ADVERTISEMENT

ಹುಣಸೆ ಬೆಳೆಗಾರರಿಗೆ ಬಂತು ಉಳಿಗಾಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 5:16 IST
Last Updated 12 ಮಾರ್ಚ್ 2014, 5:16 IST

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹುಣಸೆ­ಕಾಯಿ ಹೊಟ್ಟು ತೆಗೆಯುವ ಕೆಲಸ ಆರಂಭವಾಗಿದೆ. ಹುಣಸೆ ಬೆಳೆಗಾರು ಮತ್ತು ವ್ಯಾಪಾರಿ­ಗಳು ಮರದಿಂದ ಉದುರಿಸಿದ ಕಾಯಿ­ಯನ್ನು ಕಣದಲ್ಲಿ ರಾಶಿ ಹಾಕಿದ್ದಾರೆ. ಸಣ್ಣ ಪ್ರಮಾಣದಲ್ಲಿ ಕಾಯಿ ಹೊಂದಿ­ರುವ ರೈತರು ತಮ್ಮ ಮನೆ ಮುಂದೆಯೇ ಹೊಟ್ಟು ಬಿಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಹುಣಸೆ ಕಾಯಿ ಬೆಲೆ­ಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಸುಗ್ಗಿ ಆರಂಭದಲ್ಲಿ ಒಂದು ಕೆ.ಜಿ. ಹೊಟ್ಟು ತೆಗೆದ ಕಾಯಿ ಬೆಲೆ ₨ 20 ಇತ್ತು. ಈಗ ₨ 30 ರಿಂದ 34 ರಂತೆ ಮಾರಾಟವಾಗುತ್ತಿದೆ. ಇದು ಬೆಳೆಗಾರ­ರಿಗೆ ನೆಮ್ಮದಿ ತಂದಿದೆ. ಹುಣಸೆ ಹಣ್ಣು ಮಂಡಿಗಳಲ್ಲಿ ಹಣ್ಣು ಮಾಡುವ ಕೆಲಸ ನಡೆಯುತ್ತಿದೆ. ಹಿಂದೆ ಗ್ರಾಮೀಣ ಪ್ರದೇಶ­ದಲ್ಲಿ ಬೆಳೆಗಾರರು ತಾವು ಬೆಳೆದ ಹುಣಸೆ ಕಾಯಿಗೆ ಹೊಟ್ಟು ತೆಗೆದು ಹಣ್ಣು ಮಾಡಿ ಮಾರುತ್ತಿದ್ದರು. ಆದರೆ ಈಗ ಕೃಷಿ ಕಾರ್ಮಿಕರ ಕೊರತೆ­ಯಿಂದಾಗಿ ಹಣ್ಣು ಮಾಡಿಸುವ ಬದಲು ಹೊಟ್ಟು ತೆಗೆದ ಕಾಯಿ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಹಿಂದೆ ಹುಣಸೆ ಕಾಯಿ ಎಂದರೆ, ಹಣ್ಣಿಗೆ ಮಾತ್ರ ಮೀಸಲಾಗಿತ್ತು. ಈಗ ಹುಣಸೆ ಉಪ ಉತ್ಪನ್ನಗಳಿಗೂ ಬೇಡಿಕೆ ಬಂದಿದೆ. ಕಾಯಿ ಕಣಕ್ಕೆ ಹಾಕಿ ಕೋಲಿನಿಂದ ಬಿಡಿಸುವ ಹೊಟ್ಟನ್ನು ರೇಷ್ಮೆ ದಾರ ತೆಗೆಯುವ ಕಾರ್ಖಾನೆಯಲ್ಲಿ ಒಲೆಗೆ ಹಾಕಿ ಉರಿಸುತ್ತಾರೆ. ಇಟ್ಟಿಗೆ ಸುಡಲು ಬಳಸುತ್ತಾರೆ. ನೀರಿನ ಒಲೆಗೆ ಉರುವಲಾಗಿ ಬಳಸಲಾಗುತ್ತಿದೆ. ಇದ­ರಿಂದ ವ್ಯಾಪಾರಿಗಳು ಹಳ್ಳಿಗಳಿಗೆ ಬಂದು ಹೊಟ್ಟು ಖರೀದಿಸಿ ಕೊಂಡೊಯ್ಯು­ತ್ತಾರೆ. ಹಿಂದೆ ಈ ಹೊಟ್ಟನ್ನು ತಿಪ್ಪೆಗೆ ಹಾಕುತ್ತಿದ್ದರು. ಈಗ ಅದಕ್ಕೂ ಆರ್ಥಿಕ ಮೌಲ್ಯ ಬಂದಿದೆ. ಹಣ್ಣು ಮಾಡುವ ಮುನ್ನ ಬಿಡಿಸುವ ನಾರಿಗೂ ಬೇಡಿಕೆ ಇದೆ.

