ADVERTISEMENT

₹ 11 ಕೋಟಿ ಆಸ್ತಿ ತೆರಿಗೆ ವಂಚಿಸಿದ ಆರ್‌.ಎಲ್‌.ಜಾಲಪ್ಪ

ದೇವರಾಜ ಅರಸು ಶಿಕ್ಷಣ ಸಂಸ್ಥೆಗೆ ನಗರಸಭೆಯ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:46 IST
Last Updated 11 ಅಕ್ಟೋಬರ್ 2019, 19:46 IST
ಕೋಲಾರ ಹೊರವಲಯದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಒಡೆತನದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಹೊರ ನೋಟ.
ಕೋಲಾರ ಹೊರವಲಯದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಒಡೆತನದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಹೊರ ನೋಟ.   

ಕೋಲಾರ: ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪರ ಒಡೆತನದ ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದ ಬೆನ್ನಲ್ಲೇ ಜಾಲಪ್ಪ ಅವರು ನಗರಸಭೆಗೆ ಸುಮಾರು ₹ 11 ಕೋಟಿಯಷ್ಟು ಆಸ್ತಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಜಾಲಪ್ಪ ಅವರಿಗೆ ಸೇರಿದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ, ವೈದ್ಯಕೀಯ ಕಾಲೇಜು, ಆಸ್ಪತ್ರೆ, ಶಿಕ್ಷಣ ಸಂಸ್ಥೆ ಮತ್ತು ಅತಿಥಿಗೃಹದ ಕಟ್ಟಡಗಳು ನಗರಸಭೆಯ 1ನೇ ವಾರ್ಡ್‌ ವ್ಯಾಪ್ತಿಯಲ್ಲಿವೆ. ಈ ಕಟ್ಟಡಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಾನುಸಾರ 2002ರಿಂದ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸಿಲ್ಲ.

ಈ ಸಂಬಂಧ ನಗರಸಭೆ ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ಅವರು ತೆರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ನಗರಸಭೆಯ ಹಿಂದಿನ ಆಯುಕ್ತ ಸತ್ಯನಾರಾಯಣ (ಇತ್ತೀಚೆಗೆ ವರ್ಗಾವಣೆಯಾಗಿದ್ದಾರೆ) ಫೆಬ್ರುವರಿಯಿಂದ ಮೇ ತಿಂಗಳ ಅಂತ್ಯದವರೆಗೆ 3 ಬಾರಿ ದೇವರಾಜ ಅರಸು ಶಿಕ್ಷಣ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿದ್ದರು.

ADVERTISEMENT

ವಾಸ್ತವದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯು 2002ರಿಂದ 2019ರ ಜೂನ್‌ವರೆಗೆ ₹ 12.75 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕು. ಆದರೆ, ಸಂಸ್ಥೆ ಆಡಳಿತ ಮಂಡಳಿಯು ನಿಗದಿತ ಮೊತ್ತಕ್ಕಿಂತ ಕಡಿಮೆ ಆಸ್ತಿ ತೆರಿಗೆ ಘೋಷಿಸಿಕೊಂಡು ₹ 1.72 ಕೋಟಿ ಪಾವತಿಸಿದೆ. ಇದು ಕಾನೂನುಬಾಹಿರವಾಗಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಮಾನದಂಡದಂತೆ ಬಾಕಿ ಉಳಿಸಿಕೊಂಡಿರುವ ₹ 11.02 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಬೇಕು ಎಂದು ಹಿಂದಿನ ಆಯುಕ್ತರು ನೋಟಿಸ್‌ನಲ್ಲಿ ತಿಳಿಸಿದ್ದರು.

ಅಲ್ಲದೇ, ನೋಟಿಸ್‌ ತಲುಪಿದ 30 ದಿನದೊಳಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು. ಇಲ್ಲದಿದ್ದರೆ ಕರ್ನಾಟಕ ಪುರಸಭೆ ನಿಯಮ 1964ರ ಕಲಂ 105(6)ರ ಅನ್ವಯ ಶಿಸ್ತುಕ್ರಮ ಜರುಗಿಸುವುದಾಗಿ ಆಯುಕ್ತರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಆದರೂ ದೇವರಾಜ ಅರಸು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯು ಬಾಕಿ ಆಸ್ತಿ ತೆರಿಗೆ ಪಾವತಿಸಿಲ್ಲ.

ಪ್ರವೇಶಾತಿಯಲ್ಲಿ ಅಕ್ರಮ?: ಜಾಲಪ್ಪರ ವೈದ್ಯಕೀಯ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆ ಆಗಸ್ಟ್‌ನಲ್ಲಿ ನಡೆದಿತ್ತು. ವೈದ್ಯಕೀಯ ಕೋರ್ಸ್‌ನ ಪ್ರವೇಶಾತಿಗಾಗಿ ದೇಶದೆಲ್ಲೆಡೆ ನಡೆದಿದ್ದ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಹೆಚ್ಚು ಅಂಕ ಗಳಿಸಿ ಮೆರಿಟ್‌ ಆಧಾರದಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳಿಗೆ ಅರಸು ವೈದ್ಯಕೀಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯು ಸೀಟು ನಿರಾಕರಿಸಿದ್ದ ಆರೋಪ ಕೇಳಿಬಂದಿತ್ತು.

ಈ ವಿಚಾರವಾಗಿ ವಿದ್ಯಾರ್ಥಿಗಳ ಪೋಷಕರು ಹಾಗೂ ಆಡಳಿತ ಮಂಡಳಿ ಸದಸ್ಯರ ನಡುವೆ ಪ್ರವೇಶಾತಿ ಪ್ರಕ್ರಿಯೆ ಸಂದರ್ಭದಲ್ಲೇ ಜಟಾಪಟಿ ನಡೆದಿತ್ತು. ಈ ಸಂಬಂಧ ಪೋಷಕರು ಆಡಳಿತ ಮಂಡಳಿ ವಿರುದ್ಧ ನಗರದ ಗಲ್‌ಪೇಟೆ ಪೊಲೀಸ್‌ ಠಾಣೆಗೆ ಆ.30ರಂದು ದೂರು ಕೊಟ್ಟಿದ್ದರು. ಅಲ್ಲದೇ, ಆಡಳಿತ ಮಂಡಳಿ ಸದಸ್ಯರು ಹೆಚ್ಚಿನ ವಂತಿಗೆ ಕೇಳಿದ್ದರು ಎಂದು ಪೋಷಕರು ಆರೋಪಿಸಿದ್ದರು.

ಹೀಗಾಗಿ ಪ್ರಥಮ ವರ್ಷದ ವೈದ್ಯಕೀಯ ಕೋರ್ಸ್‌ನ ಪ್ರವೇಶಾತಿಯಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಐ.ಟಿ ಅಧಿಕಾರಿಗಳು ದಾಳಿ ವೇಳೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.