ADVERTISEMENT

ಹೆಬ್ಬಟದ್ಲ್ಲಲಿ ಕೊಳೆತು ನಾರುತ್ತಿರುವ ಕುಂಟೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 9:35 IST
Last Updated 10 ಅಕ್ಟೋಬರ್ 2011, 9:35 IST

ಶ್ರೀನಿವಾಸಪುರ: ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಜನ ವಸತಿಗಳ ಮಧ್ಯೆ ಕುಂಟೆಯೊಂದು ಕೊಳೆತು ನಾರುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.

ಹಿಂದೆ ಈ ಕುಂಟೆಯನ್ನು ಕುಡಿಯುವ ನೀರಿಗಾಗಿ ಬಳಸುತ್ತಿದ್ದರು. ಬಾವಿ ಸಂಸ್ಕೃತಿ ಬಂದ ಮೇಲೆ ಕುಂಟೆಯನ್ನು ಜಾನುವಾರು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಯಿತು. ಕೊಳವೆ ಬಾವಿ ಸಂಸ್ಕೃತಿಯೊಂದಿಗೆ ಕುಂಟೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಪಾಚಿ, ಸೆಣಬು ಮತ್ತಿತರ ನೀರು ಕಳೆ ಸಸ್ಯಗಳು ಬೆಳೆದು ನಿಂತ ಪರಿಣಾಮವಾಗಿ ಕುಂಟೆ ಬಳಕೆಯಿಂದ ದೂರ ಉಳಿಯಿತು ಎಂದು ಗ್ರಾಮಸ್ಥರು ಹೇಳುತ್ತಾರೆ.

ಕುಂಟೆಯ ಸುತ್ತಲೂ ಮನೆಗಳಿವೆ. ಊರಿನ ಜನ ಸತ್ತ ಕೋಳಿ, ನಾಯಿ, ಜಾನುವಾರುಗಳು ಕರು ಹಾಕುವಾಗ ಬೀಳುವ ಕಸವನ್ನು ತಂದು ಕುಂಟೆಗೆ ಎಸೆಯುತ್ತಾರೆ. ಇದರಿಂದ ನೀರು ಕೊಳೆತು ದುರ್ವಾಸನೆ ಬರುತ್ತದೆ. ಕುಂಟೆಯಲ್ಲಿ ವೃದ್ಧಿಯಾಗುವ ಸೊಳ್ಳೆಗಳು ಇಡೀ ಹಳ್ಳಿಯಲ್ಲಿ ಹರಡಿಕೊಂಡಿವೆ. ಇದರಿಂದ ಸೊಳ್ಳೆಯಿಂದ ರೋಗಗಳು ಹರಡುವ ಸಾಧ್ಯತೆ ಇದೆ.

 ನಾಗರಿಕ ಆರೋಗ್ಯಕ್ಕೆ ಮಾರಕವಾಗಿರುವ ಕುಂಟೆಯನ್ನು ಸಂಬಂಧಪಟ್ಟ ಇಲಾಖೆ ಮುಚ್ಚಬೇಕು. ಅಥವಾ ಕುಂಟೆಯಲ್ಲಿನ ಹೂಳು ತೆಗೆದು, ಮಕ್ಕಳು ಮರಿ ಬೀಳದಂತೆ  ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಜಲ ಮಾಲೀನ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂಬುದು ನಾಗರಿಕರ ಮನವಿ.

ಇಂದು ಶಿವರಾಮಕಾರಂತ ಜಯಂತಿ
ಮಾಲೂರು: ಸಾಹಿತಿ ಡಾ.ಶಿವರಾಮ ಕಾರಂತರ 109ನೇ ಜಯಂತಿ ಸಮಾರಂಭವನ್ನು ಅ. 10ರಂದು ತಾಲ್ಲೂಕಿನ ಹುರಳಗೇರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕಸಾಪ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಪ್ರಾಂಶುಪಾಲ ಜಗದೀಶ್, ಜಿ.ಪಂ. ಸದಸ್ಯ ಯಲ್ಲಮ್ಮ, ನೊಸಗೆರೆ ಗ್ರಾ.ಪಂ. ಅಧ್ಯಕ್ಷ ಕುಮಾರ್, ತಾ.ಪಂ. ಸದಸ್ಯ ಪುಟ್ಟಸ್ವಾಮಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.