ADVERTISEMENT

ಕೆ.ಸಿ ರೆಡ್ಡಿ ಸ್ಮಾರಕಕ್ಕೆ ₹ 2 ಕೋಟಿ ಬಿಡುಗಡೆ

30 ಎಕರೆ ಭೂಮಿ ಗುರುತು: ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:25 IST
Last Updated 7 ಜುಲೈ 2020, 15:25 IST
ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮತ್ತು ಕೆಜಿಎಫ್‌ ಶಾಸಕಿ ಎಂ.ರೂಪಕಲಾ ಕೋಲಾರದಲ್ಲಿ ಮಂಗಳವಾರ ಸಭೆ ನಡೆಸಿದರು.
ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮತ್ತು ಕೆಜಿಎಫ್‌ ಶಾಸಕಿ ಎಂ.ರೂಪಕಲಾ ಕೋಲಾರದಲ್ಲಿ ಮಂಗಳವಾರ ಸಭೆ ನಡೆಸಿದರು.   

ಕೋಲಾರ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಸ್ಮರಣಾರ್ಥ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸ್ಮಾರಕ ನಿರ್ಮಿಸುವ ಸಂಬಂಧ ಶಾಸಕಿ ಎಂ.ರೂಪಕಲಾ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಜತೆಗೆ ಸಭೆ ನಡೆಸಿದರು.

‘ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ₹ 2 ಕೋಟಿ ಬಿಡುಗಡೆ ಮಾಡಿದ್ದು, 30 ಎಕರೆ ಭೂಮಿ ಗುರುತಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭವನದ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಲು ಸಿದ್ಧವಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಕೆ.ಸಿ.ರೆಡ್ಡಿ ಸ್ಮಾರಕ ನಿರ್ಮಿಸುವ ಮೂಲಕ ಕ್ಯಾಸಂಬಳ್ಳಿಯನ್ನು ಪ್ರವಾಸೋದ್ಯಮ ತಾಣವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸ್ಮಾರಕ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ವಸಂತಮ್ಮ ವಿವರಿಸಿದರು.

ADVERTISEMENT

‘ಕೆ.ಸಿ.ರೆಡ್ಡಿ ಸ್ಮಾರಕವು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಣ ನೀಡುವ ವಸ್ತು ಸಂಗ್ರಹಾಲಯ, ಭವ್ಯವಾದ ಸೌಧ ಸೇರಿದಂತೆ ಐತಿಹಾಸಿಕ ಚಿತ್ರಣ ಒಳಗೊಂಡಿರಬೇಕು. ಶೀಘ್ರವೇ ಡಿಪಿಆರ್‌ ಸಿದ್ಧಪಡಿಸಿ’ ಎಂದು ಶಾಸಕಿ ರೂಪಕಲಾ ಸೂಚಿಸಿದರು.

ವಜ್ರ ಕವಚಕ್ಕೆ ಅಸ್ತು: ‘ಪುರಾಣ ಪ್ರಸಿದ್ಧ ಗುಟ್ಟಹಳ್ಳಿ ಮೂಲ ದೇವರಿಗೆ ವಜ್ರ ಕವಚ ಮಾಡಿಸುವುದು ಭಕ್ತರ ಆಶಯವಾಗಿದ್ದು, ಇದಕ್ಕಾಗಿ ದೇವಸ್ಥಾನಕ್ಕೆ ಬಂದಿರುವ 70 ಕೆ.ಜಿ ಬೆಳ್ಳಿಯನ್ನು ಬಳಸಿಕೊಳ್ಳಬಹುದು’ ಎಂದು ರೂಪಕಲಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಮುಜರಾಯಿ ತಹಶೀಲ್ದಾರ್ ನಾಗವೇಣಿ ಅವರಿಗೆ ಸೂಚಿಸಿದರು.

‘ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮೋದನೆ ಸಿಗುವ ನಿರೀಕ್ಷಿಯಿದೆ’ ಎಂದು ನಾಗವೇಣಿ ಮಾಹಿತಿ ನೀಡಿದರು.

ಮರಗಳ ತೆರವು: ‘ರಾಮಸಾಗರ ಮತ್ತು ಬೇತಮಂಗಲ ಕೆರೆಗೆ ಕೆ.ಸಿ ವ್ಯಾಲಿ ನೀರು ಬರುತ್ತಿರುವುದರಿಂದ ಕೆರೆಯಂಗಳದ ಮರಗಳನ್ನು ತೆರವು ಮಾಡಬೇಕು. ಈ ಕಾರ್ಯಕ್ಕೆ ಬೆಮಲ್ ವಾಹನಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದು, ವಾಹನಗಳಿಗೆ ಅಗತ್ಯವಿರುವ ಡೀಸೆಲ್‌ ಖರೀದಿಗೆ ಶಾಸಕರ ನಿಧಿ ಹಣ ಬಳಸಿಕೊಳ್ಳುತ್ತೇವೆ’ ಎಂದು ರೂಪಕಲಾ ಹೇಳಿದರು. ಈ ಪ್ರಸ್ತಾವಕ್ಕೆ ಒಪ್ಪದ ಜಿಲ್ಲಾಧಿಕಾರಿ, ‘ಶಾಸಕರ ನಿಧಿ ಹಣವನ್ನು ಡೀಸೆಲ್‌ಗೆ ಬಳಕೆ ಮಾಡಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಭೂ ಸ್ವಾಧೀನ: ‘1970ರಲ್ಲಿ ಬೆಮಲ್ ಸ್ಥಾಪನೆಗೆ ಬಿಜಿಎಂಲ್‌ನ 1,874 ಎಕರೆ ಜಮೀನು ನೀಡಲಾಗಿದ್ದು, ಇದರಲ್ಲಿ 974 ಎಕರೆ ಬಳಕೆಯಾಗದೆ ಉಳಿದಿದೆ. ಇತ್ತೀಚೆಗೆ ಈ ಸ್ಥಳ ಪರಿಶೀಲಿಸಿದ ನೀತಿ ಆಯೋಗದ ಸದಸ್ಯರು ಬೆಮಲ್‌ನ ಖಾಲಿ ಜಮೀನನ್ನು ಸರ್ಕಾರಕ್ಕೆ ವಾಪಸ್ ಮಾಡುವಂತೆ ಸೂಚಿಸಿದ್ದಾರೆ. ಈ ಜಮೀನಿನಲ್ಲಿ ರಾಜ್ಯ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ’ ಎಂದು ರೂಪಕಲಾ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರ ಬೆಮಲ್‌ ಮೇಲಿರುವ ಷೇರು ಹಣ ಸಂಪೂರ್ಣವಾಗಿ ಹಿಂಪಡೆಯಲಿದೆ. ಆಗ ಸಾವಿರಾರು ಎಕರೆ ಭೂಮಿ ಖಾಸಗಿ ವ್ಯಕ್ತಿಗಳ ಕೈ ಸೇರುತ್ತದೆ. ಇದನ್ನು ತಪ್ಪಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಭೂ ಸ್ವಾಧೀನಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ನಾರಾಯಣರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.