ADVERTISEMENT

ವೈದ್ಯಕೀಯ ಸಲಕರಣೆಗೆ ₹ 2.95 ಕೋಟಿ: ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

ಸಿಆರ್‌ಎಫ್‌ನ ಹಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 13:05 IST
Last Updated 3 ಏಪ್ರಿಲ್ 2020, 13:05 IST
ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸುವ ಪ್ರಚಾರದ ವಾಹನಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೋಲಾರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸುವ ಪ್ರಚಾರದ ವಾಹನಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೋಲಾರದಲ್ಲಿ ಶುಕ್ರವಾರ ಚಾಲನೆ ನೀಡಿದರು.   

ಕೋಲಾರ: ‘ಕೊರೊನಾ ಸೋಂಕಿನ ಚಿಕಿತ್ಸೆಗೆ ಜಿಲ್ಲೆಗೆ ತುರ್ತಾಗಿ ಅಗತ್ಯವಿರುವ ವೆಂಟಿಲೇಟರ್ ಸೇರಿದಂತೆ ಇತರೆ ವೈದ್ಯಕೀಯ ಸಲಕರಣೆಗಳ ಖರೀದಿಗಾಗಿ ಆರೋಗ್ಯ ಇಲಾಖೆಗೆ ಪ್ರಾಕೃತಿಕ ವಿಕೋಪ ನಿಧಿಯಿಂದ (ಸಿಆರ್‌ಎಫ್‌) ₹ 2.95 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಕೊರೊನಾ ಸೋಂಕು ಕುರಿತು ಜಾಗೃತಿ ಮೂಡಿಸುವ ಪ್ರಚಾರದ ವಾಹನಗಳಿಗೆ ಇಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ತುರ್ತು ಸಂದರ್ಭದ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆ ಮತ್ತು ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ 10 ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಜನರು ಮೇ ಅಂತ್ಯದವರೆಗೂ ಸಾಕಷ್ಟು ಎಚ್ಚರಿಕೆಯಿಂದಿರಬೇಕು’ ಎಂದರು.

‘ಮಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ 1,500 ಮಂದಿ ಮೀನುಗಾರರನ್ನು ಜಿಲ್ಲೆಯ ಗಡಿ ಭಾಗದ ನಂಗಲಿ ಚೆಕ್‌ಪೋಸ್ಟ್‌ ಬಳಿ ಚಿತ್ತೂರು ಪೊಲೀಸರು ತಡೆದಿದ್ದರು. ಆ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿರಬಹುದೆಂಬ ಅನುಮಾನದಲ್ಲಿ ಆಂಧ್ರಪ್ರದೇಶ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದರು. ಬಳಿಕ ಆಂಧ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಸೋಂಕಿನ ಲಕ್ಷಣ ಗೊಚರಿಸದ ಕಾರಣ ಆಂಧ್ರಪ್ರವೇಶಿಸಲು ಅನುಮತಿ ನೀಡಿದರು’ ಎಂದು ವಿವರಿಸಿದರು.

ADVERTISEMENT

‘ಆ ಕಾರ್ಮಿಕರಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ತಗುಲಿದ್ದರೂ ಜಿಲ್ಲೆಯಾದ್ಯಂತ ಹರಡುವ ಅಪಾಯವಿತ್ತು. ಈ ಕಾರ್ಮಿಕರ ವಿಚಾರದಲ್ಲಿ ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆಯಿಟ್ಟು, ಸಂಭವನೀಯ ಅಪಾಯ ತಪ್ಪಿಸಿತು’ ಎಂದು ಅಭಿಪ್ರಾಯಪಟ್ಟರು.

‘ವಿಶ್ವದ ದೊಡ್ಡಣ್ಣ ಅಮೆರಿಕವು ಕೋವಿಡ್‌–19 ಜಾಗೃತಿಯಲ್ಲಿ ನಿರ್ಲಕ್ಷ್ಯತೆ ವಹಿಸಿದ್ದರಿಂದ ಇಂದು ಭಾರಿ ದಂಡ ತೆರುವಂತಾಗಿದೆ. ಅಲ್ಲಿ ಸದ್ಯ ತುರ್ತು ನಿರ್ಗಾ ಘಟಕಗಳಲ್ಲಿ ಒಂದೇ ಒಂದು ಬೆಡ್‌ ಸಹ ಖಾಲಿಯಿಲ್ಲ. ಭಾರತದಲ್ಲಿ ಆರಂಭದಲ್ಲೇ ಮುನ್ನೆಚ್ಚರಿಕೆ ವಹಿಸಿದ್ದರಿಂದ ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ಸುಧಾರಣೆ ಕಾಣುತ್ತಿದ್ದೇವೆ’ ಎಂದರು.

ಸುಶಿಕ್ಷಿತರಿಂದ ಉಲ್ಲಂಘನೆ: ‘ಸಮಸ್ಯೆ ಎದುರಾದಾಗ ಎಲ್ಲರೂ ಒಗ್ಗೂಡಿ ಅದನ್ನು ಸವಾಲೆಂದು ಭಾವಿಸಿ ಪರಸ್ಪರ ಸಹಕಾರ ಮನೋಭಾವದಲ್ಲಿ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಆದರೆ, ಸುಶಿಕ್ಷಿತರೇ ದಿಗ್ಬಂಧನ ಆದೇಶ ಉಲ್ಲಂಘಿಸುತ್ತಿದ್ದಾರೆ. ಅವರ ಉದ್ಧಟತನದಿಂದ ಸಮಸ್ಯೆ ಉಂಟಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಿಗ್ಬಂಧನ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಬಡವರ ನೆರವಿಗೆ ಧಾವಿಸಬೇಕು. ಪಡಿತರ ಆಹಾರ ಪದಾರ್ಥಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕಿದೆ. ಆದರೆ, ಕೈಚೀಲ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಜನರು ಪಡಿತರ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಆಹಾರ ಪದಾರ್ಥ ಪಡೆಯಬಹುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಮಹಮ್ಮದ್‌ ಸುಜಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಪಾಟೀಲ್, ರಾಜ್ಯ ರೆಡ್‌ಕ್ರಾಸ್‌ ಸಮಿತಿ ಸದಸ್ಯ ನಾಗಶೇಖರ್, ಜಿಲ್ಲಾ ರೆಡ್‌ಕ್ರಾಸ್‌ ಅಧ್ಯಕ್ಷ ಗೋಪಾಲ್ ಕೃಷ್ಣೇಗೌಡ, ಉಪಾಧ್ಯಕ್ಷ ಆರ್.ಶ್ರೀನಿವಾಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.