ ಸಂತೃಪ್ತಿ  ಪಡೆದಿದ್ದಾರೆ.

ಸುಮಾರು ಮೂರು ಎಕರೆ ಜಮೀನು ಹೊಂದಿರುವ ಈ ರೈತ ವೈದ್ಯ ಇಂದಿಗೂ ಕಷ್ಟಪಟ್ಟು ಹೊಲದಲ್ಲಿ ವ್ಯವಸಾಯ ಮಾಡುತ್ತಾರೆ. ನಾಲ್ಕೈದು ಬಾರಿ ಕೊಳವೆಬಾವಿ ಕೊರೆಸಿ ನೀರು ಸಿಗದೆ ಸಾಲಸಂಕಷ್ಟಗಳಿಗೆ ಸಿಲುಕಿದ್ದರು. ಆದರೆ ಇರುವುದರಲ್ಲಿಯೇ ಕಷ್ಟಪಟ್ಟು ದುಡಿಮೆ ಮಾಡುವುದನ್ನು ರೂಢಿಸಿಕೊಂಡವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.