ಹುಣಸೆ ಬೀಜಕ್ಕೆ ಮೊದಲಿನಿಂದಲೂ ಬೇಡಿಕೆ ಇದೆ. ಬೀಜ ಹುರಿದು ನೆನೆಸಿ ಹಂದಿಗಳಿಗೆ ಆಹಾರವಾಗಿ ನೀಡಲಾಗು­ತ್ತದೆ. ಹುಣಸೆ ಬೀಜದ ಪುಡಿಯನ್ನು ಅಂಟಿನಂತೆ ಬಳಸಲಾಗುತ್ತದೆ. ಮೊರ, ಹೆಡಿಗೆ ಮುಂತಾದ ಬಿದಿರು ಉತ್ಪನ್ನಗಳ ಸಂದಿ ಮುಚ್ಚಲು ಹುಣಸೆ ಪುಡಿ ಅಂಟು ಬಳಸಲಾಗುತ್ತದೆ. ಬೀಜಕ್ಕೆ ಬೇಡಿಕೆ ಇರುವುದರಿಂದ ವ್ಯಾಪಾರಿಗಳು ಮಂಡಿ ಹಾಗೂ ಹಳ್ಳಿಗಳಲ್ಲಿ ಸಂಚರಿಸಿ ಖರೀದಿ­ಸುತ್ತಿದ್ದಾರೆ.

ಹುಣಸೆ ಕಾಯಿ ಸಂಸ್ಕರಣೆ ಸುಲಭ­ವಲ್ಲ. ಒಳ್ಳೆ ವಾತಾವರಣ ಇರಬೇಕು. ಕಾಯಿ ಒಣಗಲು ಬಿಸಿಲು ಬೇಕು. ಒಣಗಿದ ಕಾಯಿ ಎತ್ತಿ ನೆರಳಿಗೆ ಹಾಕಿ ಆರಲು ಬಿಡಬೇಕು. ಆರಿದ ಮೇಲೆ ಸಣ್ಣ ಕೋಲಿನಿಂದ ಬಡಿದು ಹೊಟ್ಟು ಬಿಡಿಸ­ಬೇಕು. ಒಟ್ಟಾರೆ ಹೊಟ್ಟು ಹಣ್ಣಿಗೆ ಅಂಟ­ದಂತೆ ಎಚ್ಚರ ವಹಿಸಬೇಕು. ಮೋಡ ಮುಸುಕಿದ ವಾತಾವರಣ ಇದ್ದಲ್ಲಿ ಹುಣಸೆ ಸಂಸ್ಕರಣೆ ಕಷ್ಟ.

ತಾಲ್ಲೂಕಿನಲ್ಲಿ ಹುಣಸೆ, ಕೃಷಿ ಕಾರ್ಮಿಕರಿಗೆ ಕನಿಷ್ಠ ಎರಡು ತಿಂಗಳು ಕೆಲಸ ಒದಗಿಸುತ್ತದೆ. ಕಾಯಿ ಉದುರಿ­ಸುವುದರಿಂದ ಹಿಡಿದ ಹಣ್ಣು ಮಾಡಿ ಮಂಡಿಯಲ್ಲಿ ತುಳಿಯುವವರೆಗೆ ನೂರಾರು ಜನ ದುಡಿದು ಕೂಲಿ ಗಿಟ್ಟಿಸಿ­ಕೊಳ್ಳುತ್ತಾರೆ. ವಿಶೇಷವಾಗಿ ಮಹಿಳೆ­ಯರು ಹಣ್ಣು ಮಾಡುವ ಕೆಲಸದಲ್ಲಿ ತೊಡಗುತ್ತಾರೆ. ಕೊಯಿಲು ಮಾಡಿದ ಮರಗಳಲ್ಲಿ ಕಣ್ತಪ್ಪಿ ಉಳಿದ ಕಾಯಿ ಅರಗಿಲಿ ಆಯುವವರ ಪಾಲಾಗುತ್ತದೆ. ಬಿಟ್ಟ ಫಸಲನ್ನು ಬಿಡದೆ ಸಂಗ್ರಹಿಸಿ, ಸಂಸ್ಕರಿಸಿ ಮಾರಿ ನಾಲ್ಕು ಕಾಸು ಸಂಪಾದಿಸುವ ಮಂದಿಯೂ ಇದ್ದಾರೆ. ಇವರು ಉದ್ದವಾದ ಶಿವೆ, ದೋಟಿ ಸಹಾಯದಿಂದ ಬಿಟ್ಟ ಫಸಲನ್ನು ಕೊಯ್ಯು­ತ್ತಾರೆ. ಕೆಲವು ಸಲ ಮರ ಹತ್ತಿ ಉದುರಿಸಿ ಆಯುತ್ತಾರೆ.

ತಾಲ್ಲೂಕಿನ ಕೃಷಿಕರಿಗೆ ಮಾವಿನಂತೆ ಹುಣಸೆಯೂ ಆರ್ಥಿಕ ಬೆಳೆ. ಹುಣಸೆ ಮರ ತೆಗೆದು ಜಮೀನು ಕೃಷಿಗೆ ಬಳಸಿದ ಪರಿಣಾಮವಾಗಿ ಮರಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಬಿಡಿಬಿಡಿ­-ಯಾಗಿ ಬೆಳೆಸಿರುವ ಮರಗಳು, ಉಳಿ­ದಿರುವ ತೋಟಗಳಲ್ಲಿ ಭಾರಿ ಗಾತ್ರದ ಮರಗಳಿವೆ. ಬೇರೆ ಬೇರೆ ಕಾರಣ­ಗಳಿಂದ ಮರಕ್ಕೆ ಕೊಡಲಿ ಹಾಕಿದ ರೈತರು, ಹುಣಸೆ ಹಣ್ಣು ಬೆಲೆ ನೋಡಿ ಬಾಯಲ್ಲಿ ನೀರೂರಿಸಿಕೊಂಡು ಪರಿತಪಿ­ಸುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.