ADVERTISEMENT

ಹೊರ ಸಂಚಾರ: ಮಕ್ಕಳ ಮನಸ್ಸು ಮುದ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:51 IST
Last Updated 11 ಡಿಸೆಂಬರ್ 2012, 10:51 IST

ಶ್ರೀನಿವಾಸಪುರ: ಹೊರ ಸಂಚಾರದಿಂದ ಮಕ್ಕಳ ಮನಸ್ಸು ಮುದಗೊಳ್ಳುತ್ತದೆ. ನಿಸರ್ಗ ಪ್ರೇಮ ಮೂಡುತ್ತದೆ. ಅದು ಕಲಿಕೆಗೆ ಪ್ರೇರಣೆ ಕೊಡುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಿಕ್ಷಣ ಸಂಯೋಜಕ ಪ್ರದೀಪ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಹೊರ ಸಂಚಾರ ಕಾರ್ಯಕ್ರಮದಡಿ ಕೊಳ್ಳೂರು ಕಾಡಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಕರು ಕನಿಷ್ಠ ತಿಂಗಳಿಗೊಮ್ಮೆ ಹೊರ ಸಂಚಾರ ಹಮ್ಮಿಕೊಂಡು ಮಕ್ಕಳ ಸಹಜ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಪಠ್ಯ ವಿಷಯ, ಹೋಂ ವರ್ಕ್ ಏಕತಾನತೆಯಿಂದ ಭಿನ್ನವಾದ ಅನುಭವ ಮಕ್ಕಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಲೆ ಮುಖ್ಯ ಶಿಕ್ಷಕಿ ಮುನಿರತ್ನಮ್ಮ ಮಾತನಾಡಿ, ನಿಸರ್ಗದ ನಡುವೆ ಮಕ್ಕಳು ಲವಲವಿಕೆಯಿಂದ ಕಲಿಯುತ್ತಾರೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ವನಭೋಜನ ಸಂಸ್ಕೃತಿ ಇತ್ತು. ಮನೆ ಮಂದಿ ಪಕ್ಕದ ಕಾಡಿಗೆ ಹೋಗಿ ಊಟ ಮಾಡಿ ಬರುತ್ತಿದ್ದರು. ಆದರೆ ಅದು ನಿಂತಿದೆ. ಅದರ ಮುಂದುವರೆದ ಭಾಗವಾಗಿ ಶಾಲೆಗಳಲ್ಲಿ ಹೊರ ಸಂಚಾರ ನಡೆಯುತ್ತಿದೆ. ಇದು ಪೂರ್ಣವಾಗಿ ಶೈಕ್ಷಣಿಕ ಉದ್ದೇಶ ಒಳಗೊಂಡಿದೆ ಎಂದು ಹೇಳಿದರು.

ಶಿಕ್ಷಕಿಯರಾದ ವಿಜಯಕುಮಾರಿ, ಪ್ರಮೀಳಾ, ಲಕ್ಷ್ಮಿದೇವಮ್ಮ, ಸುಶೀಲಮ್ಮ, ಶಾಂತಮ್ಮ, ಶ್ರೀಧರ್, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಾಡಿನ ಪರಿಚಯವಿದ್ದರೂ ಪಟ್ಟಣದ ಸ್ನೇಹಿತರ ಜತೆ ಕಾಡಿನಲ್ಲಿ ಸಂಚರಿಸಿ ವಿವಿಧ ಗಿಡ ಮರಗಳ ಪರಿಚಯ ಮಾಡಿಕೊಂಡರು. ವಿವಿಧ ಪಕ್ಷಿಗಳು, ಬಣ್ಣದ ಚಿಟ್ಟೆಗಳು, ಹೂಗಳು, ಹುತ್ತಗಳು, ಗೆದ್ದಲು ಹೀಗೆ ಎಲ್ಲವನ್ನೂ ವೀಕ್ಷಿಸಿದರು. ಮಧ್ಯಾಹ್ನದ ಹೊತ್ತಿಗೆ ಕಾಡಿನ ಮಧ್ಯೆ ಊಟ ಮಾಡಿದರು. ವಿವಿಧ ಆಟ ಆಡಿದರು. ಸಂಜೆ ಹೊತ್ತಿಗೆ ಮನೆ ಕಡೆ ಹೆಜ್ಜೆ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.